ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ17 ಸಚಿವರ ಸೇರ್ಪಡೆ
ಮೈಸೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ17 ಸಚಿವರ ಸೇರ್ಪಡೆ

August 21, 2019

ಬೆಂಗಳೂರು, ಆ.20(ಕೆಎಂಶಿ)- ಅಧಿಕಾರ ವಹಿಸಿಕೊಂಡ 26 ದಿನಗಳ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ, 17 ಮಂದಿಯನ್ನು ಸೇರ್ಪಡೆಮಾಡಿ ಕೊಂಡಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ನೂತನ ಸಚಿವರಿಗೆ ಅಧಿಕಾರ ಹಾಗೂ ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.

ಉಭಯ ಸದನದ ಸದಸ್ಯರಲ್ಲದವರು ಹಾಗೂ ಪಕ್ಷೇತರ ಶಾಸಕರೊಬ್ಬರು ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ಹತ್ತು ತಿಂಗಳ ಕಾಲ ಆಡಳಿತ ನಡೆಸಿದ ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ, ಆರ್.ಅಶೋಕ್ ಮತ್ತು ಕೆ.ಎಸ್. ಈಶ್ವರಪ್ಪ ಇಂದು ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿ ಕಂಡರು. ಮೂರು ವಾರಗಳ ನಂತರ ಅಳೆದು ಸುರಿದು ಸಂಪುಟ ವಿಸ್ತರಣೆ ಮಾಡಿದರೂ, ಇದರ ಬೆನ್ನಲ್ಲೇ
ಸಚಿವ ಸ್ಥಾನ ದೊರೆಯದವರಲ್ಲಿ ಅತೃಪ್ತಿ ಹೊಗೆ ಭುಗಿಲೆದ್ದಿದೆ. ಈ ಮೂರು ಮಂದಿ ಅಲ್ಲದೆ ಸಂಪುಟಕ್ಕೆ ಗೋವಿಂದ ಕಾರಜೋಳ,ವಿ.ಸೋಮಣ್ಣ, ಸುರೇಶ್ ಕುಮಾರ್, ಪ್ರಭುಚೌಹಾಣ್, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ಅಶ್ವತ್ಥ ನಾರಾಯಣ್, ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್ ಸೇರ್ಪಡೆಯಾಗಿದ್ದಾರೆ. ಪಕ್ಷೇತರ ಸದಸ್ಯ ನಾಗೇಶ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಉಭಯ ಸದನದ ಸದಸ್ಯರಲ್ಲದ ಲಕ್ಷ ್ಮಣ ಸವದಿ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಒಟ್ಟಾರೆ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಹೆಚ್ಚು ಅವಕಾಶ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಮಾತಿಗೆ ಪಕ್ಷದ ವರಿಷ್ಠರು ಮಣೆ ಹಾಕಿದಂತಿದೆ.

ಇದರ ನಡುವೆ ತಮ್ಮ ಕಟ್ಟಾ ಬೆಂಬಲಿಗರು ಮತ್ತು ಪಕ್ಷದಲ್ಲಿ ಹಿರಿಯತನ ವಿಧಾನಸಭೆಗೆ ಹೆಚ್ಚು ಬಾರಿ ಆಯ್ಕೆಗೊಂಡಿರುವ ಉಮೇಶ್ ಕತ್ತಿ, ಸಿ.ಎಂ.ಉದಾಸಿ, ಎಂ.ಪಿ.ರವೀಂದ್ರ ನಾಥ್, ರೇಣುಕಾಚಾರ್ಯ, ಅರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ,ಗಣಿರೆಡ್ಡಿ ಪಡೆಯ ಪ್ರಮುಖರಾದ ಕರುಣಾಕರ ರೆಡ್ಡಿ,ಎ.ರಾಮದಾಸ್, ಕೆ.ಜಿ. ಬೋಪಯ್ಯ, ಎಸ್.ಆರ್.ವಿಶ್ವನಾಥ್, ತಿಪ್ಪಾರೆಡ್ಡಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಹಿರಿಯರನ್ನು ಸಂಪುಟದಿಂದ ದೂರವಿಡಲಾಗಿದೆ. ಕೊನೆ ಗಳಿಗೆಯಲ್ಲಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವುದರಿಂದ ಉಮೇಶ್ ಕತ್ತಿ ಮತ್ತು ನಿರಾಣಿ ಅವಕಾಶ ವಂಚಿತರಾದರು.

