ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ 3 ವಾರ ಮಧ್ಯಂತರ ರಜೆ
ಮೈಸೂರು

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ 3 ವಾರ ಮಧ್ಯಂತರ ರಜೆ

October 12, 2020

ಬೆಂಗಳೂರು/ಮೈಸೂರು, ಅ. 11(ಎಸ್‍ಪಿಎನ್)- ವಿದ್ಯಾರ್ಥಿ ಗಳು ಮತ್ತು ಶಿಕ್ಷಕರ ಆರೋಗ್ಯದ ಹಿತದೃಷ್ಟಿ ಯಿಂದ ಶಾಲೆಗಳಿಗೆ ಅಕ್ಟೋಬರ್ 12ರಿಂದ ಮೂರು ವಾರಗಳ ಕಾಲ ರಜೆ ಘೋಷಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ. ಹಲವಾರು ಶಿಕ್ಷಕರು ಸಹ ಕೋವಿಡ್-19 ಸೋಂಕಿಗೆ ಒಳಗಾಗಿರುವುದನ್ನು ಮಾಧ್ಯಮದ ಮೂಲಕ ಗಮನಿಸಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ಅ.12ರಿಂದ 3 ವಾರಗಳ ಕಾಲ ಅಂದರೆ ಅ.30ರವರೆಗೆ ಮಧ್ಯಂತರ ರಜೆ ಘೋಷಿಸಿ ಆದೇಶ ಹೊರಡಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶದಲ್ಲಿ ತಿಳಿಸಿದ್ದಾರೆ.

ಶನಿವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೋವಿಡ್ ಸಮಸ್ಯೆ ಹೆಚ್ಚಾಗಿ ರುವ ಈ ಕಾಲ ಘಟ್ಟದಲ್ಲಿ ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಬೇಕು ಹಾಗೂ ವಿದ್ಯಾಗಮ ಯೋಜನೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದರು. ಅವರ ಒತ್ತಾ ಯಕ್ಕೆ ಮಣಿದಿರುವ ಸರ್ಕಾರ ನಿನ್ನೆ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶಿಸಿತ್ತು. ಇಂದು ಸರ್ಕಾರ ಎಲ್ಲಾ ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಿ ಆದೇಶಿಸಿದೆ. ಮೈಸೂರು ಜಿಲ್ಲೆಯಲ್ಲಿ 5,670 ಶಿಕ್ಷಕರು ಕೊರೊನಾ ಪರೀಕ್ಷೆಗೆ ಒಳಪಟ್ಟು, ಇದರಲ್ಲಿ 186 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಇಲ್ಲಿಯವರೆಗೆ 5 ಮಂದಿ ಶಿಕ್ಷಕರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನೂ 3,849 ಮಂದಿ ಶಿಕ್ಷಕರು ಪರೀಕ್ಷೆಗೆ ಒಳಪಟ್ಟಿಲ್ಲ ಎಂದು ಪ್ರಭಾರ ಡಿಡಿಪಿಐ ಉದಯ್‍ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಹೆಚ್.ಡಿ.ಕೋಟೆಯ 1,032 ಶಿಕ್ಷಕರಿದ್ದು, 701 ಶಿಕ್ಷಕರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇದರಲ್ಲಿ 7 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಹುಣಸೂರಿನ 1,181 ಶಿಕ್ಷಕರಲ್ಲಿ 604 ಶಿಕ್ಷಕರು ಕೊರೊನಾ ಪರೀಕ್ಷೆಗೆ ಒಳಪಟ್ಟು, ಇವರಲ್ಲಿ 16 ಮಂದಿಗೆÉ ಸೋಂಕು ದೃಢ ಪಟ್ಟಿದೆ. ಓರ್ವ ಶಿಕ್ಷಕರು ಬಲಿಯಾಗಿದ್ದಾರೆ. ಕೆ.ಆರ್.ನಗರದ 1,514 ಶಿಕ್ಷಕರಲ್ಲಿ 914 ಶಿಕ್ಷಕರು ಪರೀಕ್ಷೆಗೆ ಒಳಪಟ್ಟು, 16 ಮಂದಿಗೆ ಸೋಂಕು ದೃಢಪಟ್ಟಿದೆ. ಮೈಸೂರು ಉತ್ತರ ದಲ್ಲಿ 833 ಶಿಕ್ಷಕರಲ್ಲಿ 525 ಮಂದಿ ಪರೀಕ್ಷೆಗೆ ಮಾಡಿಸಿದ್ದು, ಇದರಲ್ಲಿ 17 ಮಂದಿಗೆ ಸೋಂಕು ದೃಢಪಟ್ಟಿದೆ. ಮೈಸೂರು ತಾಲೂಕಿನ 1294 ಶಿಕ್ಷಕರಿದ್ದು, 597 ಮಂದಿ ಪರೀಕ್ಷೆಗೆ ಒಳಪಟ್ಟು 32 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಓರ್ವ ಶಿಕ್ಷಕ ಬಲಿ ಯಾಗಿದ್ಧಾರೆ. ಮೈಸೂರು ದಕ್ಷಿಣ ವಲಯದ 290 ಶಿಕ್ಷಕರಲ್ಲಿ 60 ಮಂದಿ ಪರೀಕ್ಷೆಗೆ ಒಳಪಟ್ಟಿದ್ದು, 5 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 3 ಮಂದಿ ಮೃತರಾಗಿದ್ದಾರೆ. ನಂಜನಗೂಡಿನ 1406 ಶಿಕ್ಷಕರಲ್ಲಿ 688 ಶಿಕ್ಷಕರು ಪರೀಕ್ಷೆಗೆ ಒಳಪಟ್ಟು, 36 ಮಂದಿಗೆ ಸೋಂಕು ದೃಢಪಟ್ಟಿದೆ. ಪಿರಿಯಾಪಟ್ಟಣದ 934 ಶಿಕ್ಷಕರಲ್ಲಿ 786 ಶಿಕ್ಷಕರಿಗೆ ಪರೀಕ್ಷೆಗೆ ಒಳಪಟ್ಟಿದ್ದು, 28 ಮಂದಿಗೆ ಸೋಂಕು ದೃಢಪಟ್ಟಿದೆ. ತಿ.ನರಸೀಪುರದ 1,035 ಶಿಕ್ಷಕರಲ್ಲಿ 795 ಮಂದಿ ಪರೀಕ್ಷೆಗೆ ಒಳಪಟ್ಟಿದ್ದು, 25 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಇನ್ನೂ 3,849 ಶಿಕ್ಷಕರು ಕೊರೊನಾ ಪರೀಕ್ಷೆಗೆ ಒಳಪಟ್ಟಿಲ್ಲ. ಇದೇ ಅಂಕಿ-ಅಂಶಗಳನ್ನು ಕೇಂದ್ರ ಕಚೇರಿಗೆ ತಲುಪಿಸಲಾಗಿದೆ ಎಂದರು.

 

 

Translate »