ಮೈಸೂರಿಂದ ಬಿಹಾರಕ್ಕೆ 1164 ವಲಸೆ ಕಾರ್ಮಿಕರೊಂದಿಗೆ ಸಂಚರಿಸಿದ ಶ್ರಮಿಕ್ ರೈಲು
ಮೈಸೂರು

ಮೈಸೂರಿಂದ ಬಿಹಾರಕ್ಕೆ 1164 ವಲಸೆ ಕಾರ್ಮಿಕರೊಂದಿಗೆ ಸಂಚರಿಸಿದ ಶ್ರಮಿಕ್ ರೈಲು

May 25, 2020

ಮೈಸೂರು, ಮೇ 24(ಎಂಟಿವೈ)-ಲಾಕ್‍ಡೌನ್ ನಿಂದಾಗಿ ಕೆಲಸವಿಲ್ಲದೇ ಕಳೆದ ಎರಡು ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಹಾರದ 1164 ವಲಸೆ ಕಾರ್ಮಿ ಕರನ್ನು ಭಾನುವಾರ ಮಧ್ಯಾಹ್ನ ಶ್ರಮಿಕ್ ವಿಶೇಷ ರೈಲು ಮೂಲಕ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಿಂದ ಬಿಹಾರಕ್ಕೆ ಕಳುಹಿಸಲಾಯಿತು.

ಮೈಸೂರು ನಗರ, ಹುಣಸೂರು, ಮಂಡ್ಯ, ಮದ್ದೂರು ಸೇರಿದಂತೆ ವಿವಿಧೆಡೆ ಕಾರ್ಖಾನೆ ಹಾಗೂ ಕಟ್ಟಡ ಕಾರ್ಮಿಕ ವೃತ್ತಿ ಮಾಡಿ ಜೀವನ ಸಾಗಿಸುತ್ತಿದ್ದ ಬಿಹಾರ ಮೂಲದ 1164 ಕಾರ್ಮಿಕರು ತವರೂರಿಗೆ ತೆರಳಲು ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಬಿಹಾರ ಸರ್ಕಾರ ಒಪ್ಪಿಗೆ ಸೂಚಿಸಿದ ಮೇರೆಗೆ ಆ ರಾಜ್ಯದ ವಲಸೆ ಕಾರ್ಮಿ ಕರನ್ನು ಕಳುಹಿಸಿಕೊಡಲು ಮೈಸೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹುಣ ಸೂರು, ಮಂಡ್ಯ, ಮದ್ದೂರು ಹಾಗೂ ಮೈಸೂರಿನ ವಿವಿಧೆಡೆ ನೆಲೆಸಿದ್ದ ಬಿಹಾರ ಮೂಲದ ಎಲ್ಲಾ 1164 ವಲಸೆ ಕಾರ್ಮಿಕರನ್ನು ಸಾರಿಗೆ ಸಂಸ್ಥೆಯ ಬಸ್ ಮೂಲಕ ಅಶೋಕಪುರಂ ರೈಲು ನಿಲ್ದಾಣಕ್ಕೆ ಕರೆತರಲಾಯಿತು.

ಮೈಸೂರಿನ ಬನ್ನಿಮಂಟಪದ ಪಂಜಿನ ಕವಾ ಯಿತು ಮೈದಾನದಿಂದ ನಗರದ ವಿವಿಧೆಡೆ ಕಾರ್ಖಾನೆ ಗಳಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ನೌಕರ ರನ್ನು ರೈಲು ನಿಲ್ದಾಣಕ್ಕೆ ಬೆಳಿಗ್ಗೆ 9 ಗಂಟೆಯಿಂದಲೇ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಅಶೋಕಪುರಂ ರೈಲು ನಿಲ್ದಾಣಕ್ಕೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಪ್ರಮಾಣಪತ್ರ ವಿತರಿಸಿದರು. ಆ ಬಳಿಕವಷ್ಟೇ ರೈಲ್ವೆ ಇಲಾಖೆ ವಲಸೆ ಕಾರ್ಮಿಕರಿಗೆ ಟಿಕೆಟ್ ನೀಡಿ ಕಾಯ್ದಿರಿಸಿದ ಬೋಗಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಮಾಡಿಕೊಟ್ಟಿತು.

