ಕೊಡಗಿನ ವಿನಾಶಕ್ಕೆ ನಾಂದಿ ಹಾಡುವ ರೈಲು, ಹೆದ್ದಾರಿ ಯೋಜನೆ ವಿರೋಧಿಸಿ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಕೊಡಗಿನ ವಿನಾಶಕ್ಕೆ ನಾಂದಿ ಹಾಡುವ ರೈಲು, ಹೆದ್ದಾರಿ ಯೋಜನೆ ವಿರೋಧಿಸಿ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ

December 9, 2018

ಮಡಿಕೇರಿ: ಕೊಡಗಿನ ವಿನಾಶಕ್ಕೆ ನಾಂದಿಯಾಗಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗಗಳನ್ನು ವಿರೋಧಿಸಿ ‘ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ’ ಮಡಿಕೇರಿಯಲ್ಲಿ ಇಂದು ಬೃಹತ್ ರ್ಯಾಲಿ ಹಾಗೂ ಜನಜಾಗೃತಿ ಸಭೆ ಏರ್ಪಡಿಸಿತ್ತು.

ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಿಂದ ಗಾಂಧಿ ಮೈದಾನ ದವರೆಗೆ ರ್ಯಾಲಿ ನಡೆಯಿತು. ಇದರಲ್ಲಿ ‘ಕೊಡಗನ್ನು ರಕ್ಷಿಸಿ, ಕಾವೇರಿ ನದಿಯನ್ನು ಉಳಿಸಿ’ ಘೋಷಣೆಗಳನ್ನು ಕೂಗಲಾಯಿತು. ನಂತರ ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಭೆ ನಡೆಯಿತು. ರ್ಯಾಲಿ ಮತ್ತು ಸಭೆಯಲ್ಲಿ ಖ್ಯಾತ ಪರಿಸರವಾದಿ ಹಾಗೂ ಚಿತ್ರ ನಿರ್ಮಾಪಕ ಸುರೇಶ್ ಹೆಬ್ಳೀಕರ್, ಯುಕೋ ಸಂಚಾಲಕ ಮಂಜು ಚಿಣ್ಣಪ್ಪ, ಕಾವೇರಿ ಸೇನೆ ಅಧ್ಯಕ್ಷ ರವಿ ಚೆಂಗಪ್ಪ, ಕೊಡಗು ಮಾರಕ ಯೋಜನೆ ವಿರೋಧಿ

ವೇದಿಕೆಯ ಸಂಚಾಲಕ ರಾಜೀವ್ ಬೋಪಣ್ಣ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯ ದರ್ಶಿ ಪದ್ಮಿನಿ ಪೊನ್ನಪ್ಪ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ನಿವೃತ್ತ ಮೇಜರ್ ನಂದಾ ಬಿದ್ದಪ್ಪ, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ, ಮಾಚಿಮಂಡ ರವೀಂದ್ರ, ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಚಂದ್ರಮೋಹನ್ ಇತರರು ಭಾಗವಹಿಸಿದ್ದರು. ಈ ರ್ಯಾಲಿಗೆ ಕೊಡಗು ಮಾತ್ರವಲ್ಲದೆ ಮೈಸೂರು, ಬೆಂಗಳೂರು ಇನ್ನಿತರೆಡೆಯಿಂದ ಸಾವಿರಾರು ಪರಿಸರ ಪ್ರೇಮಿಗಳು ಆಗಮಿಸಿದ್ದರು.

ಸಭೆಯಲ್ಲಿ ಮಾತನಾಡಿದ ಖ್ಯಾತ ಪರಿಸರವಾದಿ ಚಲನಚಿತ್ರ ನಿರ್ಮಾಪಕ ಸುರೇಶ್ ಹೆಬ್ಳೀಕರ್, ಪಶ್ಚಿಮ ಘಟ್ಟ ಶ್ರೇಣಿಗಳು ವಿನಾಶದ ಹಾದಿ ಹಿಡಿದಿದ್ದು, ಇವುಗಳನ್ನು ರಕ್ಷಿಸದೇ ಹೋದರೆ ಭವಿಷ್ಯದಲ್ಲಿ ಮಹಾ ವಿಪತ್ತುಗಳು ಎದುರಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಹಸಿರು ಎಂಬುದು ಕೇವಲ ಬಣ್ಣವಲ್ಲ, ಅದು ಮುಂದಿನ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಸಂಕೇತ ಎಂದು ವ್ಯಾಖ್ಯಾನಿಸಿದ ಅವರು, 90 ದಶಲಕ್ಷ ವರ್ಷಗಳ ಹಿಂದೆ ಉಗಮವಾದ ಪಶ್ಚಿಮ ಘಟ್ಟದಿಂದ ದಕ್ಷಿಣ ಭಾರತದ ಬದುಕು ನಿಂತಿದೆ. ಕಾವೇರಿ ಸೇರಿದಂತೆ 52 ನದಿಗಳು ಪಶ್ಚಿಮ ಘಟ್ಟದಿಂದ ಜೀವ ತಳೆದಿದ್ದು, ಈ ನದಿ ನೀರನ್ನು ನಂಬಿ ದಕ್ಷಿಣ ಭಾರತದ ಶೇಕಡ 60% ರಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯದಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಕಳೆದ 40 ವರ್ಷಗಳ ಅವಧಿಯಲ್ಲಿ 20 ಲಕ್ಷ ಮರ ಕಡಿಯಲಾಗಿದೆ. ಹೀಗಾಗಿ ಶೇ.35ರಷ್ಟು ಕಾಡು ನಾಶವಾಗಿದೆ. ಅಮೂಲ್ಯ ಪಶ್ಚಿಮ ಘಟ್ಟವನ್ನು ಮಾರಕ ಯೋಜನೆಗಳಿಗೆ ಬಲಿ ಕೊಡಲು ಬಿಡದೇ ಜನ ಜಾಗೃತಿ ಮೂಲಕ ಪ್ರಕೃತಿ ರಕ್ಷಣೆಯ ಕೂಗನ್ನು ವಿಸ್ತರಿಸಬೇಕೆಂದು ಅವರು ಕರೆ ನೀಡಿದರು.

ಯುನೈಟೆಡ್ ಕೊಡವ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸರಕಾರಗಳು ಮಾರಕ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿ ಕೊಡಗು ಜಿಲ್ಲೆಯನ್ನು ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಿವೆ ಎಂದು ಆರೋಪಿಸಿದರು. ಕೇರಳದಲ್ಲಿ ನೂತನ ಏರ್‍ಪೋರ್ಟ್ ತಲೆ ಎತ್ತಿದ್ದು, ಚತುಷ್ಟಥ ಹೆದ್ದಾರಿ ಯೋಜನೆಗೆ ಕೇರಳವೂ ಒತ್ತಡ ಹೇರುತ್ತಿದೆ. ಜಿಲ್ಲೆಯನ್ನು ಅಭಿವೃದ್ಧಿಯ ಹೆಸರÀಲ್ಲಿ ಬಲಿ ಕೊಡಲು ಹೊರಟವರು ಕೇರಳದ ಹೆದ್ದಾರಿಗಳನ್ನು ಮೊದಲು ನೋಡಿ ತಿಳಿದುಕೊಳ್ಳಲಿ. ಆ ಬಳಿಕ ಹೈವೇ ನಿರ್ಮಾಣ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಹೈವೇ ಪರ ಆಸಕ್ತಿ ತೋರಿದವರಿಗೆ ಸವಾಲೆಸೆದರು. ಇದೀಗ ಸಾಂಕೇತಿಕ ಹೋರಾಟ ಮಾತ್ರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಟಾನವಾಗಲು ಬಿಡುವುದಿಲ್ಲ ಎಂದು ಮಂಜು ಚಿಣ್ಣಪ್ಪ ಸ್ಪಷ್ಟಪಡಿಸಿದರು.

