- ಅನರ್ಹಗೊಳಿಸಿದ್ದ ಸರ್ಕಾರಕ್ಕೆ ಮುಖಭಂಗ
- ವಿವಿ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
ಮೈಸೂರು: 2007ರಲ್ಲಿ ನೇಮಕವಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಹಂಗಾಮಿ ಕುಲಪತಿ ಪ್ರೊ. ಸಿ.ಬಸವರಾಜು ಸೇರಿದಂತೆ 9 ಪ್ರಾಧ್ಯಾ ಪಕರು, 30 ರೀಡರ್ ಗಳನ್ನು ಒಳಗೊಂಡಂತೆ ಎಲ್ಲಾ 113 ಬೋಧಕ ವರ್ಗದ ನೇಮಕ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಮೂರ್ತಿ ಬೋಪಣ್ಣ ಅವರು ಇಂದು ತೀರ್ಪು ನೀಡಿದ್ದು, ಮೈಸೂರು ವಿಶ್ವವಿದ್ಯಾನಿಲಯದ 113 ಮಂದಿ ಬೋಧಕ ವರ್ಗದ ನೇಮಕ ಕ್ರಮಬದ್ಧ ಎಂದು ತೀರ್ಪು ನೀಡಿದ್ದಾರೆ. ಪ್ರೊ. ಜೆ.ಶಶಿಧರ ಪ್ರಸಾದ್ ಅವರು ಕುಲಪತಿಗಳಾಗಿದ್ದಾಗ ಪ್ರೊ. ಸಿ. ಬಸವರಾಜು, ಪ್ರೊ. ಹೇಮಂತ್ ಕುಮಾರ್, ಪ್ರೊ. ರೈ, ಪ್ರೊ. ಶ್ರೀಧರ್ ಸೇರಿದಂತೆ ಮೈಸೂರು ವಿಶ್ವವಿದ್ಯಾನಿಲಯ 113 ಮಂದಿ ಬೋಧಕ ವರ್ಗವನ್ನು 2007 ರಲ್ಲಿ ನೇಮಕ ಮಾಡಲಾಗಿತ್ತು. ಈ ನೇಮ ಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ಸ್ಥಳೀಯವಾಗಿಯೂ ವ್ಯಾಪಕ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ನೇಮಕಾತಿ ಸಂಬಂಧ ತನಿಖೆ ನಡೆಸಲು ರಚನೆಯಾಗಿದ್ದ
ನ್ಯಾಯಮೂರ್ತಿ ರಂಗ ವಿಠ್ಠಲಾಚಾರ್ ನೇತೃತ್ವದ ಸಮಿತಿ, ಸದರಿ ನೇಮಕಾತಿ ನಿಯಮ ಬಾಹಿರವಾಗಿದ್ದು, ತಡೆಹಿಡಿಯುವಂತೆ ಶಿಫಾರಸು ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಆಧರಿಸಿ ರಾಜ್ಯ ಸರ್ಕಾರವು ಎಲ್ಲಾ 113 ಬೋಧಕ ವರ್ಗದ ನೇಮಕಾತಿ ಪ್ರಕ್ರಿಯೆಯನ್ನು ಅನರ್ಹಗೊಳಿಸಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ 113 ಮಂದಿ ಬೋಧಕ ವರ್ಗದವರು ಹೈಕೋರ್ಟ್ ಮೊರೆ ಹೋಗಿ, ತಡೆಯಾಜ್ಞೆ ತಂದಿದ್ದರು. ಅಂದಿನಿಂದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಇಂದು ಅಂತಿಮವಾಗಿ ತೀರ್ಪು ನೀಡಿದ ಹೈಕೋರ್ಟ್ ನ್ಯಾಯ ಮೂರ್ತಿ ಬೋಪಣ್ಣ ಅವರು, 113 ಮಂದಿ ಬೋಧಕ ವರ್ಗದ ನೇಮಕ ಎತ್ತಿ ಹಿಡಿದಿದೆ. ರಾಜ್ಯ ಸರ್ಕಾರದ ಕ್ರಮವೇ ಸರಿಯಿಲ್ಲ ಎಂದು ತೀರ್ಪು ನೀಡಿದ್ದಾರೆ. ನ್ಯಾಯಾಲಯದ ತೀರ್ಪಿನಿಂದ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, 113 ಮಂದಿಗೆ ಕಡೆಗೂ ನ್ಯಾಯ ದೊರಕಿದಂತಾಗಿದೆ. ಅಲ್ಲದೆ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜೆ.ಶಶಿಧರ ಪ್ರಸಾದ್ ಅವರ ಮೇಲಿದ್ದ ಅಕ್ರಮ ಕಳಂಕ ದೂರ ವಾದಂತಾಗಿದೆ. ಬೋಧಕ ವರ್ಗದ ಪರವಾಗಿ ಖ್ಯಾತ ಹೈಕೋರ್ಟ್ ವಕೀಲರಾದ ಅಶೋಕ್ ಹಾರ್ನಳ್ಳಿ ಹಾಗೂ ಭಾಗವತ್ ವಾದ ಮಂಡಿಸಿದ್ದರು.