43 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ
ಮೈಸೂರು

43 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ

July 7, 2018

ಮೈಸೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೀಗ ಹೈಸ್ಕೂಲ್ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಿದೆ.

ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಇಂದು ಡಿಡಿಪಿಐ ಮಮತಾ ಅವರು ಕೌನ್ಸಿಲಿಂಗ್ ನಡೆಸಿ ಬಿಇಡಿ ಪದವಿ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯಮಾವಳಿಯನುಸಾರ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ನಡೆಸಿ ಸ್ಥಳದಲ್ಲೇ ಆದೇಶ ಪ್ರತಿಗಳನ್ನೂ ವಿತರಿಸಿದರು.

ಮೈಸೂರು ಜಿಲ್ಲೆಯಲ್ಲಿ ಒಟ್ಟು 119 ಹೈಸ್ಕೂಲ್ ಶಾಲಾ ಶಿಕ್ಷಕರ ಹುದ್ದೆ ಖಾಲಿ ಇದ್ದು, ಆ ಪೈಕಿ 22 ಕನ್ನಡ, 3 ವಿಜ್ಞಾನ (ಪಿಸಿಎಂ), 9 ಸಿಬಿಝಡ್, 6 ಹಿಂದಿ ವಿಷಯದ ಶಿಕ್ಷಕರು ಮತ್ತು 3 ದೈಹಿಕ ಶಿಕ್ಷಕರು ಸೇರಿ ಒಟ್ಟು 43 ಮಂದಿಗೆ ಹೈಸ್ಕೂಲ್ ಶಿಕ್ಷಕರನ್ನಾಗಿ ಬಡ್ತಿ ನೀಡಲಾಯಿತು ಎಂದು ಡಿಡಿಪಿಐ ಮಮತಾ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಖಾಲಿ ಇರುವ ಗ್ರಾಮಾಂತರ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಹುದ್ದೆ ಪೈಕಿ ಶೇ.50 ರಷ್ಟನ್ನು ಬಡ್ತಿ ಮೂಲಕ ಹಾಗೂ ಉಳಿದ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿ ಕೊಳ್ಳಲು ಅವಕಾಶವಿದೆ. ಹಾಗೆಯೇ ಪ್ರಾಥ ಮಿಕ ಶಾಲೆಗಳಲ್ಲಿ ಖಾಲಿಯಾಗುವ ಶಿಕ್ಷಕರ ಹುದ್ದೆಗೆ ಸರ್ಕಾರ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮಾಡಬೇಕಾ ಗಿದೆ ಎಂದೂ ತಿಳಿಸಿದರು. ಬಡ್ತಿ ಸಂಬಂಧ ಪ್ರತಿಕ್ರಿಯೆ ನೀಡಿದ ಮೈಸೂರು ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಬಿ.ಅರುಣ್ ಕುಮಾರ್ ಅವರು, ಶಿಕ್ಷಕರ ಕೊರತೆ ಇದ್ದ ಕಾರಣ ವಿಷಯ ಬೋಧನೆಗೆ ತೊಂದರೆಯಾಗಿತ್ತು. ಇದೀಗ ಬಡ್ತಿ ಪ್ರಕ್ರಿಯೆ ಹಾಗೂ ಅತಿಥಿ ಶಿಕ್ಷಕರ ನೇಮಕ ಮಾಡಿರುವುದರಿಂದ ಸಮಸ್ಯೆ ಬಗೆಹರಿದಿದೆ.

ಶಾಲೆಗಳಲ್ಲಿ ಉತ್ತಮ ಶೈಕ್ಷಣಿ ಕ ವಾತಾವರಣ ಸೃಷ್ಟಿ ಮಾಡಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಪ್ರಯತ್ನಿಸುತ್ತೇವೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಸೋಮೇಗೌಡ, ಪ್ರೌಢ ಶಾಲಾ ಶಿಕ್ಷಕರಾಗಬೇಕೆಂದು ಹಲವು ವರ್ಷಗಳಿಂದ ಆಸೆ ಇಟ್ಟುಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ಸಂತಸ ತಂದಿದೆ ಎಂದರು. ಕಳೆದ ಮೂರು ವರ್ಷಗಳಿಂದ ಬಡ್ತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಡಿಡಿಪಿಐ ಅವರು ಅರ್ಹ ಬಿಇಡಿ ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸಿರು ವುದು ಶಿಕ್ಷಕ ಸಮುದಾಯಕ್ಕೆ ಪ್ರೋತ್ಸಾಹ ನೀಡಿ ದಂತಾಗಿದೆ ಎಂದು ಅವರು ತಿಳಿಸಿದರು.

Translate »