ಹೋಟೆಲ್ ಉದ್ಯಮ ಪೂರ್ಣ ಬಂದ್‍ಗೆ ನಿರ್ಧಾರ
ಮೈಸೂರು

ಹೋಟೆಲ್ ಉದ್ಯಮ ಪೂರ್ಣ ಬಂದ್‍ಗೆ ನಿರ್ಧಾರ

March 24, 2020

ಮೈಸೂರು,ಮಾ.23(ಎಸ್‍ಪಿಎನ್)-ಮೈಸೂರಿನ ಹೋಟೆಲ್ ಮಾಲೀಕರು `ರಾಜ್ಯ ಮತ್ತು ಕೇಂದ್ರ’ ಸರ್ಕಾರದ ಮಾರ್ಗಸೂಚಿ ಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಮಾರಕ ವೈರಸ್ `ಕೊರೊನಾ’ ತಡೆಗೆ ಸಹಕರಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದರು.

ಮೈಸೂರು ಕೃಷ್ಣಮೂರ್ತಿಪುರಂನಲ್ಲಿರುವ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಆವರಣದಲ್ಲಿ ನಡೆದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಕೆಲವು ಷರತ್ತಿನೊಂದಿಗೆ ಹೋಟೆಲ್‍ನಲ್ಲಿ ತಿಂಡಿ-ತಿನಿಸುಗಳ ಪಾರ್ಸಲ್ ಹಾಗೂ ಬೇಕರಿ ವಹಿವಾಟು(ಸೋಮವಾರಕ್ಕೆ) ನಡೆಸಲು ಮಾತ್ರ ಅನುಮತಿ ನೀಡಿತ್ತು. ಆದರೆ, ಪೊಲೀಸರು ನಿರಾಕರಿಸಿ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಮಾಲೀಕರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಎಲ್ಲಾ ವಹಿವಾಟುಗಳನ್ನು ಮಂಗಳವಾರದಿಂದ ಬಂದ್ ಮಾಡುವಂತೆ ಸಲಹೆ ನೀಡಿದರು.

ವಸತಿಗೃಹಗಳು, ರೆಸ್ಟೋರೆಂಟ್‍ಗಳು, ಹೋಟೆಲ್, ಬೇಕರಿ ಸೇರಿದಂತೆ ಯಾವುದೇ ವಹಿವಾಟುಗಳನ್ನು ಜಿಲ್ಲಾಡಳಿತ ಮಾರ್ಗಸೂಚಿ ಮೀರಿ ತೆರೆದರೆ ಐಪಿಸಿ ಸೆಕ್ಷನ್ 270 ರಡಿ ದೂರು ದಾಖಲಿಸುತ್ತಾರೆ. ಅಲ್ಪ ಲಾಭದ ಆಸೆಗೆ ಭವಿಷ್ಯದಲ್ಲಿ ಮತ್ತಷ್ಟು ತೊಂದರೆ ಮಾಡಿಕೊಳ್ಳದಂತೆ ಈಗಿನಿಂದಲೇ ಎಚ್ಚರ ವಹಿಸುವಂತೆ ಮಾಲೀಕರಲ್ಲಿ ಮನವಿ ಮಾಡಿದರು. `ಕೊರೊನಾ’ ತಡೆಗೆ ಜನರಿಂದ ಅಂತರ ಕಾಪಾಡಿಕೊಂಡು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವಂತೆ ಮನವಿ ಮಾಡಿದರು.

`ಕೊರೊನಾ’ ವೈರಸ್‍ಗೆ ಸೋಂಕಿತ ಇಬ್ಬರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಿಂದ ಮೈಸೂರಿನ ಜನತೆ ಹಾಗೂ ಜಿಲ್ಲಾಡಳಿತ ಆತಂಕಗೊಂಡಿದೆ. ಈ ದೃಷ್ಟಿಯಿಂದ ಮೈಸೂರು ಜಿಲ್ಲಾಡಳಿತ ಮಾ.31ರವರೆಗೆ `ಕಫ್ರ್ಯೂ’ ಮಾದರಿ ಲಾಕ್‍ಡೌನ್ ಜಾರಿಗೊಳಿಸಿದ್ದು, ಇದಕ್ಕೆ ಸಂಘದ ವತಿಯಿಂದ ಸಂಪೂರ್ಣ ಸಹಕರಿಸೋಣ ಎಂದರು.

ಪ್ರದಾನಿ ಮೋದಿ `ಜನತಾ ಕಫ್ರ್ಯೂ’ ಘೋಷಣೆ ಮಾಡಿದ ಭಾನುವಾರ ದಿಂದಲೇ ಹೋಟೆಲ್ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿತು. ಹೋಟೆಲ್ ಪೈ ವಿಸ್ಟಾ, ಹೋಟೆಲ್ ಪ್ರೆಸಿಡೆಂಟ್, ಹೋಟೆಲ್ ಶಾಸ್ತ್ರಿ, ಹೋಟೆಲ್ ನಳಪಾಕ್, ಮೈಸೂರು ರಿಫ್ರೆಶ್‍ಮೆಂಟ್, ಹೋಟೆಲ್ ಇಂಟರ್ ನ್ಯಾಷನಲ್ ಹಾಗೂ 300 ಬೇಕರಿಗಳು, 45 ಸ್ವೀಟ್ ಅಂಗಡಿಗಳು ಮುಚ್ಚಿವೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಮೈಸೂರು ಸಂಪರ್ಕಿಸುವ ಎಲ್ಲಾ ಮಾರ್ಗಗಳು ಇಂದಿನಿಂದ ಸಂಪೂರ್ಣ ಬಂದ್ ಆಗಿವೆ. ಈ ಮೂಲಕ ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ಹೋಟೆಲ್ ಉದ್ಯಮ ಶೇ.75 ರಷ್ಟು ಪ್ರವಾಸಿಗರಿಂದಲೇ ವ್ಯವಹಾರ ನಡೆಯುತ್ತಿದೆ. ಸ್ಥಳೀಯರಿಂದ ಶೇ.25 ರಷ್ಟು ಮಾತ್ರ ವ್ಯವಹಾರ ನಡೆಯುತ್ತಿದೆ. ಪ್ರವಾಸಿಗರಿಲ್ಲದ ಮೇಲೆ ಅನಗತ್ಯ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಮಾಲೀಕರಿಗೆ ಕಿವಿಮಾತು ನೀಡಿದರು.

Translate »