ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ
ಮೈಸೂರು

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

July 7, 2018
  •  ಜು.20ರವರೆಗೆ ಸಿಹಿ ಉತ್ಪನ್ನಗಳಿಗೆ ಶೇ.10ರಷ್ಟು ರಿಯಾಯ್ತಿ
  •  ನಂದಿನಿ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಮಾತ್ರ ಈ ಅವಕಾಶ

ಮೈಸೂರು:  ಯಾವುದೇ ರಾಸಾಯನಿಕ ವಸ್ತು ಬಳಸದ, ಗುಣಮಟ್ಟದ ನಂದಿನಿ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮೈಮುಲ್ ಇಂದಿನಿಂದ ಜು.20ರವರೆಗೆ ‘ನಂದಿನಿ ಸಿಹಿ ಉತ್ಸವ’ ಹಮ್ಮಿಕೊಂಡಿದ್ದು, ಈ ಅವಧಿಯಲ್ಲಿ ನಂದಿನಿ ಸಿಹಿ ತಿಂಡಿಗಳಿಗೆ ಶೇ.10ರಷ್ಟು ರಿಯಾಯಿತಿ ಪ್ರಕಟಿಸಿದೆ.

ಮೈಸೂರು-ಬನ್ನೂರು ಮುಖ್ಯ ರಸ್ತೆಯ ಹಾಲಿನ ಡೈರಿ ಮುಂಭಾಗದ ನಂದಿನಿ ಪಾರ್ಲರ್‍ನಲ್ಲಿ ಶುಕ್ರವಾರ ಬೆಳಿಗ್ಗೆ `ನಂದಿನಿ ಸಿಹಿ ಉತ್ಸವ’ಕ್ಕೆ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಕೆ.ಜಿ.ಮಹೇಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ನಂದಿನಿ ಸಿಹಿ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ 15 ದಿನಗಳ `ನಂದಿನಿ ಸಿಹಿ ಉತ್ಸವ’ ನಡೆಸಲಾಗುತ್ತಿದೆ. ಈ ವೇಳೆ ಗ್ರಾಹಕರಿಗೆ ಶುದ್ಧ, ರುಚಿಕರ ಸಿಹಿ ತಿನಿಸುವ ನೀಡುವುದರೊಂದಿಗೆ ರೈತರ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರಿಗೆ ನೆರವಾಗಬೇಕು. ನಗರದ ಎಲ್ಲಾ ನಂದಿನಿ ಕೌಂಟರ್‍ಗಳಲ್ಲಿ ಸಿಹಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ ಮಾತನಾಡಿ, ‘ನಂದಿನಿ ಸಿಹಿ’ ಉತ್ಸವ ಕೇವಲ ನಂದಿನಿ ಉತ್ಪನ್ನಗಳಿಗೆ ಪ್ರಚಾರ ನೀಡುವ ಉದ್ದೇಶದಿಂದ ಅಲ್ಲ. ಬಹುತೇಕರಿಗೆ ನಂದಿನಿ ಉತ್ಪನ್ನಗಳ ಬಗ್ಗೆ ಮಾಹಿತಿಯೇ ಇಲ್ಲ. ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ನಂದಿನಿ ಉತ್ಪನ್ನಗಳು ರುಚಿಕರವಾಗಿಯೂ, ಶುಚಿಯಾಗಿಯೂ ಇವೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ 130 ನಂದಿನಿ ಪಾರ್ಲರ್‍ಗಳಲ್ಲಿ ನಂದಿನಿ ಉತ್ಪನ್ನಗಳನ್ನು ಶೇ.10ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ನಿತ್ಯ ಸಿಹಿ ಪದಾರ್ಥಗಳಿಂದ 3 ಲಕ್ಷ ವಹಿವಾಟು ನಡೆಯುತ್ತಿದ್ದು, ರಿಯಾಯಿತಿ ಮಾರಾಟದಿಂದ ವಹಿವಾಟು 5 ಲಕ್ಷ ಮುಟ್ಟುವ ನಿರೀಕ್ಷೆ ಇದೆ ಎಂದರು.

