ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್‌  ಅಭಿವೃದ್ಧಿ ಯೋಜನೆಗೆ ತಿಂಗಳಲ್ಲಿ ಟೆಂಡರ್
ಮೈಸೂರು

ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್‌ ಅಭಿವೃದ್ಧಿ ಯೋಜನೆಗೆ ತಿಂಗಳಲ್ಲಿ ಟೆಂಡರ್

December 9, 2018

ಮೈಸೂರು: ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕೆಆರ್‌ಎಸ್‌ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ತಿಂಗಳಲ್ಲಿ ಜಾಗತಿಕ ಟೆಂಡರ್(ಗ್ಲೋಬಲ್ ಟೆಂಡರ್) ಕರೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದಾರೆ.

ಕೃಷ್ಣರಾಜಸಾಗರ (ಕೆಆರ್‌ಎಸ್‌)ಕ್ಕೆ ಭೇಟಿ ನೀಡಿ ಉದ್ದೇಶಿತ ಯೋಜನೆ ಸಂಬಂಧ ಬೃಂದಾವನ, ನಾರ್ತ್‍ಬ್ಯಾಂಕ್ ಮತ್ತು ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೆ ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಸಂಸದ ಎಲ್.ಆರ್.ಶಿವರಾಮೇ ಗೌಡ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ಅಲ್ಲಿನ ಕಾವೇರಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವ ಕುಮಾರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಪ್ರಸ್ತುತ ಇರುವ ಬೃಂದಾವನವನ್ನು ಯಥಾವತ್ತಾಗಿ ಉಳಿಸಿಕೊಂಡು ಕೆಆರ್‌ಎಸ್‌ ಅಣೆಕಟ್ಟೆ ಸುರಕ್ಷತೆಗೆ ಧಕ್ಕೆ ಬಾರದ ಹಾಗೆ ಸರ್ಕಾರದಿಂದ ಒಂದೇ ಒಂದು ರೂ. ಖರ್ಚು ಮಾಡದೆ 336 ಎಕರೆ ಸರ್ಕಾರಿ ಬಂಜರು ಭೂಮಿಯನ್ನು ಬಳಸಿಕೊಂಡು ಸಾರ್ವಜನಿಕ ಸಹಭಾಗಿತ್ವ(PPP)ದಲ್ಲಿ ಕೆಆರ್‌ಎಸ್‌ ಅನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಈ ಯೋಜನೆಗೆ ಸಚಿವ ಸಂಪುಟದ ಎಲ್ಲಾ ಸದಸ್ಯರು ಸರ್ವಾನು ಮತದಿಂದ ಅಂಗೀಕರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗಿದೆ. ದೇಶದ ಹಾಗೂ ನಾಡಿನ ಸಂಸ್ಕೃತಿ, ಇತಿಹಾಸ, ಪರಂಪರೆ ಯನ್ನು ಬಿಂಬಿಸುವ ಹಾಗೂ ಉಳಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದಾಗಿ ನುಡಿದರು.

ಕೆಆರ್‌ಎಸ್‌ ಅನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿಸಿ, ವಿಶ್ವದ ವಿವಿಧ ದೇಶಗಳು ಹಾಗೂ ದೇಶದ ಹಲವು ರಾಜ್ಯಗಳ ಪ್ರವಾಸಿಗರನ್ನು ಆಕರ್ಷಸುವ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವುದು ಹಾಗೂ ಸ್ಥಳೀಯರಿಗೆ ಉದ್ಯೋಗಾ ವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಡಿ.ಕೆ.ಶಿವಕುಮಾರ್ ನುಡಿದರು. ಅಂದಿನ ಮೈಸೂರು ಮಹಾ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸಂಪತ್ತನ್ನು ತ್ಯಾಗ ಮಾಡಿ ಕೆಆರ್‌ಎಸ್‌ ಅಣೆಕಟ್ಟೆ ನಿರ್ಮಿಸಿದ ಪರಿಣಾಮ ಇಂದು ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದೆಯಲ್ಲದೆ, ಕೃಷಿ ಭೂಮಿ ಸಂಪದ್ಭರಿತವಾಗಿವೆ ಎಂದು ಸ್ಮರಿಸಿದ ಸಚಿವರು, ಅವರ ಹೆಜ್ಜೆ ಗುರುತನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಆರ್‌ಎಸ್‌ ಅಭಿವೃದ್ಧಿ ಪಡಿಸಲು ಸರ್ಕಾರ ಪ್ರಯತ್ನಿ ಸುತ್ತಿದೆ ಎಂದರು.

