ಧರ್ಮದ ಬಗ್ಗೆ ಇನ್ನು ಮುಂದೆ ಎಚ್ಚರ ವಹಿಸುವೆ…
ಮೈಸೂರು

ಧರ್ಮದ ಬಗ್ಗೆ ಇನ್ನು ಮುಂದೆ ಎಚ್ಚರ ವಹಿಸುವೆ…

December 9, 2018

ಚಾಮರಾಜನಗರ: ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಹೀಗಾಗಿ ನಾನು ಈಗ ಧರ್ಮದ ಬಗ್ಗೆ ಬಹಳ ಎಚ್ಚರಿಕೆ ಯಿಂದ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಉಂಟಾದ ಗೊಂದಲವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ವೀರಶೈವ-ಲಿಂಗಾಯತರಲ್ಲಿಗುರುಪರಂಪರೆ ಮತ್ತು ವಿರಕ್ತ ಪರಂಪರೆ ಎಂದು ಎರಡು ವಿಧ ಇದೆ. ಅದರಲ್ಲಿ ಒಂದು ವಿಧದವರು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಬೇಕು ಎಂದು ನನಗೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಮತ್ತೊಂದು ವಿಧದವರು ವೀರಶೈವವನ್ನು ಧರ್ಮ ಎಂದು ಘೋಷಿಸಬೇಕು ಎಂದು ಮನವಿ ಸಲ್ಲಿಸಿದರು. ಹೀಗಾಗಿ ನಾವು ಈ ಬಗ್ಗೆ ವರದಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಆಯೋಗಕ್ಕೆ ಎರಡೂ ಮನವಿಗಳನ್ನು ಕಳುಹಿಸಿಕೊಟ್ಟೆವು. ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಬಹುದು ಎಂದು ವರದಿ ಸಲ್ಲಿಸಿತ್ತು.

ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಶರಣ ಪ್ರಕಾಶ್ ಪಾಟೀಲ, ಮಲ್ಲಿಕಾರ್ಜುನ, ಶ್ಯಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ಚರ್ಚೆ ನಡೆಸಲಾಯಿತು. ಲಿಂಗಾಯತ ಮಾತ್ರ ಅಲ್ಲ ಬಸವ ತತ್ವ ಪಾಲಿಸುವ ವೀರಶೈವರು, ಲಿಂಗಾಯತ ಧರ್ಮದ ವ್ಯಾಪ್ತಿಗೆ ಸೇರಬಹುದು ಎಂದು ತಿದ್ದುಪಡಿಯನ್ನು ಮಾಡಲಾಗಿತ್ತು. ಇದರಲ್ಲಿ ನನ್ನ ಪಾತ್ರ ಇಲ್ಲ. ಆದರೂ ಈ ವಿವಾದದಲ್ಲಿ ನನ್ನ ಸಿಲುಕಿಸಲಾಯಿತು. ಹಾಗಾಗಿ ಇನ್ನು ಮುಂದೆ ನಾನು ಬಹಳ ಎಚ್ಚರಿಕೆಯಿಂದ ಧರ್ಮದ ಬಗ್ಗೆ ಮಾತನಾಡುತ್ತೇನೆ. ಏನಾದರೂ ಹೇಳಿದರೆ ಅವು ವಿವಾದ ಆಗುತ್ತವೆ ಎಂದರು.

Translate »