ಏನೆಲ್ಲಾ ಇವೆ: ರಾಜ್ಯದ ಎಲ್ಲಾ ನಂದಿನಿ ಪಾರ್ಲರ್‍ಗಳಲ್ಲಿ ಜು.6ರಿಂದ 20ರವರೆಗೆ ನಂದಿನಿ ಉತ್ಪನ್ನಗಳಾದ ಮೈಸೂರು ಪಾಕ್, ಕ್ಯಾಶ್ಯೂ ಬರ್ಫಿ, ಕೊಕೊನೆಟ್ ಬರ್ಫಿ, ಡ್ರೈಫ್ರೂಟ್ಸ್ ಬರ್ಫಿ, ಚಾಕೋಲೆಟ್ ಬರ್ಫಿ, ಬಾದಾಮ್ ಬರ್ಫಿ, ಧಾರವಾಡ ಪೇಡ, ಹಾಲಿನ ಪೇಡ, ಕೇಸರಿ ಪೇಡ, ಏಲಕ್ಕಿ ಪೇಡ, ಬೇಸನ್ ಲಾಡು, ಖೋವಾ ಜಾಮೂನ್, ರಸಗುಲ್ಲಾ, ಪಾಯಸ ಮಿಕ್ಸ್, ಕುಂದಾ ಸಿಹಿಗಳನ್ನು ಶೇ.10ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮೈಮುಲ್ ನಿರ್ದೇಶಕರಾದ ಕೆ.ಎಸ್.ಕುಮಾರ್, ಈರೇಗೌಡ, ಎ.ಟಿ.ಸೋಮಶೇಖರ್, ಮಾರುಕಟ್ಟೆ ವ್ಯವಸ್ಥಾಪಕ ಡಾ.ಎ.ಬಿ.ಲೋಕೇಶ್, ಅಪರ ನಿರ್ದೇಶಕ ಮಲ್ಲಿಕಾರ್ಜುನ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೈಸೂರಿನ ಸಿದ್ದಾರ್ಥ ಬಡಾವಣೆಯ ಹಾಲಿನ ಡೈರಿ ಮುಂಭಾಗದ ನಂದಿನಿ ಪಾರ್ಲರ್‍ನಲ್ಲಿ ಶುಕ್ರವಾರ ನಂದಿನಿ ಸಿಹಿ ಉತ್ಸವಕ್ಕೆ ಮೈಮುಲ್ ಅಧ್ಯಕ್ಷ ಕೆ.ಜಿ.ಮಹೇಶ್ ಚಾಲನೆ ನೀಡಿದರು. ಚಿತ್ರದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ, ಮಾರುಕಟ್ಟೆ ವ್ಯವಸ್ಥಾಪಕ ಡಾ.ಎ.ಬಿ.ಲೋಕೇಶ್ ಹಾಗೂ ನಿರ್ದೇಶಕರುಗಳನ್ನು ಕಾಣಬಹುದು.

ಮೊದಲ ದಿನದಲ್ಲೇ ಗೊಂದಲ…

ನಂದಿನಿ ಸಿಹಿ ಉತ್ಸವದ ಮೊದಲ ದಿನವಾದ ಶುಕ್ರವಾರವೇ ಮೈಸೂರಿನ ಹಲವು ಹಾಲಿನ ಮಳಿಗೆಗಳಲ್ಲಿ ಗ್ರಾಹಕರು ಮಳಿಗೆಯ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಮಳಿಗೆಗಳಲ್ಲಿ ಹಾಲು, ಮೊಸರು, ಲಸ್ಸಿ ಹೊರತುಪಡಿಸಿ ಸಿಹಿ ತಿನಿಸುಗಳಿಗೆ ಶೇ.10ರಷ್ಟು ರಿಯಾಯಿತಿ ಫಲಕಗಳನ್ನು ಹಾಕಿದ್ದರು. ಆದರೆ ಗ್ರಾಹಕರಿಂದ ಮಳಿಗೆಯ ಸಿಬ್ಬಂದಿ ಎಂಆರ್‍ಪಿ ದರವನ್ನೇ ತೆಗೆದುಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿದರೆ ನಾವು ಗುರುವಾರವೇ ಎಂಆರ್‍ಪಿ ದರದಲ್ಲೇ ಸಿಹಿ ತಿನಿಸುಗಳ ಸ್ಟಾಕ್ ತಂದಿದ್ದೇವೆ. ಹಳೆಯ ಸ್ಟಾಕ್ ಖಾಲಿಯಾದರೆ, ರಿಯಾಯಿತಿ ದರದಲ್ಲಿ ಹೊಸ ಸ್ಟಾಕ್ ತರಿಸಿ ನೀಡುತ್ತೇವೆ. ಇಲ್ಲದಿದ್ದರೆ ನಮಗೆ ನಷ್ಟವಾಗುತ್ತದೆ ಎಂದು ಹೇಳಿದರೂ, ಗ್ರಾಹಕರು ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳದೆ ವಾದಕ್ಕಿಳಿದಿದ್ದರು.

Translate »