ಪ್ರತೀ ದಿನ ಕನಿಷ್ಠ 30 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿ ಎರಡು ದಿನ ವಾಸ್ತವ್ಯ ಹೂಡಿ ಮಕ್ಕ ಳೊಂದಿಗೆ ಕಾಲ ಕಳೆಯಬೇಕು. ಅದರೊಟ್ಟಿಗೆ ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಪ್ರವಾಸಿ ತಾಣಗಳೂ ಸಹ ಅಭಿವೃದ್ಧಿಯಾಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಇದೇ ಸಂದರ್ಭ ನುಡಿದರು.

ಈ ಯೋಜನೆ ಅನುಷ್ಠಾನಕ್ಕಾಗಿ ಸಲಹೆ-ಮಾರ್ಗದರ್ಶನ ಪಡೆಯುವ ಸಲುವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಅದರಲ್ಲಿ ನಾಲ್ಕೂ ಜಿಲ್ಲೆಗಳ ಜಿಲ್ಲಾ ಮಂತ್ರಿಗಳು, ಸಂಸದರು, ಜನಪ್ರತಿನಿಧಿಗಳಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಹಾಗೂ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನಿಂದ ಒಬ್ಬ ತಜ್ಞರು, ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಿಸಿಕೊಟ್ಟ ಹರಿಖೋಡೆ ಕುಟುಂಬದ ಒಬ್ಬರು ಹಾಗೂ ರಾಜಮನೆತನದ ಒಬ್ಬ ಪ್ರತಿನಿಧಿಗಳನ್ನು ಸಮಿತಿಗೆ ಸೇರಿಸಿಕೊಂಡು ಅವರ ಸಲಹೆಗಳನ್ನು ಪಡೆಯಲು ತೀರ್ಮಾನಿಸಿದ್ದೇವೆ ಎಂದು ಶಿವಕುಮಾರ್ ಇದೇ ವೇಳೆ ತಿಳಿಸಿದರು.

ಪ್ರಸ್ತುತ ಇರುವ 74 ಎಕರೆ ಬೃಂದಾವನವನ್ನು ಯಥಾಸ್ಥಿತಿ ಉಳಿಸಿ ಪುನರುಜ್ಜೀವನಗೊಳಿಸಲಾಗುತ್ತದೆ. ಅದಕ್ಕೆ ಹೊಂದಿಕೊಂಡಂತಿರುವ ತೋಟಗಾರಿಕೆ, ನೀರಾವರಿ ನಿಗಮ ಹಾಗೂ ಕಂದಾಯ ಇಲಾಖೆಗೆ ಸೇರಿದ 336 ಎಕರೆ ಸರ್ಕಾರಿ ಭೂಮಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್‌ ಅನ್ನು ಅಭಿವೃದ್ಧಿ ಮಾಡಲಾಗುವುದು ಎಂದ ಸಚಿವರು, ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ವಾದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಸ್ಥಾನ ಮೂಲದ ಸಿನ್ಸರ್ ಆರ್ಕಿಟೆಕ್ಟ್ಸ್ ಇಂಜಿನಿಯರ್ಸ್ ಪ್ರೈ.ಲಿ.ಸಂಸ್ಥೆಯು ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ಅಭಿವೃದ್ಧಿ ಪಡಿಸಲು ವಿನ್ಯಾಸ ಮಾಡಿದ್ದು, ಇನ್ನೊಂದು ತಿಂಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆದು ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಬೃಂದಾವನ ಯಥಾಸ್ಥಿತಿ

