ಮೈಸೂರಿಗೆ ಕೇಂದ್ರ ಸರ್ಕಾರದಿಂದ ಮತ್ತೆ 20 ಎಂಟಿ ಆಕ್ಸಿಜನ್ ಪೂರೈಕೆ
ಮೈಸೂರು

ಮೈಸೂರಿಗೆ ಕೇಂದ್ರ ಸರ್ಕಾರದಿಂದ ಮತ್ತೆ 20 ಎಂಟಿ ಆಕ್ಸಿಜನ್ ಪೂರೈಕೆ

May 27, 2021

ಮೈಸೂರು, ಮೇ 26(ಎಂಕೆ)- ಸಂಸದ ಪ್ರತಾಪ್ ಸಿಂಹ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರದಿಂದ ಮೈಸೂರಿಗೆ ಬುಧವಾರ ಮತ್ತೆ 20 ಎಂಟಿ(ಮೆಟ್ರಿಕ್ ಟನ್) ಎಲ್‍ಎಂಒ(ಲಿಕ್ವಿಡ್ ಮೆಡಿಕಲ್ ಆಕ್ಸಿಜನ್) ಆಕ್ಸಿಜನ್ ಪೂರೈಕೆ ಯಾಗಿದೆ. ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ಇಲ್ಲಿಯವರಗೆ 40 ಎಂಟಿ ಆಕ್ಸಿಜನ್ ಪೂರೈಕೆಯಾದಂತಾಗಿದೆ. ಈ ಮೊದಲು 20 ಎಂಟಿ ಆಕ್ಸಿಜನ್ ಒದಗಿಸಲಾಗಿತ್ತು.
ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಆಕ್ಸಿಜನ್ ಪೂರೈಕೆಯ ಜಿಲ್ಲಾ ನೋಡಲ್ ಅಧಿಕಾರಿ ಬಿ.ಮಂಜುನಾಥ್, ಮೈಸೂರಿನಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಪ್ರತಿನಿತ್ಯ ಸುಮಾರು 52 ಕೆ.ಎಲ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬಂದಿರುವ ಆಕ್ಸಿಜನ್ ಅನ್ನು ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುಮಾರು 3250 ಆಕ್ಸಿಜನ್ ಬೆಡ್‍ಗಳಿದ್ದು, 100-150 ಬೆಡ್‍ಗಳು ಖಾಲಿ ಇವೆ. ಅಲ್ಲದೆ ಜಿಲ್ಲೆಯಲ್ಲಿ ಸದಾ 5-10 ಕೆ.ಎಲ್ ಆಕ್ಸಿಜನ್ ಸ್ಟಾಕ್ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಆಕ್ಸಿಜನ್ ಕೊರತೆ ಸಂಪೂರ್ಣ ನಿವಾರಣೆಯಾಗಿದೆ. ಆಕ್ಸಿಜನ್ ಬರುವ ಮಾಹಿತಿ ಮೇರೆಗೆ ಇರುವ ಸ್ಟಾಕ್ ಅನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Translate »