ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವತಿಯಿಂದ `ಪರಿಸರ’ ಕಾರ್ಯಕ್ರಮ
ಮೈಸೂರು

ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವತಿಯಿಂದ `ಪರಿಸರ’ ಕಾರ್ಯಕ್ರಮ

July 7, 2018

ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ 550 ಸಸಿಗಳನ್ನು ನೆಟ್ಟರು

ಮೈಸೂರು: ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸಂಸ್ಥೆಯು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಗ್ರಾಹಕರ ಪರಿಷತ್ತು, ಅರಣ್ಯ ಇಲಾಖೆ ಸಹಯೋಗದಲ್ಲಿ ಮೈಸೂರಿನ ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ ಶುಕ್ರವಾರ 550 ಸಸಿಗಳನ್ನು ನೆಡಲಾಯಿತು.

ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಸಸಿ ನೆಟ್ಟು, ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈದಾನದ ಸುತ್ತಲ ಪ್ರದೇಶದಲ್ಲಿ ಮಹಾಘನಿ, ಸ್ಪಥೋಡಿಯಾ, ಹುಣಿಸೆ, ನೇರಳೆ, ಬೇವು ಇನ್ನಿತರ ವಿವಿಧ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷೆ ಉಮಾ ಮಹೇಶ್, ಇನ್ನರ್ ವ್ಹೀಲ್ ಕ್ಲಬ್‍ನ ರಾಷ್ಟ್ರೀಯ ಅಧ್ಯಕ್ಷರು, ಪರಿಸರ ರಕ್ಷಣೆಯಡಿ ಸಸಿಗಳನ್ನು ನೆಡುವಂತೆ ನೀಡಿರುವ ಈ ವರ್ಷದ ಕರೆಯಂತೆ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದರ ಮೊದಲ ಕಾರ್ಯಕ್ರಮವಾಗಿ ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ 1500 ಸಸಿಗಳನ್ನು ನೆಡುವ ಯೋಜನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ್ದು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಂದು 550 ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ.
ಇದಕ್ಕಾಗಿ ಮುಡಾ ಅಧಿಕಾರಿಗಳ ಸಹಕಾರದಲ್ಲಿ ದಸರಾ ಕವಾಯತು ಮೈದಾನದ ಅವರಣದಲ್ಲಿ ಅರಣ್ಯ ಇಲಾಖೆ 1500 ಉಚಿತ ಸಸಿಗಳನ್ನು ನೀಡಿದೆ. ಅಲ್ಲದೆ ಮೈದಾನದ ಆವರಣವನ್ನು ಇನ್ನಷ್ಟು ಸುಂದರಗೊಳಿಸುವ ಉದ್ದೇಶವನ್ನೂ ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಡಾ.ಸಾರಿಕಾ ಪ್ರಸಾದ್, ಉಪಾಧ್ಯಕ್ಷೆ ಆಶಾ ದೇವೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗುರುರಾಜ್, ಇನ್ನರ್ ವ್ಹೀಲ್ ಮೈಸೂರು ಕಾರ್ಯದರ್ಶಿ ಗೀತಾಶ್ರೀ, ಸೆಂಟ್ರಲ್ ಕ್ಲಬ್ ಅಧ್ಯಕ್ಷೆ ಅನಿತಾ ಸುರೇಶ್, ಮೈಸೂರು ಗ್ರಾಹಕರ ಪರಿಷತ್ ಕಾರ್ಯದರ್ಶಿ ಕೆ.ವೆಂಕಟೇಶ್, ಕಾರ್ಯಕಾರಿ ಸದಸ್ಯ ಕೋ.ಸು.ನರಸಿಂಹಮೂರ್ತಿ, ಅರಣ್ಯ ಇಲಾಖೆ ನಗರ ಹಸಿರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಸುರೇಶ್‍ಬಾಬು, ಎಇಇ ಸಿ.ಎನ್.ಲಕ್ಷ್ಮೀಶ್, ಜೆಇ ವಿಜಯಕುಮಾರ್, ಇಂಜಿನಿಯರ್ ಕೆ.ಮಣಿ ಇನ್ನಿತರರು ಉಪಸ್ಥಿತರಿದ್ದರು.

Translate »