ಮೈಸೂರು: ಸರ್ಕಾರ ಅನುಷ್ಠಾನಗೊಳಿಸಲುದ್ದೇಶಿಸಿರುವ ಡಿಸ್ನಿಲ್ಯಾಂಡ್ ಮಾದರಿಯ ಕೆಆರ್‌ಎಸ್‌ ಅಭಿವೃದ್ಧಿಯಿಂದ ಪ್ರಸ್ತುತ ಬೃಂದಾವನ ಗಾರ್ಡನ್ ಹೊರತು ಪಡಿಸಲಾಗಿದೆ. ಇದಕ್ಕೆ ಯಾವುದೇ ಅಡಚಣೆ ಮಾಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಪ್ರಸ್ತುತ ಇರುವ ವಿಶ್ವ ಪ್ರಸಿದ್ಧ ಕೆಆರ್‌ಎಸ್‌ನ ಬೃಂದಾವನ ಉದ್ಯಾನವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಮತ್ತಷ್ಟು ಆಕರ್ಷಣೀಯವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅಂದಿನ ಮೈಸೂರು ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಶ್ರಮ, ಪ್ರಯತ್ನದಿಂದ ನಿರ್ಮಿಸಿರುವ ಕೃಷ್ಣರಾಜಸಾಗರ ಅಣೆಕಟ್ಟೆ ಹಾಗೂ ಬೃಂದಾವನ ಗಾರ್ಡನ್‍ಗೆ ಯಾವುದೇ ಧಕ್ಕೆಯಾಗದಂತೆ ಡಿಸ್ನಿಲ್ಯಾಂಡ್ ಮಾದÀರಿ ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ನುಡಿದರು.

ಈ ಯೋಜನೆಯಿಂದ ನಿಸರ್ಗಕ್ಕಾಗಲಿ, ಕೃಷಿ ಭೂಮಿಗಾಗಲೀ ತೊಂದರೆಯಾಗುವು ದಿಲ್ಲ. ಯಾವುದೇ ಪ್ರಯೋಜನಕ್ಕೆ ಬಾರದ ಸರ್ಕಾರಿ ಬಂಜರು ಭೂಮಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನವನ ಅಭಿವೃದ್ಧಿಪಡಿಸಿ ಅಂತರರಾಷ್ಟ್ರೀಯ ಹಾಗೂ ಭಾರತದಲ್ಲೇ ಅತೀ ದೊಡ್ಡ ಪ್ರವಾಸಿ ಕೇಂದ್ರವಾಗಿ ಮಾಡಲಾಗುತ್ತಿದೆ. ಆದ್ದರಿಂದ ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಅಭಯ ನೀಡಿದರು.

ಇದರಿಂದ ಸುತ್ತಮುತ್ತಲ ಪ್ರದೇಶಗಳೂ ಅಭಿವೃದ್ಧಿಗೊಂಡು ಜನರಿಗೆ ಅನುಕೂಲ ವಾಗುತ್ತದೆ, ರಸ್ತೆ ಸಂಪರ್ಕ ಸಬಲವಾಗುತ್ತದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಸಚಿವರುಗಳಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ. ಮಹೇಶ್, ಸಂಸದ ಎಲ್.ಆರ್. ಶಿವರಾಮೇಗೌಡ, ಶಾಸಕರಾದ ಎಂ.ಶ್ರೀನಿವಾಸ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಅಶ್ವಿನ್‍ಕುಮಾರ್, ಕೆ.ಮಹದೇವು, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಅಶ್ವತ್ಥ ನಾರಾಯಣ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Translate »