ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಆಯುಕ್ತ ಡಾ.ಡಿ.ಬಿ.ನಟೇಶ್ 56 ಪುಟಗಳ 2022-23ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿದರು.
ಮೈಸೂರು, ಮಾ.31 (ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವು ಪ್ರಸಕ್ತ ಸಾಲಿ ನಲ್ಲಿ 129.76 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿ ಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಆಯುಕ್ತ ಡಾ.ಡಿ.ಬಿ. ನಟೇಶ್ ಇಂದು 56 ಪುಟಗಳ 2022-23ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿದರು. ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ 1,821.42 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಿಸಲುದ್ದೇಶಿಸಿ, ಪ್ರಾಧಿಕಾರದಿಂದ ಮೈಸೂರಿನ ಅಭಿವೃದ್ಧಿಗಾಗಿ 1,691.67 ಕೋಟಿ ರೂ. ವೆಚ್ಚ ಮಾಡಲು ಉದ್ದೇ ಶಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 129.76 ಕೋಟಿ ರೂ. ಉಳಿತಾಯ ಪ್ರಸ್ತಾಪಿಸಲಾಗಿದೆ.
ಆದಾಯದ ಮೂಲಗಳು: ಬಡಾವಣೆ ನಕ್ಷೆ ಶುಲ್ಕ, ಮನೆ ಮತ್ತು ನಿವೇಶನ ಕಂದಾಯ, ಖಾತಾ ನೋಂದಣಿ ಹಾಗೂ ವರ್ಗಾವಣೆ ಶುಲ್ಕಗಳಿಂದ 7,205 ಲಕ್ಷ ರೂ., ಕೆರೆ ಪುನಶ್ಚೇತನ ಶುಲ್ಕದಿಂದ 1,040 ಲಕ್ಷ ರೂ., ಕೊಳಚೆ ಪ್ರದೇಶ ಅಭಿವೃದ್ಧಿ ಶುಲ್ಕದಿಂದ 80 ಲಕ್ಷ ರೂ. ನಿವೇಶನ, ಸಿಎ ನಿವೇಶನ ಹಂಚಿಕೆ ಹರಾಜು, ನಿಯಮ ಉಲ್ಲಂ ಘನೆ ದಂಡ ಶುಲ್ಕದಿಂದ 1,24,627.50 ಲಕ್ಷ ರೂ, ವಾಣಿಜ್ಯ ಸಂಕೀರ್ಣ ಬಾಡಿಗೆಯಿಂದ 4,892 ಲಕ್ಷ ರೂ. ನಿಶ್ಚಿತ ಠೇವಣಿ ವಾರ್ಷಿಕ ಬಡ್ಡಿ 36,341.10 ಲಕ್ಷ ರೂ. ತುಂಡು ಜಾಗ ಮಂಜೂರಾತಿಯಿಂದ 550 ಲಕ್ಷ ರೂ., ನಕ್ಷೆ ಅನುಮೋದಿಸುವ ವೇಳೆ ವಿಧಿಸುವ ವಿವಿಧ ಶುಲ್ಕದಿಂದ 2,570 ಲಕ್ಷ ರೂ., ವಿವಿಧ ದಾಖಲೆ ನೀಡಲು ಸಂಗ್ರಹಿಸುವ ಸೇವಾ ಶುಲ್ಕದಿಂದ 80.15 ರೂ., ರೋಡ್ ಕಟ್ಟಿಂಗ್, ಎನ್‍ಒಸಿ ಜಾಹೀರಾತು ಶುಲ್ಕಗಳಿಂದ 632 ಲಕ್ಷ ರೂ., ನಗರದ ಹೊರಗಿನ ಬಡಾವಣೆ ನಿವಾಸಿಗಳಿಂದ ಸಂಗ್ರಹಿಸುವ ಕುಡಿಯುವ ನೀರಿನ ಶುಲ್ಕದಿಂದ 100 ಲಕ್ಷ ರೂ. ಅರಣ್ಯೀಕರಣಕ್ಕಾಗಿ ಸಸಿ ಬೆಳೆಸಲು ವಸೂಲಿ ಮಾಡುವ ಶೇ.2 ರಷ್ಟು ಹಸಿರು ಶುಲ್ಕದಿಂದ 100 ಲಕ್ಷ ರೂ. ಹಾಗೂ ಕಟ್ಟಡ ತ್ಯಾಜ್ಯ ವಿಲೇವಾರಿ ಶುಲ್ಕದಿಂದ 300 ಲಕ್ಷ ರೂ. ಸೇರಿದಂತೆ 2022-23 ನೇ ಸಾಲಿನಲ್ಲಿ ಒಟ್ಟು 1,82,142.75 ಲಕ್ಷ ರೂ. ಆದಾಯ ಬರುತ್ತದೆ ಎಂದು ಮುಡಾ ನಿರೀಕ್ಷಿಸಿದೆ.
ವೆಚ್ಚದ ಬಾಬ್ತು: ನಿರೀಕ್ಷಿತ ಆದಾಯದಲ್ಲಿ ಪ್ರಾಧಿಕಾರದ ಬಡಾವಣೆಯ ಅಭಿವೃದ್ಧಿ ಕೆಲಸ, ಪಾಲಿಕೆಗೆ ಹಸ್ತಾಂತರಿಸಲು ಬಾಕಿ ಇರುವ ಬಡಾವಣೆಗಳ 325 ವಿವಿಧ ಕಾಮ ಗಾರಿಗಳಿಗೆ 53,406 ಲಕ್ಷ ರೂ. ಖರ್ಚು ಮಾಡಬೇಕಾಗಿದ್ದು, ಸಾಮಾನ್ಯ ಆಡಳಿತ ವೆಚ್ಚ 8,247.09 ಲಕ್ಷ ರೂ.ಗಳಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೆರೆಗಳ ಅಭಿವೃದ್ಧಿಗೆ 900 ಲಕ್ಷ ರೂ., ನಿಧಿ-1, ನಿಧಿ-2, ನಿಧಿ-3, ನಿಧಿ-4 ರಡಿ ಸೇರಿ ಒಟ್ಟಾರೆ ಈ ವರ್ಷ 1,69, 167.09 ಕೋಟಿ ರೂ. ವ್ಯಯ ಮಾಡಲು ಮುಡಾ ಯೋಜನೆ ರೂಪಿಸಿದೆ. ಬಡಾವಣೆಗಳ ಜಂಟಿ ಅಭಿವೃದ್ಧಿಗಾಗಿ 6000 ಲಕ್ಷ ರೂ. ಗುಂಪು ಮನೆ ಯೋಜನೆಗೆ 10,000 ಲಕ್ಷ ರೂ. ಕುಡಿಯುವ ನೀರಿನ ಯೋಜನೆ ಮೇಲ್ದರ್ಜೆಗೇರಿಸಲು 25 ಕೋಟಿ ರೂ. ಪೆರಿಫೆರಲ್ ರಿಂಗ್ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ಅಕ್ಕಮಹಾದೇವಿ ರಸ್ತೆ, ಆರ್.ಟಿ.ನಗರ ರಸ್ತೆ ಸೇರಿದಂತೆ ಹಲವು ವಿಶೇಷ ಯೋಜನೆಗಳಿಗಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮುಡಾ ಅನುದಾನ ಮೀಸಲಿರಿಸಿದೆ. ಹಲವು ಮಾರ್ಪಾಡು ಸಲಹೆ-ಸೂಚನೆಗಳನ್ನು ಪರಿಗಣಿ ಸುವಂತೆ ಕೋರಿದ ಸದಸ್ಯರು ಪ್ರಸಕ್ತ ಸಾಲಿನ ಆಯ-ವ್ಯಯಕ್ಕೆ ಸಮ್ಮತಿ ಸೂಚಿಸಿದರು. ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಬಿ.ಹರ್ಷ ವರ್ಧನ್, ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಡಾ.ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮರಿತಿಬ್ಬೇಗೌಡ, ಸದಸ್ಯರಾದ ಎಸ್.ಬಿ.ಎಂ.ಮಂಜು, ಲಕ್ಷ್ಮೀದೇವಿ, ನವೀನ್ ಕುಮಾರ್, ಜೆ. ಲಿಂಗಯ್ಯ, ಮಾದೇಶ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.