ಮೈಸೂರಿಗೆ 20 ವೆಂಟಿಲೇಟರ್ ಕೇಳಿದ್ದೇವೆ: ಜಿಲ್ಲಾಧಿಕಾರಿ
ಮೈಸೂರು

ಮೈಸೂರಿಗೆ 20 ವೆಂಟಿಲೇಟರ್ ಕೇಳಿದ್ದೇವೆ: ಜಿಲ್ಲಾಧಿಕಾರಿ

March 24, 2020

ಮೈಸೂರು, ಮಾ. 23(ಆರ್‍ಕೆ)- ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ಮೈಸೂರಿಗೆ 20 ವೆಂಟಿಲೇಟರ್‍ಗಳು ಬೇಕೆಂದು ಕೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಗಳಲ್ಲಿ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಇರಿಸಲಾಗಿದೆ. ಕೊರೊನಾ ವೈರಸ್ ಸೋಂಕಿತರಿಗೆ ವೆಂಟಿಲೇಟರ್‍ಗಳ ಕೊರತೆ ಇರುವ ಕಾರಣ ಸರ್ಕಾರಕ್ಕೆ 20 ವೆಂಟಿಲೇಟರ್ ಉಪಕರಣ ಬೇಕೆಂದು ಬೇಡಿಕೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು. ಈಗಾಗಲೇ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ನಡೆಸಿದಾಗ ತಮಗೆ ಬೇಕಾದಷ್ಟು ಸಂಖ್ಯೆಯ ವೈದ್ಯಕೀಯ ಉಪಕರಣ ಕೊಡಿಸುವುದಾಗಿ ಹೇಳಿದ್ದಾರೆ. ಅಲ್ಲದೇ, ಮೈಸೂರು ಮೂಲದ ಸ್ಕ್ಯಾನ್‍ರೇ ಕಂಪನಿ ಯೊಂದಿಗೆ ಚರ್ಚಿಸಿ ವೆಂಟಿಲೇಟರ್ ಪೂರೈಸಲು ಹೇಳಿದ್ದೇವೆ ಎಂದು ತಿಳಿಸಿರುವುದರಿಂದ ಅತೀ ಶೀಘ್ರ 20 ಉಪಕರಣ ಬರಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಉಳಿದಂತೆ ನಮ್ಮಲ್ಲಿ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಸಂಗ್ರಹಿಸುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ವಾರ್ಡ್‍ಗಳನ್ನು ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಸರ್ವ ರೀತಿಯಲ್ಲಿ ಸಜ್ಜುಗೊಳಿಸಿದ್ದೇವೆ ಎಂದು ಅವರು ತಿಳಿಸಿದರು. ಬಟ್ಟೆ ಮಾಸ್ಕ್‍ಗಳನ್ನು ಮೈಸೂರಿನ ಕೆಲ ಘಟಕಗಳಲ್ಲಿ ಹೊಲಿಯಲು ಹೇಳಿದ್ದೇವೆ. ಸ್ಯಾನಿಟೈಸರ್ ತಯಾರಿಸಿ ಸಪ್ಲೈ ಮಾಡುವ ಕಂಪನಿಗೂ ಆರ್ಡರ್ ಮಾಡಿರುವು ದರಿಂದ ನಮಗೆ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.

Translate »