ಮಂಡ್ಯದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 22 ಮಂದಿಗೆ ಸೋಂಕು
ಮೈಸೂರು

ಮಂಡ್ಯದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 22 ಮಂದಿಗೆ ಸೋಂಕು

May 18, 2020

ಮಂಡ್ಯ, ಮೇ 17-ಸಕ್ಕರೆ ನಾಡು ಮಂಡ್ಯದಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಮುಂಬೈನಿಂದ ಹಿಂತಿರುಗಿದ 18 ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದರಿಂದ ಕೆ.ಆರ್.ಪೇಟೆ ತತ್ತರಿಸಿದೆ. ಇಂದು ಕೆ.ಆರ್. ಪೇಟೆ 18 ಮತ್ತು ನಾಗಮಂಗಲದಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಂದೇ ದಿನ 22 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 72ಕ್ಕೆ ಏರಿದೆ.

ತಬ್ಲಿಘ್ ಜಮಾತ್‍ನಿಂದ ಬಂದವರ ಸಂಪರ್ಕದಿಂದ ಜಿಲ್ಲೆಯಲ್ಲಿ ಮೊದಲಿಗೆ ಮಳವಳ್ಳಿ ಪಟ್ಟಣ ಜರ್ಝರಿತವಾಗಿತ್ತು. ಅಲ್ಲಿ 19 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 18 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇವಲ ಒಬ್ಬರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಮಂಡ್ಯ ಜಿಲ್ಲೆ ಕೊರೊನಾ ಮುಕ್ತ ವಾಗುತ್ತದೆ ಎಂಬ ಆಶಾದಾಯಕ ಪರಿಸ್ಥಿತಿ ನಿರ್ಮಾಣವಾಗುತ್ತಿ ದ್ದಂತೆಯೇ ಮುಂಬೈನಿಂದ ಬಂದವರ ರೂಪದಲ್ಲಿ ಕೊರೊನಾ ಸೋಂಕು ಅತೀ ವೇಗವಾಗಿ ಮಂಡ್ಯ ಜಿಲ್ಲೆಗೆ ವಕ್ಕರಿಸಿಕೊಳ್ಳುತ್ತಿದೆ. ಇತರ ರಾಜ್ಯಗಳಿಂದ ಜನರು ಬರಲು ಕೇಂದ್ರ ಸರ್ಕಾರ ಅನು ಮತಿ ನೀಡಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನೆಲೆಸಿದ್ದು, ಲಾಕ್‍ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ಅನೇಕರು ಕೆ.ಆರ್.ಪೇಟೆ, ನಾಗ ಮಂಗಲ ಮತ್ತು ಪಾಂಡವಪುರಕ್ಕೆ ಹಿಂತಿರುಗಲಾರಂಭಿಸಿದರು. ಹೀಗೆ ಬಂದ ಹಲವರಿಗೆ ಕೊರೊನಾ ವೈರಸ್ ಪತ್ತೆಯಾಗುತ್ತಿರುವುದು ತೀವ್ರ ತಲೆನೋವಿಗೆ ಕಾರಣವಾಗಿದೆ. ಕೆ.ಆರ್.ಪೇಟೆಯಲ್ಲಿ ಇಂದು 18 ಮಂದಿ ಸೇರಿದಂತೆ ಒಟ್ಟು 43 ಮಂದಿ ಸೋಂಕಿತರಾಗಿದ್ದು, ಈ ತಾಲೂಕಿನ ಜನತೆ ಆತಂಕಕ್ಕೊಳಗಾಗಿದ್ದಾರೆ. ಇಂದು ಜಿಲ್ಲೆಯಲ್ಲಿ ಸೋಂಕು ಪತ್ತೆಯಾದ ಎಲ್ಲಾ 22 ಮಂದಿಯೂ ಮುಂಬೈನಿಂದ ಹಿಂದಿರುಗಿದವರೇ ಆಗಿದ್ದಾರೆ. ಅವರಲ್ಲಿ 9 ಮಹಿಳೆಯರು ಹಾಗೂ ಐವರು ಮಕ್ಕಳು ಸೇರಿದ್ದಾರೆ. 60 ವರ್ಷಕ್ಕೆ ಮೇಲ್ಪಟ್ಟವರು 3 ಮಂದಿ ಇದ್ದು, ಎಲ್ಲರಿಗೂ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ. ಜಿಲ್ಲೆಯ ಒಟ್ಟು 72 ಸೋಂಕಿತರ ಪೈಕಿ ಕೆ.ಆರ್.ಪೇಟೆಯಲ್ಲಿ 43, ಮಳವಳ್ಳಿ 19, ಪಾಂಡವಪುರ 3, ನಾಗಮಂಗಲ 4, ಮಂಡ್ಯ 2 ಮತ್ತು ಮದ್ದೂರಿನಲ್ಲಿ ಒಬ್ಬರು ಸೋಂಕಿತರಿದ್ದಾರೆ. ಇವರ ಪೈಕಿ ಈವರೆಗೆ 19 ಮಂದಿ ಗುಣಮುಖರಾಗಿದ್ದು, ಉಳಿದ 53 ಮಂದಿ ಪೈಕಿ ಒಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 52 ಮಂದಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »