ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರ 125ನೇ ವರ್ಷದ ಜನ್ಮದಿನಾಚರಣೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ
ಮೈಸೂರು

ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರ 125ನೇ ವರ್ಷದ ಜನ್ಮದಿನಾಚರಣೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

December 31, 2020

ಮೈಸೂರು,ಡಿ.30- ಸುಪ್ರಸಿದ್ಧ ಪಿಟೀಲು ವಿದ್ವಾಂಸ ರಾದ ಪಿಟೀಲು ಚೌಡಯ್ಯ ಅವರ 125ನೇ ಜನ್ಮ ವರ್ಷಾ ಚರಣೆಯನ್ನು ವಿವಿಧ ಸಂಗೀತ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು “ಸಂಗೀತ ಕಲಾನಿಧಿ ಮೈಸೂರು ಟಿ.ಚೌಡಯ್ಯ ಟ್ರಸ್ಟ್” ಸಿದ್ಧತೆ ಮಾಡಿಕೊಂಡಿದೆ.

ಪಿಟೀಲು ಚೌಡಯ್ಯ ಅವರ ಜನ್ಮ ದಿನವಾದ ಜ.1ರಂದು ರಾತ್ರಿ 8ರಿಂದ 8.45ರವರೆಗೆ ಚಂದನ ವಾಹಿನಿಯಲ್ಲಿ ಕನ್ನಡ ದಲ್ಲಿ ಹಾಗೂ ರಾತ್ರಿ 9ರಿಂದ 9.45ರವರೆಗೆ ಡಿಡಿ ಭಾರತಿ ವಾಹಿನಿಯಲ್ಲಿ ಇಂಗ್ಲಿಷ್‍ನಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರ ವಾಗಲಿದೆ. ಅಲ್ಲದೇ, ಮೈಸೂರಿನ ಗಾನಭಾರತಿ ಜೊತೆಗೂಡಿ ಜ.2ರಿಂದ ಪಿಟೀಲು ಚೌಡಯ್ಯ ಅವರ ಕೃತಿಗಳ ಬಗ್ಗೆ ಆನ್‍ಲೈನ್ ತರಗತಿಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ ಎಂದು ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಸಿ.ಆರ್. ಹಿಮಾಂಶು, ಖಜಾಂಚಿ ಡಾ.ಎಂ.ಎ.ಶೇಖರ್ ತಿಳಿಸಿದ್ದಾರೆ.

ಪಿಟೀಲು ಚೌಡಯ್ಯನವರೇ ಸೃಜಿಸಿದ ಕೃತಿಗಳನ್ನು ಕಲಾ ಸಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಜ.2ರಿಂದ ಗಾನಭಾರತಿ ಯಲ್ಲಿ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸಲಿದ್ದು, ಪ್ರತೀ ಸೋಮವಾರ ಹಾಗೂ ಗುರುವಾರ ಬೆಳಗ್ಗೆ 9 ಗಂಟೆಗೆ ಒಂದೊಂದು ಕೃತಿಯನ್ನು ಹಿರಿಯ ನುರಿತ ಸಂಗೀತಗಾರರು ಕಲಿಸಲಿದ್ದು, ಮೊದಲ ಕಂತಿನಲ್ಲಿ ವಿದುಷಿ ಸುಕನ್ಯಾ ಪ್ರಭಾ ಕರ್, ವಿದುಷಿ ಪದ್ಮಾ ಗುರುದತ್, ವಿದುಷಿ ಜಿ.ಎಸ್. ರಾಜಲಕ್ಷ್ಮಿ, ವಿದುಷಿ ಆರ್.ಎನ್.ಶ್ರೀಲತಾ, ವಿದುಷಿ ವಸುಧಾ ಕೇಶವ್, ವಿದ್ವಾನ್ ಎ.ಚಂದನ್‍ಕುಮಾರ್ ಕಲಿಸಲಿದ್ದಾರೆ.

ಗಾನಭಾರತಿಯ ಫೇಸ್‍ಬುಕ್ ಹಾಗೂ ಯೂಟ್ಯೂಬ್ ಚಾನಲ್‍ಗಳಲ್ಲಿ ಇದು ಪ್ರಸಾರವಾಗಲಿದೆ. ಜನವರಿ 10 ರಂದು ಪಿಟೀಲು ಚೌಡಯ್ಯನವರ ಬಹುತೇಕ ಕೃತಿಗಳನ್ನು ಹಿರಿಯ ಸಂಗೀತಗಾರರು ಹಾಡಲಿದ್ದಾರೆ. ಗಾನಭಾರತಿಯ ‘ತಿಲ್ಲಾನ’ ಮಾಸಿಕ ಸಂಚಿಕೆಯನ್ನು ಈ ಬಾರಿ ಪಿಟೀಲು ಚೌಡಯ್ಯ ಅವರ ಜೀವನ ಸಾಧನೆಯನ್ನು ಪರಿಚಯಿಸಲು ಮೀಸಲಿಡಲಾಗಿದೆ ಎಂದು ಗಾನಭಾರತಿ ಮುಖ್ಯಸ್ಥರು ತಿಳಿಸಿದ್ದಾರೆ. ಗಾನಭಾರತಿ ಸಂಸ್ಥೆಯು ಟ್ರಸ್ಟ್‍ನ ಸಹಭಾಗಿತ್ವ ದಲ್ಲಿ ಜ.10ರಂದು ಒಂದು ದಿನದ ಸಂಗೀತೋತ್ಸವ ಆಯೋ ಜಿಸಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಈ ಉತ್ಸವ ವಿದುಷಿ ಸುಕನ್ಯಾ ಪ್ರಭಾಕರ್ ಅವರ ಗಾಯನದೊಂದಿಗೆ ಆರಂಭ ವಾಗಲಿದೆ. ನಂತರ ವಿದ್ವಾನ್ ವಿನಯ್ ಶರ್ಮಾ, ವಿದುಷಿ ಮಾನಸಿ ಪ್ರಸಾದ್, ವಿದ್ವಾನ್ ವಿವೇಕ್ ಸದಾಶಿವಂ, ವಿದ್ವಾನ್ ಮಾನಸ ನಯನ, ಚೌಡಯ್ಯ ಅವರ ಶಿಷ್ಯೆ ಅನುಸೂಯ ಕುಲಕರ್ಣಿ ವಿಶೇಷ ವಾಗ್ಯ ಅಂಕಲಗಿನಲ್ಲಿ ಕೃತಿಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ವೇಳೆ ಚೌಡಯ್ಯನವರ ಮರಿಮಗನಾದ ವಿದ್ವಾನ್ ಚಂದನ್‍ಕುಮಾರ್ ಅವರ ಕೊಳಲು ವಾದನವಿರುತ್ತದೆ. ವಿದುಷಿ ಪದ್ಮಾವತಿ ನರಸಿಂಹನ್, ಚೌಡಯ್ಯನವರ ಜೀವನ ಸಾಧನೆ ಕುರಿತು ಮಾತನಾಡಲಿದ್ದಾರೆ. ಸಂಜೆ 6 ಗಂಟೆಗೆ ಮೈಸೂರು ನಾಗರಾಜ್ ಹಾಗೂ ವಿದ್ವಾನ್ ಮೈಸೂರು ಕಾರ್ತಿಕ್ ಅವರ ವಯೋಲಿನ್ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮಕ್ಕೆ ತುಮಕೂರಿನ ಬಿ.ರವಿಶಂಕರ್ ಮೃದಂಗ ಹಾಗೂ ವಿದ್ವಾನ್ ಗಿರಿಧರ ಉಡುಪ ಘಟಂನಲ್ಲಿ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

 

Translate »