ಪಂಚಮಸಾಲಿ ಲಿಂಗಾಯತರಿಗೆ `2ಎ’, ಎಲ್ಲಾ ಲಿಂಗಾಯತ ಉಪ ಪಂಗಡಕ್ಕೂ ಓಬಿಸಿ ಸೌಲಭ್ಯ ನೀಡಿ
ಮೈಸೂರು

ಪಂಚಮಸಾಲಿ ಲಿಂಗಾಯತರಿಗೆ `2ಎ’, ಎಲ್ಲಾ ಲಿಂಗಾಯತ ಉಪ ಪಂಗಡಕ್ಕೂ ಓಬಿಸಿ ಸೌಲಭ್ಯ ನೀಡಿ

December 31, 2020

ಮೈಸೂರು, ಡಿ.30(ಪಿಎಂ)- ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತರಿಗೆ `2ಎ’ ಮೀಸಲಾತಿ ಕಲ್ಪಿಸಬೇಕು. ಜೊತೆಗೆ ಎಲ್ಲಾ ಲಿಂಗಾಯತ ಉಪ ಪಂಗಡಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ (ಓಬಿಸಿ) ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳ ಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಪೀಠದ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಹರಿಹರ ಪಂಚಮ ಸಾಲಿ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಶ್ವಾಸಗುರು 2021ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲಾ ಲಿಂಗಾಯತ ಉಪ ಪಂಗಡಗಳಿಗೂ ಮೀಸಲಾತಿ ಸೌಲಭ್ಯ ದೊರೆಯಬೇಕು. ಉತ್ತರ ಭಾಗದ ಪಂಚಮ ಸಾಲಿ ಲಿಂಗಾಯತರು, ಮೈಸೂರು ಭಾಗದ ಗೌಡ ಲಿಂಗಾಯ ತರು, ಮಲೆನಾಡಿನ ಮಲೆಗೌಡ ಲಿಂಗಾಯತರು, ಕಲ್ಯಾಣ ಕರ್ನಾಟಕ ಭಾಗದ ದೀಕ್ಷಾ ಲಿಂಗಾಯತರು, ಕರಾವಳಿ ಕರ್ನಾಟಕದ ಗೌಳಿ ಲಿಂಗಾಯತರು ಒಳಗೊಂಡಂತೆ ಇವರೆಲ್ಲರೂ ಕೃಷಿಕರು. ಅಲ್ಲದೆ, ಲಿಂಗಾಧಾರಿಗಳೇ ಆಗಿದ್ದಾರೆ. ಇವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕೆಂದು ಆಗ್ರಹಿಸಿದರು.

ಒಕ್ಕಲಿಗ ವೃತ್ತಿ ಮಾಡುವ ಲಿಂಗಾಯತರನ್ನೆಲ್ಲ ಒಗ್ಗೂಡಿಸುವ ವ್ಯವಸ್ಥಿತ ಕಾಯಕಕ್ಕೆ ಮುಂದಾಗಿದ್ದೇನೆ. ಈ ನಿಟ್ಟಿನಲ್ಲಿ ಗ್ರಾಮ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಬರುವ ಜ.2ರಿಂದ 7ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 100 ಗ್ರಾಮಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.

ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಹೊರವಲ ಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಮುಂಬರುವ ಜ.14 ಮತ್ತು 15ರಂದು ಹರಜಾತ್ರೆ ಹಮ್ಮಿಕೊಳ್ಳ ಲಾಗಿದೆ. ಜಾತ್ರೆಯಲ್ಲಿ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ತಾವರ್‍ಚಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಧಾರ್ಮಿಕ, ಆಧ್ಯಾತ್ಮಿಕ, ಆರೋಗ್ಯ, ಕೃಷಿ, ಯೋಗ ವಿಜ್ಞಾನ ಶಿಬಿರ ಹಾಗೂ ಯುವ ಸಬಲೀಕರಣದ ಪರಿಕಲ್ಪನೆಯಲ್ಲಿ ಜಾತ್ರೆಯಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. ಯೋಗಕ್ಕೆ ಹೃಷಿಕೇಶ ಬಿಟ್ಟರೆ ಮೈಸೂರು ವಿಶೇಷ ಸ್ಥಾನ ನೀಡಿದೆ. ಜೊತೆಗೆ ಮೈಸೂರು ಯೋಗವನ್ನು ವಿಶ್ವಕ್ಕೆ ತಿಳಿಸಿಕೊಡುವಲ್ಲಿಯೂ ಮಹತ್ವದ ಪಾತ್ರ ಹೊಂದಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಕ್ಯಾಲೆಂಡರ್ ಬಿಡುಗಡೆ ಮಾಡಿ ದರು. ಧಾರ್ಮಿಕ ಚಿಂತಕ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ಬಿಜೆಪಿ ಮುಖಂಡ ಕೇಬಲ್ ಮಹೇಶ್, ಮಹಾಲಕ್ಷ್ಮೀ ಸ್ವಿಟ್ಸ್‍ನ ಮಹದೇವ್ ಮತ್ತಿತರರು ಹಾಜರಿದ್ದರು.

Translate »