4317 ಶಿಕ್ಷಕರ ವಿರುದ್ಧ ಕಠಿಣ ಕ್ರಮ
News

4317 ಶಿಕ್ಷಕರ ವಿರುದ್ಧ ಕಠಿಣ ಕ್ರಮ

March 15, 2022

ಬೆಂಗಳೂರು,ಮಾ.14(ಕೆಎಂಶಿ)- ರಾಜ್ಯದಲ್ಲಿ 4,317 ಶಿಕ್ಷಕರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಗಳನ್ನು ಅಸಮರ್ಪಕ ಮೌಲ್ಯಮಾಪನ ಮಾಡಿದ್ದು, ಭವಿಷ್ಯದ ಕನಸು ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಚ್ಚರಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಎನ್.ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸಮ ರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರಿಂದ ಅಂಕದ ವ್ಯತ್ಯಾಸದ ಅನುಸಾರ 51,26,600 ರೂ. ದಂಡ ವಿಧಿಸ ಲಾಗಿದೆ, ಅದರಲ್ಲಿ 10,56,400 ರೂ. ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರರಿಂದ 10 ಅಂಕಗಳ ವ್ಯತ್ಯಾಸ ಮಾಡಿದ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗುವುದು, 11ರಿಂದ 15 ಮತ್ತು 15ರಿಂದ 20 ಅಂಕಗಳ ವ್ಯತ್ಯಾಸ ಮಾಡಿದ ಶಿಕ್ಷಕರನ್ನು ಎರಡು ಪರೀಕ್ಷೆಗಳ ಕರ್ತವ್ಯದಿಂದ ಅಮಾನತುಗೊಳಿಸಲಾಗುವುದು. 20ಕ್ಕಿಂತಲೂ ಹೆಚ್ಚು ಅಂಕಗಳ ವ್ಯತ್ಯಾಸ ಮಾಡಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿರುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮರುಮೌಲ್ಯಮಾಪನದಲ್ಲಿ ಶಿಕ್ಷಕರು ಅಂಕಗಳನ್ನು ವ್ಯತ್ಯಾಸ ಮಾಡಿರುವುದು ಪತ್ತೆಯಾಗಿದೆ, 19,826 ಅರ್ಜಿಗಳು ಮೌಲ್ಯಮಾಪನಕ್ಕೆ ಸಲ್ಲಿಕೆಯಾಗಿದ್ದವು. ಅದರಲ್ಲಿ ಆರಕ್ಕಿಂತ ಕಡಿಮೆ ಅಂಕ ವ್ಯತ್ಯಾಸವಾಗಿರುವ 15,591 ಪ್ರಕರಣಗಳಿವೆ. ಆರಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಾಗಿರುವುದು 4,235 ಪ್ರಕರಣಗಳಿವೆ, ಈ ಪ್ರಕರಣಗಳಲ್ಲಿ ಮರುಮೌಲ್ಯಮಾಪನದಲ್ಲಿ ಸರಿ ಪಡಿಸಲಾಗಿದೆ. ಆರಕ್ಕಿಂತ ಹೆಚ್ಚು ಅಂಕ ವ್ಯತ್ಯಾಸ ಕಂಡು ಬಂದ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಪಾವತಿಸಿದ 805 ರೂಪಾಯಿ ಶುಲ್ಕವನ್ನು ಮರು ಭರಣ ಮಾಡಲಾಗಿದೆ ಎಂದು ಹೇಳಿದರು.

ಅಸಮರ್ಪಕ ಮೌಲ್ಯಮಾಪನದ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಆತ್ಮಹತ್ಯೆಗಳಾಗಿರುವ ಪ್ರಕರಣಗಳು ವರದಿಯಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಜೊತೆಗೆ ತಿಂಗಳ ವೇತನ ಕಡಿತಗೊಳಿಸಬೇಕು ಎಂದು ಬಿಜೆಪಿ ಸದಸ್ಯ ರವಿಕುಮಾರ್ ಒತ್ತಾಯಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಲಾಗಿದೆ. ಈ ಅಸಮರ್ಪಕ ಮೌಲ್ಯಮಾಪನ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಇವರಿಂದ ವಸೂಲಾದ ದಂಡವೆಷ್ಟು? ಅಸಡ್ಡೆಯಿಂದ ತಪ್ಪು ಆಗಿರೋದು ನಿಜ. ಕೂಡಲೇ ಅಂತಹ ಶಿಕ್ಷಕರನ್ನು ಬ್ಲಾಕ್ ಲಿಸ್ಟ್ ಮಾಡಿ ಮುಂದೆ ಮೌಲ್ಯ ಮಾಪನಕ್ಕೆ ಕರೆಯಬೇಡಿ. ಅಲ್ಲದೆ ಒಂದು ತಿಂಗಳ ಸಂಬಳ ಕಟ್ ಮಾಡಿ ಎಂದು ಮನವಿ ಮಾಡಿದರು.

Translate »