ಮೈಸೂರು ನಗರಕ್ಕೆ 24×7 ನೀರು ಪೂರೈಸುವ ಯೋಜನೆಗೆ ಜೂ.19ರಂದು ಪ್ರಾಯೋಗಿಕ ಕಾರ್ಯಾಚರಣೆ
ಮೈಸೂರು

ಮೈಸೂರು ನಗರಕ್ಕೆ 24×7 ನೀರು ಪೂರೈಸುವ ಯೋಜನೆಗೆ ಜೂ.19ರಂದು ಪ್ರಾಯೋಗಿಕ ಕಾರ್ಯಾಚರಣೆ

June 18, 2020

ಮೈಸೂರು,ಜೂ.17(ಪಿಎಂ)- ಮೈಸೂರು ನಗರಕ್ಕೆ ವಾರದ ಏಳೂ ದಿನಗಳು, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಸಂಬಂಧ ವಿಶ್ವೇಶ್ವರ ನಗರದ 2,485 ಮನೆಗಳ ಕೊಳಾಯಿಗಳಲ್ಲಿ (ನಲ್ಲಿ) ಜೂ.19ರಂದು ಬೆಳಿಗ್ಗೆ 9ಕ್ಕೆ ನೀರು ಹರಿಸುವ ಪ್ರಾಯೋಗಿಕ ಕಾರ್ಯಾ ಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾ ರದ ಅವಧಿಯಲ್ಲಿ ಮೈಸೂರು ನಗರಕ್ಕೆ 24×7 ನೀರು ಪೂರೈಸುವ ಯೋಜನೆ ಸಂಬಂಧ ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದ ಅನುಮೋದನೆ ಕೋರಲಾ ಗಿತ್ತು. ಇದಕ್ಕೆ 2014ರಲ್ಲಿ ಕೇಂದ್ರದ ಅನು ಮೋದನೆ ದೊರೆಯಿತು. ಬಳಿಕ ರಾಜ್ಯ ಸರ್ಕಾರ 214 ಕೋಟಿ ರೂ. ಅನುದಾನ ಕಲ್ಪಿಸಿತ್ತು ಎಂದು ಹೇಳಿದರು.

ಈ ಯೋಜನೆಗೂ ಮುನ್ನವೇ ನಗರದಲ್ಲಿ 2008-09ನೇ ಸಾಲಿನಲ್ಲಿ ಇದೇ ಮಾದರಿ ಯೋಜನೆ ರೂಪಿಸಿ ಜೆಎನ್ ನರ್ಮ್ ಯೋಜನೆಯಡಿ ಮೈಸೂರು ನಗರಕ್ಕೆ ಬೃಹತ್ (ಬಲ್ಕ್) ನೀರು ಸರಬರಾಜು ಮತ್ತು ಕುಡಿ ಯುವ ನೀರು ಸರಬರಾಜು ಯೋಜನೆಗೆ ಅನುಮೋದನೆ ದೊರೆತಿತ್ತು. ಮೈಸೂರು ನಗರದಲ್ಲಿ 69 ಡಿಎಂಎ (ಡಿಸ್ಟ್ರಿಕ್ ಮೀಟ ರಿಂಗ್ ಏರಿಯಾ/ನೀರಿನ ಪೂರೈಕೆ ಜಾಲ) ಮೂಲಕ ನೀರು ಪೂರೈಸಲು ಚಿಂತಿಸ ಲಾಗಿತ್ತು. ಆದರೆ ಗುತ್ತಿಗೆ ಮೂಲಕ ಜವಾ ಬ್ದಾರಿ ವಹಿಸಿಕೊಂಡ ಜೆಸ್ಕೊ ಕಂಪನಿ ಯವರು ಕೇವಲ 47 ಡಿಎಂಎ ನಿರ್ಮಾಣ ಕೆಲಸ ಪೂರ್ಣಗೊಳಿಸಿದರು. ಆದರೂ ಯಾವುದೇ ಮನೆಗೂ 24×7 ನೀರು ಹರಿ ಸಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

ಕೊನೆಗೆ 22 ಡಿಎಂಎ ನಿರ್ಮಾಣ ಕೆಲಸ ಬಾಕಿ ಉಳಿಸಿ ಆ ಕಂಪನಿಯವರು ನಿರ್ಗ ಮಿಸಿದರು. ಈ ಹಿನ್ನೆಲೆಯಲ್ಲಿ 2016ರಲ್ಲಿ ಹೊಸದಾಗಿ ಜೆಎನ್ ನರ್ಮ್ ಪರಿ ವರ್ತಿತ 2ನೇ ಹಂತದ ಯೋಜನೆಗೆ ಕೇಂದ್ರದ ಅನುಮೋದನೆಯೊಂದಿಗೆ ಚಾಲನೆ ನೀಡಲಾಯಿತು. ಇದರಡಿ ಕಾಮಗಾರಿ ಯನ್ನು `ಐಎಲ್ ಅಂಡ್ ಎಫ್‍ಎಸ್’ ಕಂಪನಿಗೆ 2016ರ ಫೆ.26ರಂದು ಗುತ್ತಿಗೆ ನೀಡಲಾಯಿತು. ಇವರು 2019ರ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ, 50,132 ಮನೆಗಳ ಕೊಳಾಯಿಗಳಿಗೆ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಸದ್ಯಕ್ಕೆ 22 ಡಿಎಂಎ ಪೈಕಿ 11 ಅನ್ನು ಪೂರೈಸಿ ರುವುದಾಗಿ ಕಂಪನಿಯವರು ದಾಖಲೆ ನೀಡಿದ್ದಾರೆ ಎಂದರು.