ವೀರಶೈವ ಸಮುದಾಯಕ್ಕೆ ಏಳು ಸಚಿವ ಸ್ಥಾನಗಳು ಲಭ್ಯವಾಗಿದ್ದರೆ, ನಂತರ ದಲಿತ ಹಾಗೂ ಒಕ್ಕಲಿಗ ತಲಾ ಮೂರು, ಹಿಂದುಳಿದ ವರ್ಗಕ್ಕೆ ಎರಡು, ಉಳಿದಂತೆ ಬ್ರಾಹ್ಮಣ ಹಾಗೂ ಪರಿಶಿಷ್ಟ ಜಾತಿಗೆ ತಲಾ ಒಂದು ಸ್ಥಾನ ನೀಡಲಾಗಿದೆ

ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಹಲ ಮಂದಿ ಮಂತ್ರಿ ಪದವಿ ಆಕಾಂಕ್ಷಿಗಳು ಸ್ಥಾನ ಸಿಗದೆ ನಿರಾಶರಾಗಿದ್ದರಾದರೂ ದೊಡ್ಡ ಮಟ್ಟದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಲಾಗದೆ ಒಳಗೆ ಭುಸುಗುಟ್ಟುತ್ತಿರುವುದು ರಹಸ್ಯವಾಗುಳಿದಿಲ್ಲ.

ಇದ್ದುದರಲ್ಲಿ ಶಾಸಕ ಅಭಯಪಾಟೀಲ್ ಮಾತ್ರ ನನ್ನ ಯೋಗ್ಯತೆ ಏನು ಅನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಂಡಂತಿಲ್ಲ. ಹೀಗಾಗಿ ನನಗೆ ಮಂತ್ರಿ ಪದವಿ ನೀಡಿಲ್ಲ ಎಂದಿದ್ದರೆ, ತಿಪ್ಪಾರೆಡ್ಡಿ ಸಹ ಅಸಮಾಧಾನ ಹೊರ ಹಾಕಿದ್ದಾರೆ. ಉಳಿದಂತೆ ಆಳದಲ್ಲಿ ಹಲ ಮಂದಿ ಪ್ರಮುಖ ನಾಯಕರು ತಮಗೆ ಸ್ಥಾನ ದೊರೆಯದ್ದಕ್ಕಾಗಿ ತೀವ್ರ ನಿರಾಶರಾಗಿದ್ದಾರೆ.

ಕೆಲವೇ ದಿನಗಳ ಹಿಂದೆ ತಮಗೆ ಉಪ ಮುಖ್ಯಮಂತ್ರಿ ಹುದ್ದೆ ದೊರೆಯಬೇಕು ಎಂದು ಪಟ್ಟು ಹಿಡಿದಿದ್ದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಸಂಪುಟ ವಿಸ್ತರಣೆಗಿಂತ ಮುನ್ನ, ಪಕ್ಷದ ಎಲ್ಲ ಶಾಸಕರಿಗೆ ರಹಸ್ಯ ಸಂದೇಶ ರವಾನಿಸಿ, ಅವಕಾಶ ದೊರೆಯದವರು ಬಂಡಾಯ ಎದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪಕ್ಷದ ಹೈಕಮಾಂಡ್ ಹೇಳಿತ್ತು. ಆದರೆ ಅದನ್ನು ಗಾಳಿಗೆ ತೂರಿರುವ ಕೆಲವರು ಬಹಿರಂಗವಾಗಿ ಮತ್ತು ಗೌಪ್ಯ ಸಭೆಗಳನ್ನು ನಡೆಸಿದ್ದಾರೆ. ಈ ಮಧ್ಯೆ ಸರ್ಕಾರ ರಚಿಸಲು ಸಹಕಾರ ನೀಡಿ ಶಾಸಕತ್ವದಿಂದ ಅನರ್ಹಗೊಂಡಿರುವ, ಹದಿನೇಳು ಮಂದಿ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಮುಂದಿದೆ. ಅದು ಇತ್ಯರ್ಥಗೊಂಡ ನಂತರ ಯಡಿಯೂರಪ್ಪ ಮಂತ್ರಿಮಂಡಲ ವಿಸ್ತರಿಸಿ, ಖಾಲಿ ಇರುವ 14 ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ.

Translate »