ವಲಸೆ ಕಾರ್ಮಿಕರು ತವರೂರಿಗೆ ಸೇರಲು ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದ ಹಿನ್ನೆಲೆಯಲ್ಲಿ ಭಾನು ವಾರ ಮೈಸೂರಿನಿಂದ ಬಿಹಾರಕ್ಕೆ ಪ್ರಯಾಣಿಸಿದ ಎಲ್ಲಾ ಕಾರ್ಮಿಕರಿಗೂ ಪ್ರಯಾಣ ದರವನ್ನು ರಾಜ್ಯ ಸರ್ಕಾರವೇ ಭರಿಸಿತು. ಒಬ್ಬ ಪ್ರಯಾಣಿಕರಿಗೆ 900 ರೂ. ಪ್ರಯಾಣ ದರ ನಿಗದಿಪಡಿಸಲಾಗಿತ್ತು. ಇಂದು ಮಧ್ಯಾಹ್ನ 2 ಗಂಟೆಗೆ ಪ್ರಯಾಣ ಆರಂಭಿಸಿದ ಶ್ರಮಿಕ್ ವಿಶೇಷ ರೈಲಿನಲ್ಲಿ 22 ಎಲ್‍ಹೆಚ್‍ಬಿ ಕೋಚ್‍ಗಳಿದ್ದವು. ಒಂದೊಂದು ಕೋಚ್‍ನಲ್ಲಿ 80 ಮಂದಿ ಪ್ರಯಾಣಿಸಿದರು. ಧರ್ಮಾವರಂ, ಪಾಟ್ನಾ ಮಾರ್ಗವಾಗಿ 2488 ಕಿ.ಮೀ. ಪ್ರಯಾಣಿಸುವ ಈ ರೈಲು ಮೇ 26ರಂದು ಮಧ್ಯಾಹ್ನ 1.10ಕ್ಕೆ ಬಿಹಾರದ ಫೂರ್ನಿಯಾ ರೈಲು ನಿಲ್ದಾಣವನ್ನು ತಲುಪಲಿದೆ.

ಅಶೋಕಪುರಂ ರೈಲು ನಿಲ್ದಾಣಕ್ಕೆ ಬಂದ ವಲಸೆ ಕಾರ್ಮಿಕರಿಗೆ ರೋಟರಿ ಕ್ಲಬ್ ಆಫ್ ಮೈಸೂರು ಸಂಸ್ಥೆ ಊಟ ಹಾಗೂ ನೀರಿನ ಬಾಟಲ್ ನೀಡುವ ವ್ಯವಸ್ಥೆ ಮಾಡಿತ್ತು. ಈ ಕಾರ್ಮಿಕರು ಬಿಹಾರವನ್ನು ತಲುಪುವವರೆಗೂ ಐಆರ್‍ಸಿಟಿಸಿ ವತಿಯಿಂದ ಊಟ, ತಿಂಡಿ ಪೂರೈಸಲಾಗುತ್ತದೆ. ಭದ್ರತೆಗಾಗಿ 6 ಮಂದಿ ಆರ್‍ಪಿಎಫ್ ಸಿಬ್ಬಂದಿಯನ್ನು ನಿಯೋಜಿಸ ಲಾಗಿದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ರೈಲ್ವೆ ಇಲಾಖೆಯ ಡಿವಿಜನಲ್ ಕಮರ್ಷಿಯಲ್ ಮ್ಯಾನೇಜರ್ ಪ್ರಿಯಾಶೆಟ್ಟಿ ಬೆಳಿಗ್ಗೆ ಯಿಂದ ಮಧ್ಯಾಹ್ನ ದವರೆಗೂ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿಯೇ ಉಪಸ್ಥಿತರಿದ್ದು, ವಲಸೆ ಕಾರ್ಮಿಕ ರನ್ನು ಬೀಳ್ಕೊ ಟ್ಟರು. ಶನಿವಾರ ಹಾಸನದಿಂದ 1520 ಮಂದಿ ವಲಸೆ ಕಾರ್ಮಿಕರನ್ನು ಬಿಹಾರದ ಕಟಿಹಾರ್‍ಗೆ ಶ್ರಮಿಕ್ ವಿಶೇಷ ರೈಲೊಂದು ಕರೆದೊಯ್ದಿತು.

Translate »