ಉಳಿದ 11 ಡಿಎಂಎ ಕೆಲಸ ಪ್ರಾರಂಭ ವಾಗಬೇಕಿದ್ದು, ಈ ನಡುವೆ `ಐಎಲ್ ಅಂಡ್ ಎಫ್‍ಎಸ್’ ಕಂಪನಿ ಸಂಪರ್ಕ ಪೂರ್ಣ ಗೊಳಿಸಿರುವ ವಿಶ್ವೇಶ್ವರನಗರ ಭಾಗದ 2,485 ಮನೆಗಳ ಕೊಳಾಯಿಗಳಿಗೆ ಪ್ರಾಯೋಗಿಕ ವಾಗಿ ಜೂ.19ರ ಬೆಳಿಗ್ಗೆ 9ರಿಂದ ಜೂ.20ರ ಬೆಳಿಗ್ಗೆ 9ರವರೆಗೆ ಒಟ್ಟು 24 ಗಂಟೆ ಕಾಲ ನೀರು ಹರಿಸಲಾಗುವುದು. ಆ ಮೂಲಕ ತಾಂತ್ರಿಕ ಪರಿಶೀಲನೆ ನಡೆಸಿ ಮುಂದಿನ ಕಾರ್ಯ ಯೋಜನೆಗೆ ಸೂಕ್ತ ನಿರ್ಧಾರ ಮಾಡಬೇಕಿದೆ ಎಂದು ತಿಳಿಸಿದರು.

ಮತ ನೀಡಿದ 25 ಸಾವಿರ ಕುಟುಂಬದ ಋಣ ತೀರಿಸಬೇಕಿದೆ

ನನಗೆ ಮತ ನೀಡಿದ 25 ಸಾವಿರ ಕುಟುಂಬದ ಋಣ ತೀರಿಸುವ ನಿಟ್ಟಿನಲ್ಲಿ ಮೈಸೂರಿನ ಕುರುಬಾರಹಳ್ಳಿ ಸರ್ವೇ 4 ಹಾಗೂ ಆಲನಹಳ್ಳಿ ಸರ್ವೇ ನಂ.41ರ ಮುಡಾ ಬಡಾವಣೆಗಳನ್ನು ಕಂದಾಯ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಉಚಿತವಾಗಿ ವರ್ಗಾವಣೆ ಮಾಡಲು ಶ್ರಮಿಸುತ್ತಿದ್ದೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕುರುಬಾರಹಳ್ಳಿ ಸರ್ವೇ 4 ಹಾಗೂ ಆಲನಹಳ್ಳಿ ಸರ್ವೇ ನಂ.41ರ ಬಿ ಖರಾಬು ಸಮಸ್ಯೆಗೂ, ಮುಡಾ ನಿರ್ಮಿಸಿರುವ ಬಡಾವಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕೆ ಕುರಿತಂತೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ. ಈ ತಿಂಗಳ ಕೊನೆ ಒಳಗೆ ಸರ್ಕಾರ ಹೊರಡಿಸಿದ ಆದೇಶ ಪ್ರತಿಯನ್ನು ಸ್ಥಳೀಯರ ಸಮ್ಮುಖ ಬಿಡುಗಡೆ ಮಾಡುವುದಾಗಿ ಹೇಳಿದ್ದೇನೆ. ಇದರ ಹೊರತಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣವನ್ನೂ ಕೊಟ್ಟಿದ್ದೇನೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೊರಗಿನಿಂದ ಬಂದವರಿಗೆ ಆದ್ಯತೆ ನೀಡುವ ಲಕ್ಷಣಗಳೇ ಗೋಚರಿಸುತ್ತಿವೆ ಎಂಬುದಕ್ಕೆ ಪ್ರತಿ ಕ್ರಿಯಿಸಿ, ಮುಖ್ಯಮಂತ್ರಿಗಳು ಸರ್ಕಾರ ರಚನೆ ಮಾಡುವ ಪೂರ್ವದಲ್ಲಿ ಕೊಟ್ಟಿದ್ದ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಇದು ಕೊನೆ ಹಂತಕ್ಕೆ ಬಂದಿದೆ. ರಾಜ್ಯದಿಂದ ಪಟ್ಟಿ ಹೈಕಮಾಂಡ್‍ಗೆ ಹೋಗಿದೆ. ಅಂತಿಮವಾಗಿ ಅಲ್ಲಿ ನಿರ್ಧಾರವಾಗಲಿದೆ. ನಮ್ಮಲ್ಲಿ ಮೂಲ ಮತ್ತು ವಲಸೆ ಎಂಬುದಿಲ್ಲ ಎಂದರು.

Translate »