ಧರ್ಮ ಕುಲಗೆಡಿಸಿದವರು ಸಚಿವಗಿರಿ  ಗಿಟ್ಟಿಸಿಕೊಳ್ಳಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ
ಮೈಸೂರು

ಧರ್ಮ ಕುಲಗೆಡಿಸಿದವರು ಸಚಿವಗಿರಿ  ಗಿಟ್ಟಿಸಿಕೊಳ್ಳಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ

July 7, 2018

ಕೊಳ್ಳೇಗಾಲ: -ಧರ್ಮ ಕುಲಗೆಡಿಸಿದವರು ಈಗ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಆ ವ್ಯಕ್ತಿ ಇಂದು ಸಮ್ಮಿಶ್ರ ಸರ್ಕಾರದಲ್ಲಿ ಸಚಿವಗಿರಿ ಗಿಟ್ಟಿಸಿಕೊಳ್ಳಲಾ ಗದೇ ವಿಲವಿಲ ಒದ್ದಾಡುತ್ತಿದ್ದಾರೆ.

ಹೀಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲರ ಬಗ್ಗೆ ಮಾರ್ಮಿಕ ವಾಗಿ ನುಡಿದವರು ಬಾಳೆಹೊನ್ನೂರು ಪೀಠದ ರಂಭಾಪುರಿ ಪೀಠಾಧ್ಯಕ್ಷರಾದ ಡಾ. ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ. ಅವರು ತಾಲೂಕಿನ ಹೊಸವಾಡಿ ವೀರ ಭದ್ರಸ್ವಾಮಿ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಅಯೋಜಿಸಲಾಗಿದ್ದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಕೆಲವರು ಬಸವಣ್ಣ ಅವರ ಹೆಸರೇಳಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿ ದ್ದಾರೆ. ಜಗಜ್ಯೋತಿ ಬಸವೇಶ್ವರರು ಸಮಾಜ ಕಟ್ಟುವ ಕೆಲಸ ಮಾಡಿದರೇ ವಿನಃ, ಸಮಾಜ ಒಡೆಯುವ ಕೆಲಸ ಮಾಡಲಿಲ್ಲ. ಆದರೆ ಬಸವಣ್ಣನ ವಿಚಾರಧಾರೆಗಳನ್ನು ಹೇಳುವ ಒಬ್ಬರು ಸಮಾಜವನ್ನು ಹಾಗೂ ಜನಾಂಗವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಧರ್ಮ ತ್ಯಜಿಸಿದವರ ಕುರಿತು ಇತ್ತೀಚೆಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಧ್ಯಮಗಳೊಂದಿಗೆ ಮಾತನಾಡಿದ್ದನ್ನು ನೀವು ಕೇಳಿದ್ದೀರಿ. ಎಂ.ಬಿ.ಪಾಟೀಲ್ ಮಾತು ಕೇಳಿ ನಾವು ಕೆಟ್ಟಿದ್ದೇವೆ. ಅವರ ಮಾತು ಕೇಳಬಾರದಿತ್ತು ಎಂದಿದ್ದಾರೆ. ಇಷ್ಟೇ ಸಾಕಲ್ಲವೇ. ಧರ್ಮ ಒಡೆಯಲು ಮುಂದಾದವರಿಗೆ ಏನಾಯಿತು ಎಂಬುದಕ್ಕೆ ಎಂದರು. ನಾವು ಮೆಚ್ಕೋತೀವಿ ವೀರಶೈವ ಲಿಂಗಾಯಿತ ಎರಡೂ ಒಂದೇ ಎಂಬ ಸಮಗ್ರತೆಯನ್ನು ಈ ನಾಡಿನ ಪ್ರಜ್ಞಾವಂತ ವೀರಶೈವ ಸಮಾಜದ ಬಂಧುಗಳು ಎತ್ತಿಹಿಡಿದರಲ್ಲಾ ನಿಮ್ಮನ್ನು ಎಷ್ಟು ಕೊಂಡಾಡಿದರೂ ಸಾಲದು. ದುಷ್ಟ ಶಕ್ತಿಗಳು ಈ ಪಂಚ ಪೀಠಗಳನ್ನು ಈ ಸಮಾಜದಿಂದ ದೂರವಿಡಬೇಕೆಂಬ ಕುತಂತ್ರ ನಡೆಸಿದರು ಎಂದು ದೂರಿದರು. ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಣ್ಣನವರು ವೀರಶೈವ ಧರ್ಮದ ಎರಡು ಕಣ್ಣುಗಳಿದ್ದಂತೆ. ಇದನ್ನು ವೀರಶೈವರೆಲ್ಲರೂ ಅರ್ಥೈಸಿಕೊಂಡಲ್ಲಿ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ.

ದುಷ್ಟ ಶಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಅಂತಹ ಶಕ್ತಿಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಸಾತ್ವಿಕ ಶಕ್ತಿ ಬೆಳೆಸುವುದೇ ವೀರಶೈವ ಧರ್ಮ. ವೀರಶೈವ ಯಾವುದೇ ಒಂದು ಧರ್ಮವಲ್ಲ ಒಂದು ಜನಾಂಗದ ಹಿತ ಕುರಿತು ಯೋಚಿಸಿಲ್ಲ. ಸಕಲ ಜೀವಾತ್ಮರಿಗೆ ಒಳ್ಳೆಯದಾಗಬೇಕು. ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆಯಿಂದ ಬಾಳಿ ಬದುಕಬೇಕು ಎಂಬ ತತ್ವಗಳನ್ನು ಈ ಧರ್ಮ ಒಳಗೊಂಡಿದೆ ಎಂದರು.

ನಮ್ಮವರಿಂದಲೇ ಡಾ. ಪ್ರೀತನ್‍ಗೆ ಸೋಲಾಯಿತು: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಾ.ಪ್ರೀತನ್ ನಾಗಪ್ಪ ಅವರಿಗೆ ಬಿಜೆಪಿಯಿಂದ ಅವಕಾಶ ಪ್ರಾಪ್ತವಾಗಿತ್ತು. ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನಾನು ಭಾವಿಸಿದ್ದೆ. ಆದರೆ ನಮ್ಮವರೇ ಕೆಲವು ಜನ ಕೈಯ್ಯಾಡಿಸಿದ ಕಾರಣ ಅವರಿಗೆ ಸೋಲಾಯಿತು ಎಂದು ವಿಷಾದಿಸಿದರು.

Translate »