ಗುರುವಾರ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸೇರಿ 204 ಮಂದಿಗೆ ಸೋಂಕು
ಮೈಸೂರು

ಗುರುವಾರ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸೇರಿ 204 ಮಂದಿಗೆ ಸೋಂಕು

June 12, 2020

ಬೆಂಗಳೂರು, ಜೂ.11-ಮೈಸೂರಿನಲ್ಲಿ ಐವರು, ಹಾಸನದಲ್ಲಿ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಗುರು ವಾರ ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿ ಸೇರಿ 204 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ 6245ಕ್ಕೆ ಏರಿದೆ. ಇಂದು ಸೋಂಕು ಪತ್ತೆಯಾದವ ರಲ್ಲಿ 157 ಮಂದಿ ಹೊರ ರಾಜ್ಯದಿಂದ ಬಂದವರು. ಹಾಸನದಲ್ಲಿ 10 ಮತ್ತು ಮಂಡ್ಯದಲ್ಲಿ 8 ಮಂದಿ ಸೇರಿದಂತೆ ಇಂದು ರಾಜ್ಯದಲ್ಲಿ 114 ಮಂದಿ ಗುಣಮುಖ ರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,976ಕ್ಕೆ ಏರಿದ್ದು, ಬೆಂಗಳೂರಿನಲ್ಲಿ 35 ಮತ್ತು 60 ವರ್ಷದ ವ್ಯಕ್ತಿಗಳು, ರಾಯಚೂರಿನಲ್ಲಿ 28 ವರ್ಷದ ಮಹಿಳೆ ಸೇರಿದಂತೆ ಮೂವರು ಇಂದು ಮೃತ ಪಟ್ಟಿದ್ದು, ಈವರೆಗೆ ಸೋಂಕಿನಿಂದ 72 ಮಂದಿ ಮೃತಪಟ್ಟಂತಾಗಿದೆ.

ಯಾದಗಿರಿಯಲ್ಲಿ 66, ಉಡುಪಿಯಲ್ಲಿ 22, ಬೆಂಗಳೂರಿನಲ್ಲಿ 17, ಕಲಬುರಗಿಯಲ್ಲಿ 16, ಬೀದರ್‍ನಲ್ಲಿ 14, ಶಿವಮೊಗ್ಗದಲ್ಲಿ 10, ದಾವಣಗೆರೆಯಲ್ಲಿ 9, ಕೋಲಾರದಲ್ಲಿ 6, ರಾಮನಗರದಲ್ಲಿ 5, ವಿಜಯಪುರದಲ್ಲಿ 4, ಬಾಗಲಕೋಟೆ ಮತ್ತು ಉತ್ತರ ಕನ್ನಡದಲ್ಲಿ ತಲಾ 3, ದಕ್ಷಿಣ ಕನ್ನಡ ಮತ್ತು ಧಾರವಾಡ ದಲ್ಲಿ ತಲಾ 2, ಬೆಂಗಳೂರು ಗ್ರಾಮಂತರ, ಚಿಕ್ಕಮಗಳೂರು ಮತ್ತು ಕೊಪ್ಪಳದಲ್ಲಿ ತಲಾ ಒಂದು ಪ್ರಕರಣ ಇಂದು ಪತ್ತೆಯಾಗಿದೆ.

ರಾಜ್ಯದ 6245 ಸೋಂಕಿತರ ಪೈಕಿ 3,195 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೈಕಿ 10 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದ 26,970 ಮತ್ತು ದ್ವಿತೀಯ ಸಂಪರ್ಕದ 19,795 ಮಂದಿ ಸೇರಿದಂತೆ ಒಟ್ಟು 46,765 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದೇಶದಲ್ಲಿ 24 ಗಂಟೆಗಳಲ್ಲಿ 9,996 ಮಂದಿಗೆ  ಕೊರೊನಾ: ಸೋಂಕಿತರ ಸಂಖ್ಯೆ 2.86 ಲಕ್ಷಕ್ಕೆ ಏರಿಕೆ  8 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ
ನವದೆಹಲಿ, ಜೂ.11- ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 9,996 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 286 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಇನ್ನು ನಿನ್ನೆ ಒಂದೇ ದಿನ ಮಹಾಮಾರಿ ವೈರಸ್‍ಗೆ ಬರೋಬ್ಬರಿ 357 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 8,102ಕ್ಕೆ ಏರಿಕೆಯಾಗಿದೆ. ಈ ನಡುವೆ 2,86,579 ಲಕ್ಷ ಸೋಂಕಿತರ ಪೈಕಿ 141029 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿನ್ನೂ 137448 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಡುವೆ ಮಹಾಮಾರಿ ಕೊರೋನಾದಿಂದ ಅಕ್ಷರಶಃ ಕಂಗಾಲಾಗಿರುವ ಮಹಾರಾಷ್ಟ್ರದಲ್ಲಿ ಬುಧವಾರ ಮತ್ತೆ 3254 ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94,041ಕ್ಕೆ ಏರಿಕೆಯಾಗಿದೆ. ಅಲ್ಲದೆ ಒಂದೇ ದಿನ 149 ಮಂದಿ ಸಾವನ್ನಪ್ಪಿದ್ದು, ಈ ವ್ಯಾಧಿಗೆ ಮಹಾರಾಷ್ಟ್ರದಲ್ಲಿ ಈವರೆಗೆ 3438 ಮಂದಿ ಬಲಿಯಾದಂತಾಗಿದೆ.

ಕ್ವಾರಂಟೈನ್‍ನಲ್ಲಿದ್ದ ಎಎಸ್‍ಐ ಸೇರಿ ನಾಲ್ವರು ಪೊಲೀಸರ ಕೊರೊನಾ ವರದಿ ನೆಗೆಟೀವ್
ಮೈಸೂರು, ಜೂ.11-ಕೊರೊನಾ ಸೋಂಕಿಗೆ ಒಳಗಾಗಿದ್ದ ಹೊಳೆನರಸೀಪುರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಂಪರ್ಕದಲ್ಲಿದ್ದ ಮೈಸೂರಿನ ಎಎಸ್‍ಐ ಸೇರಿ ನಾಲ್ವರು ಪೊಲೀಸರ ಕೋವಿಡ್-19 ಟೆಸ್ಟಿಂಗ್ ವರದಿ ನೆಗೆಟೀವ್ ಬಂದಿದೆ.

ಸೋಂಕಿತರಾಗಿದ್ದ ಸಬ್ ಇನ್ಸ್‍ಪೆಕ್ಟರ್ ಪ್ರಥಮ ಸಂಪರ್ಕದಲ್ಲಿದ್ದ ಲಕ್ಷ್ಮೀಪುರಂ ಠಾಣೆಯ ಎಎಸ್‍ಐ ಮತ್ತು ಮೂವರು ಪೊಲೀಸರನ್ನು ಕ್ವಾರಂಟೈನ್ ಮಾಡಿ, ಅವರ ಗಂಟಲ ದ್ರವ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇಂದು ಅವರ ವರದಿ ನೆಗೆಟೀವ್ ಬಂದಿದ್ದು, ಅವರೆಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »