ಚಾಮರಾಜನಗರದಲ್ಲಿ ನಳಂದ ವಿವಿ ಕಟ್ಟಡಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
ಮೈಸೂರು

ಚಾಮರಾಜನಗರದಲ್ಲಿ ನಳಂದ ವಿವಿ ಕಟ್ಟಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

December 9, 2018

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರ ಸಮೀಪದ ಯಡಬೆಟ್ಟದಲ್ಲಿ ನಳಂದ ವಿಶ್ವವಿದ್ಯಾನಿಲಯ, ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಕಟ್ಟಡಕ್ಕೆ ಇಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇತಿಹಾಸದೊಂದಿಗೆ ಗತಿಸಿ ಹೋಗಿದ್ದ 12ನೇ ಶತಮಾನದ ನಳಂದ ವಿಶ್ವವಿದ್ಯಾಲಯಕ್ಕೆ ಇಂದು ಪುನರ್‍ಜನ್ಮ ನೀಡಿದ್ದು, ಈ ದಿನ ಚರಿತ್ರಾರ್ಹ ದಿನವಾಗಿದೆ. ಮಾತ್ರವಲ್ಲ ಇದೊಂದು ಚಾರಿತ್ರಾರ್ಹ ಕಾರ್ಯಕ್ರಮ ಎಂದರು.

ಸಮಾಜದಲ್ಲಿ ಅಂದು ಇದ್ದ ಅಸಮಾನತೆ, ಶೋಷಣೆ, ಅಮಾನವೀಯ ಪದ್ಧತಿಯಿಂದ ಹೊಸ ಧರ್ಮಗಳು ಹುಟ್ಟಿಕೊಂಡವು. ಅದರಲ್ಲಿ ಬೌದ್ಧ ಧರ್ಮವೂ ಒಂದು. ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್, ಹಿಂದೂ ಧರ್ಮದ ಸುಧಾರಣೆಗಾಗಿ ಬಹಳ ಶ್ರಮ ವಹಿಸಿದ್ದರು. ಆದರೆ ಹಿಂದೂ ಧರ್ಮದಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಅರಿತ ಅಂಬೇಡ್ಕರ್, ಬೌದ್ಧ ಧರ್ಮ ಸ್ವೀಕರಿಸಿದರು. ಅವರು ಅನುಸರಿಸಿದ ಧರ್ಮದ ಮೌಲ್ಯಗಳನ್ನು ಅರಿಯುವ ಉದ್ದೇಶದಿಂದ ಬೌದ್ಧ ವಿಶ್ವ ವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು. ಮನುಷ್ಯ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದೇ ಮಾನವ ಧರ್ಮ. ವಚನ ಸಾಹಿತ್ಯ, ಹರಿದಾಸ ಸಾಹಿತ್ಯ ಜನರಿಗೆ ಗೊತ್ತಾಗಬೇಕು. ದಾಸ್ಯ ಮನೋಭಾವದಿಂದ ಮೊದಲು ನಾವು ಹೊರ ಬರಬೇಕು. ಅದೇ ನಾವು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ ಎಂದ ಸಿದ್ದರಾಮಯ್ಯ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಿರ್ಮಾಣವಾಗುತ್ತಿರುವ ನಳಂದ ವಿಶ್ವವಿದ್ಯಾಲಯದಲ್ಲಿ ಜೀವನದ ಮೌಲ್ಯ, ಸ್ವಾಭಿಮಾನ, ಸಮಾನತೆ ತಿಳಿಸುವ ವಿದ್ಯೆ ಸಿಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಭಂತೆ ಆನಂದ ಮಹಾಥೇರರು, ಚಾಮರಾಜನಗರ ಜಿಲ್ಲೆಯ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಭಂತೆ ಧಮ್ಮಾನಂದ ಥೇರರು, ಉಪಾಧ್ಯಕ್ಷ ಭಂತೆ ಮನೋರಕ್ಷಿತಾ ಥೇರರು, ಟ್ರಸ್ಟ್‍ನ ಭಂತೇ ಭೋದಿದತ್ತ ಅವರು ಸೇರಿದಂತೆ ಹಲವು ಪೂಜ್ಯ ಭಿಕ್ಷು ಸಂಘದವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಎನ್.ಮಹೇಶ್, ಆರ್.ನರೇಂದ್ರ, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಆರ್.ಧರ್ಮಸೇನಾ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು, ಎಸ್.ಜಯಣ್ಣ, ಕಳಲೆ ಕೇಶವಮೂರ್ತಿ, ಜಿಪಂ ಅಧ್ಯಕ್ಷ ಶಿವಮ್ಮ, ಉಪಾಧ್ಯಕ್ಷ ಯೋಗೇಶ್ ಸೇರಿದಂತೆ ಇತರರು ಹಾಜರಿದ್ದರು.

Translate »