112 ತುರ್ತು ಸ್ಪಂದನ ಸೇವೆಗೆ ಎಸ್ಪಿ ಚಾಲನೆ
ಚಾಮರಾಜನಗರ

112 ತುರ್ತು ಸ್ಪಂದನ ಸೇವೆಗೆ ಎಸ್ಪಿ ಚಾಲನೆ

May 3, 2021

ಚಾಮರಾಜನಗರ, ಮೇ 2-ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯದ ಮಹತ್ವಾಕಾಂಕ್ಷಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ‘112’ ಯೋಜನೆ ಯಡಿ ಜಿಲ್ಲೆಗೆ ನೀಡಿರುವ ಇಆರ್ ಎಸ್‍ಎಸ್ ತುರ್ತು ವಾಹನಗಳ ಸೇವೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಚಾಲನೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಸಿರು ನಿಶಾನೆ ತೋರುವ ಮೂಲಕ ವಾಹನಗಳ ಸೇವೆಗೆ ಚಾಲನೆ ನೀಡಿದ ಅವರು, ‘112’ ಸೇವೆ ಕುರಿತ ಪೋಸ್ಟರ್, ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಯಾವುದೇ ತುರ್ತು ಸಂದರ್ಭದಲ್ಲೂ ಕರೆ ಮಾಡಲು ದೇಶಾದ್ಯಂತ ‘112’ ಸಂಖ್ಯೆ ಯೊಂದನ್ನೇ ಬಳಸಲಾಗುತ್ತದೆ. ತುರ್ತು ದೂರವಾಣಿ ಸಂಖ್ಯೆಗಳಾದ 100(ಪೊಲೀಸ್), 101 (ಅಗ್ನಿಶಾಮಕ ಮತ್ತು ರಕ್ಷಣೆ) ಹಾಗೂ ಇತರೆ ತುರ್ತು ದೂರವಾಣಿ ಸಂಖ್ಯೆಗಳನ್ನು ‘112’ರಲ್ಲಿ ಏಕೀಕೃತಗೊಳಿಸಲಾಗಿದೆ. ಅನಾರೋಗ್ಯ, ವೈದ್ಯಕೀಯ ಸಂದರ್ಭ ಹೊರತುಪಡಿಸಿ, ಅಗ್ನಿ ಅನಾಹುತ, ವಿಪತ್ತು, ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಜಗಳ, ಅಕ್ರಮ ಮದ್ಯ ಮಾರಾಟ, ಜೂಜಾಟ, ಡ್ರಗ್ಸ್ ಮಾರಾಟ, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಕ್ರಿಕೆಟ್ ಬೆಟ್ಟಿಂಗ್, ಹಿರಿಯ ನಾಗರಿಕರ ರಕ್ಷಣೆ ಸೇರಿ ದಂತೆ ಇನ್ನಿತರೆ ಸಂದರ್ಭಗಳಲ್ಲಿ ಸಾರ್ವ ಜನಿಕರು ‘112’ ಸಂಖ್ಯೆಗೆ ಕರೆ ಮಾಡಿದರೆ ನೆರವಿಗೆ ಧಾವಿಸಲಾಗುವುದು ಎಂದು ಎಸ್ಪಿ ತಿಳಿಸಿದರು. ಜನತೆ ‘112’ ಕ್ಕೆ ಕರೆ ಮಾಡಿದರೆ, ಮೊದಲಿಗೆ ಕರೆಯು ಬೆಂಗ ಳೂರಿನಲ್ಲಿರುವ ತುರ್ತು ಪ್ರತಿಕ್ರಿಯೆ ಕೇಂದ್ರಕ್ಕೆ ತಲುಪಿ, ಅಲ್ಲಿಂದ ಜಿಲ್ಲಾ ಕಚೇರಿಯಲ್ಲಿನ ಕಂಟ್ರೋಲ್ ರೂಂಗೆ ಬರಲಿದೆ. ಕೂಡಲೇ ಯಾವ ಭಾಗದಿಂದ ಕರೆ ಬಂದಿರುತ್ತದೆಯೋ ತಿಳಿದು ಘಟನೆಗೆ ಸಂಬಂಧಿಸಿರುವ ಸ್ಥಳಕ್ಕೆ ತುರ್ತಾಗಿ ವಾಹನಗಳು ತೆರಳಲಿವೆ ಎಂದು ವಿವರಿಸಿದರು. ತುರ್ತು ಸ್ಪಂದನ ವ್ಯವಸ್ಥೆಗಾಗಿ 6 ಹೊಸ ಸ್ಕಾರ್ಪಿಯೋ ವಾಹನಗಳನ್ನು ಜಿಲ್ಲೆಗೆ ನೀಡಲಾಗಿದೆ. ಈಗಾಗಲೇ ಹೆದ್ದಾರಿ ಗಸ್ತು ಕಾರ್ಯಕ್ಕೆ ನಿಯೋಜಿಸಿರುವ 4 ವಾಹನಗಳನ್ನು ತುರ್ತು ಸ್ಪಂದನ ಸೇವಾ ವ್ಯವಸ್ಥೆಗಾಗಿ ಪರಿವರ್ತಿಸಲಾಗಿದೆ. ದಿನಕ್ಕೆ 3 ಪಾಳಿಯಲ್ಲಿ ವಾಹನಗಳು ಸೇವೆ ನೀಡಲಿದ್ದು, ಸಾರ್ವಜನಿಕರು ತುರ್ತು ಸಂದರ್ಭ ಎದುರಾದಾಗ ತಪ್ಪದೇ ‘112’ ಸಂಖ್ಯೆಗೆ ಕರೆ ಮಾಡಿ ಸೇವೆ ಪಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದನ್ಣನವರ್, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ನಾಗರಾಜು, ಇನ್ನಿತರ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Translate »