ಕಾವೇರಿ ಸೇನೆಯ ರವಿ ಚಂಗಪ್ಪ ಮಾತನಾಡಿ, ಪರಿಸರ ಉಳಿಸುವ ಕುರಿತು ಜನಜಾಗೃತಿ ಸಭೆ ನಡೆಸಲು ಮುಂದಾದಾಗ ಕೆಲವು ಸಂಘಟನೆಗಳು ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿವೆ. ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಪೂರ್ವ ನಿಗದಿಯಂತೆ ಅನುಮತಿ ಪಡೆದುಕೊಂಡು ಕಾರ್ಯಕ್ರಮ ಆಯೋಜಿಸಿದ್ದು, ಅಡ್ಡಿಪಡಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು, ಪೊಲೀಸರು ಕೂಡ ಎಫ್‍ಐಆರ್ ದಾಖಲಿಸುವ ಮೂಲಕ ಅವರಿಗೆ ಪಾಠ ಕಲಿಸಬೇಕೆಂದು ಒತ್ತಾಯಿಸಿದರು. ಮಾರಕ ಯೋಜನೆಗಳ ಪರವಿರುವ ಕೆಲವು ಜನರ ವಿರುದ್ಧ ಜನಜಾಗೃತಿಯನ್ನು ಮೂಡಿಸಬೇಕಿದೆ ಎಂದು ರವಿಚಂಗಪ್ಪ ಹೇಳಿದರು.

ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯ ಸಂಚಾಲಕ ರಾಜೀವ್ ಬೋಪಯ್ಯ ಮಾತನಾಡಿ, ರಾಷ್ಟೀಯ ಹೆದ್ದಾರಿಗೆ ಬೆಂಬಲ ಸೂಚಿಸುವ ಕೆಲ ನಾಯಕರು ಮತ್ತು ಸಂಘಟನೆಗಳ ಪ್ರಮುಖರು ಕಮಿಷನ್ ಆಸೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯನ್ನು ರಕ್ಷಿಸಲು ಹೋರಾಟ ಪ್ರಾರಂಭಗೊಂಡಿದ್ದು ಮರಳು ಮತ್ತು ಟಿಂಬರ್ ಲಾಬಿಗಳು ಅಡ್ಡಗಾಲು ಹಾಕುತ್ತಿವೆ. ಈ ಶಕ್ತಿಗಳು ತಲಕಾವೇರಿಯಲ್ಲಿ ನಡೆಸುವ ಅನ್ನದಾನಕ್ಕೂ ಅಡ್ಡಿಪಡಿಸಿವೆ. ಮಾತ್ರವಲ್ಲದೆ ಜನರ ಬಾಳಿಗೂ ಅಡ್ಡಿಯಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೈವೇ ನಿರ್ಮಾಣವಾದರೆ ಸ್ಥಳೀಯ ಜನರು ಸ್ಥಳಾಂತರವಾಗಬೇಕಾದ ಅನಿವಾರ್ಯತೆಯೂ ಎದುರಾಗಲಿದೆ. ಜಿಲ್ಲೆಯ ಪರಿಸರ ಕೂಡ ನಾಶವಾಗಲಿದೆ ಎಂದು ರಾಜೀವ್ ಬೋಪಯ್ಯ ಆತಂಕ ವ್ಯಕ್ತಪಡಿಸಿದರಲ್ಲದೇ, ಯಾವುದೇ ಕಾರಣಕ್ಕೂ ಹೋರಾಟವನ್ನು ಕೈ ಬಿಡುವ ಪ್ರಶ್ನೆಯೆ ಇಲ್ಲ ಎಂದು ಸ್ಟಷ್ಟಪಡಿಸಿದರು. ಇದೇ ಸಂದರ್ಭ ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಹೆದ್ದಾರಿ ವಿರೋಧದ ಕುರಿತು ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಪದ್ಮಿನಿ ಪೊನ್ನಪ್ಪ, ಹೆದ್ದಾರಿ ನಿರ್ಮಾಣ, ರೈಲ್ವೇ ಮಾರ್ಗ, ಕಾಡು ಕಡಿದು ಕಟ್ಟಡ ಕಟ್ಟುವುದು ಮಾತ್ರ ಅಭಿವೃದ್ದಿಯಲ್ಲ. ಅರಣ್ಯ ಮತ್ತು ಪ್ರಕೃತಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಕೂಡ ಅಭಿವೃದ್ದಿಯ ಸಂಕೇತ ಎಂಬುದನ್ನು ಸರಕಾರಗಳು ಮನಗಾಣಬೇಕಿದೆ ಎಂದು ಹೇಳಿದರು. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಮಾರಕ ಯೋಜನೆ ವಿರೋಧಿಸುವ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸುವಂತೆಯೂ ಆಗ್ರಹಿಸುವುದಾಗಿ ಭರವಸೆ ನೀಡಿದರು. ಪ್ರಕೃತಿಗೆ ವಿರುದ್ಧವಾಗಿ ಅಭಿವೃದ್ಧಿ ಯೋಜನೆ ರೂಪಿಸಿದರೆ ವಿಪ್ತತುಗಳು ಎದುರಾಗುತ್ತದೆ. ಕೆಲವೇ ತಿಂಗಳ ಹಿಂದೆ ಇಂತಹ ವಿಪತ್ತನ್ನು ಕೊಡಗು ಜಿಲ್ಲೆ ಕಂಡಿದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ಪದ್ಮಿನಿ ಪೊನ್ನಪ್ಪ ಸಲಹೆ ನೀಡಿದರು. ಕಾರ್ಯಕ್ರಮದ ಕುರಿತು ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಚಂದ್ರಮೋಹನ್ ಮಾತನಾಡಿದರು.

ಯೋಜನೆಗಳ ಬೆಂಬಲಿಸಿ ಕೆಲ ಸಂಘಟನೆಗಳ ಘೋಷಣೆ
ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಮನುಮುತ್ತಪ್ಪ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದರು.

ರೈಲು ಯೋಜನೆ, ಚತುಷ್ಪಥ ಹೆದ್ದಾರಿ ವಿರೋಧಿಸಿ ನಗರದ ಗಾಂಧಿ ಮೈದಾನಕ್ಕೆ ಜಾಥಾ ಆಗಮಿಸುತ್ತಿದ್ದಂತೆಯೇ, ‘ಸೇವ್ ಕೊಡಗು’ ಹಾಗೂ ಇತರ ಸಂಘಟನೆಗಳ ಪ್ರಮುಖರು ಮನು ಮುತ್ತಪ್ಪ ನೇತೃತ್ವದಲ್ಲಿ ಯೋಜನೆಯ ಪರ ಘೋಷಣೆ ಕೂಗಿದರು. ಮಾತ್ರವಲ್ಲದೇ ನಕಲಿ ಪರಿಸರವಾದಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾ ಯಿತು. ಈ ಸಂದರ್ಭ ಕಾರ್ಯ ಕ್ರಮ ಆಯೋಜಿಸಿದ್ದ ‘ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ’ ಪದಾಧಿಕಾರಿಗಳು ಮತ್ತು ಯೋಜನೆಗೆ ಬೆಂಬಲ ವ್ಯಕ್ತಪಡಿಸಿದವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕಾರ್ಯಕ್ರಮಕ್ಕೆ ಯೋಜನೆ ವಿರೋಧಿಸುವವರನ್ನು ಮಾತ್ರ ಆಹ್ವಾನಿಸಲಾಗಿದೆ. ಬೆಂಬಲ ನೀಡುವವರನ್ನು ಕರೆದಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಸ್ಪಷ್ಟಪಡಿಸಿದರು. ಈ ಸಂದರ್ಭ ಯೋಜನೆಯ ಸಾಧಕ-ಬಾಧಕಗಳನ್ನು ಕೂಡ ತೆರೆದ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಯೋಜನೆಯ ಪರ ವಾದಿಸುವವರು ಪಟ್ಟು ಹಿಡಿದರಲ್ಲದೆ, ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರಿನಿಂದ ಜನರನ್ನು ಕರೆಸಲಾಗಿದೆ. ಕೊಡಗಿನ ಸ್ಥಳೀಯರು ಯಾರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ವಾದಿಸಿದರು.

ಕಾರ್ಯಕ್ರಮದ ಸಭಾಂಗಣದಲ್ಲಿ ನೆರೆದವರಲ್ಲಿ ಪರ-ವಿರೋಧ ತಂಡಗಳಾಗಿ ವಿಂಗಡಿಸಲ್ಪಟ್ಟಿತ್ತಲ್ಲದೇ, ಮಧ್ಯದಲ್ಲಿ ಪೊಲೀಸರು ನಿಂತುಕೊಂಡಿದ್ದರು. ಕಾರ್ಯಕ್ರಮವನ್ನು ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿಯ ಸಂಚಾಲಕ ಕರ್ನಲ್ (ನಿವೃತ್ತ) ಸಿ.ಪಿ. ಮುತ್ತಣ್ಣ ಉದ್ಘಾಟಿಸುತ್ತಿದ್ದಂತೆಯೇ ಯೋಜನೆಯ ಪರವಿದ್ದ ತಂಡ ಧಿಕ್ಕಾರದ ಘೋಷಣೆ ಕೂಗಿ, ಕಾರ್ಯಕ್ರಮಕ್ಕೆ ಅಡಿಪಡಿಸಿತು. ಈ ಸಂದರ್ಭ ಕಾರ್ಯಕ್ರಮ ಆಯೋಜಕರು, ನಮ್ಮ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆಯಿಂದ ಅನುಮತಿ ಪಡೆಯಲಾಗಿದೆ. ಕಾರ್ಯಕ್ರಮಕ್ಕೆ ವಿರೋಧದ ನೆಪದಲ್ಲಿ ಅಡ್ಡಿಪಡಿಸುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಬಳಿಕ ಡಿವೈಎಸ್‍ಪಿ ಸುಂದರ್ ರಾಜ್ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದ ಸುಮಾರು 70ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಮೈದಾನದಿಂದ ಹೊರ ಕಳುಹಿಸಲಾಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಮುಖಂಡರಾದ ಮನುಮುತ್ತಪ್ಪ, ತಳೂರು ಕಿಶೋರ್ ಕುಮಾರ್, ಬೆಪ್ಪುರನ ಮೇದಪ್ಪ, ಸೇವ್ ಕೊಡಗು ಸಂಘಟನೆಯ ಮಧು ಬೋಪಣ್ಣ, ಜಿನ್ನು ನಾಣಯ್ಯ, ದಿನೇಶ್, ಕಾಳನ ರವಿ, ಪಟ್ರಪಂಡ ರಘು ನಾಣಯ್ಯ, ಸೇರಿದಂತೆ ಮತ್ತಿತರರು ಹಾಜರಿದ್ದರು.

ನಕಲಿ ಪರಿಸರವಾದಿಗಳು ಕೊಡಗಿನ ಅಭಿವೃದ್ದಿಗೆ ಮಾರಕವಾಗುತ್ತಿದ್ದಾರೆ. ಪ್ರತಿ ದಿನ 10 ಇಮೇಲ್‍ಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸುವ ಮೂಲಕ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರೈಲು, ಹೆದ್ದಾರಿ ಬೇಡ ಎನ್ನುವವರು ಕೊಡಗಿನಲ್ಲಿ ನೆಲೆ ನಿಂತವರಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಬೆಂಗಳೂರು, ಮೈಸೂರಿನಿಂದ ಕರೆಸಲಾಗಿದೆ. ಹೊರ ಊರುಗಳಿಂದ ಬಂದು ಇಲ್ಲಿ ಪರಿಸರದ ಪಾಠ ಮಾಡುವುದು ಬೇಡ.
-ಮನು ಮುತ್ತಪ್ಪ, ಜಿಲ್ಲಾ ಬಿಜೆಪಿ ಮುಖಂಡ

ಕೊಡಗಿನ ಪರಿಸರದ ಹೆಸರು ಹೇಳಿಕೊಂಡು 20 ಲಕ್ಷ ರೂ. ಸಂಗ್ರಹಿಸಲಾಗಿದೆ. ಕೊಡಗಿನ ದೇವರಕಾಡು, ಮಂದ್, ಮಾನಿ, ಕೈಮಡ, ಹಬ್ಬ ಹರಿದಿನಗಳಲ್ಲಿ ಒಂದು ದಿನವೂ ಸೇರದವರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕೂಟಿಯಾಲ ಕಡಮಕಲ್ಲು ರಸ್ತೆಗೆ ವಿರೋಧಿಸಿದವರಿಂದ ಅಭಿವೃದ್ದಿ ಸಾಧ್ಯವಿಲ್ಲ. ಮಾರಕ ಯೋಜನೆ ಹೆಸರಲ್ಲಿ ಕೊಡಗಿನ ವಿವಿಧ ಜನಾಂಗಗಳನ್ನು ಎತ್ತಿಕಟ್ಟುತ್ತಿದ್ದಾರೆ. ನಕಲಿ ಪರಿಸರವಾದಿಗಳನ್ನು ಕೊಡಗಿನಿಂದಲೇ ಹೊರಹಾಕಬೇಕಿದೆ.
-ಮಧು ಬೋಪಣ್ಣ, ಸೇವ್ ಕೊಡಗು ವೇದಿಕೆ

Translate »