ಹಳ್ಳಕ್ಕೆ ಸಾರಿಗೆ ಬಸ್ ಉರುಳಿ  ಮೂವರು ಸಾವು 6 ಮಂದಿ ಸ್ಥಿತಿ ಗಂಭೀರ
ಚಾಮರಾಜನಗರ

ಹಳ್ಳಕ್ಕೆ ಸಾರಿಗೆ ಬಸ್ ಉರುಳಿ ಮೂವರು ಸಾವು 6 ಮಂದಿ ಸ್ಥಿತಿ ಗಂಭೀರ

March 15, 2022

ಹನೂರು,ಮಾ.14(ಸೋಮು)-ಚಾಲ ಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ವೃದ್ಧೆ ಸೇರಿ ಮೂವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಮಾಳಿ ಗನತ್ತ ಹಳ್ಳದಲ್ಲಿ ಸಂಭವಿಸಿದೆ.

ಮಾಳಿಗನತ್ತ ಗ್ರಾಮದ ಶಿವಮ್ಮ(70), ಸಣ್ಣ ರಾಯಪ್ಪ(70) ಹಾಗೂ ಪಿ.ಜಿ.ಪಾಳ್ಯದ ರಮೇಶ್ (30) ಮೃತಪಟ್ಟವರಾಗಿದ್ದು, ಮೃತ ಶಿವಮ್ಮ ಘಟನಾ ಸ್ಥಳದಲ್ಲಿಯೇ ಅಸುನೀಗಿದರೆ, ರಮೇಶ್ ಹಾಗೂ ಸಣ್ಣರಾಯಪ್ಪ ಚಿಕಿತ್ಸೆಗಾಗಿ ಕಾಮ ಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊ ಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಗಾಯ ಗೊಂಡಿರುವ 33 ಮಂದಿಯನ್ನು ಕೊಳ್ಳೇ ಗಾಲದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ 6 ಮಂದಿ ಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ವಿವರ: 27 ಮಕ್ಕಳು ಸೇರಿದಂತೆ ಸುಮಾರು 85 ಪ್ರಯಾಣಿಕರನ್ನು ಹೊತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸು ಕೊಳ್ಳೇಗಾಲದಿಂದ-ಪಿ.ಜಿ.ಪಾಳ್ಯಕ್ಕೆ ತೆರಳುತ್ತಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ಮಾಳಿಗನತ್ತ ಹಳ್ಳದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಹಳ್ಳಕ್ಕೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಕೂಗಾಟ-ಚೀರಾಟ ಕೇಳಿದ ಅಕ್ಕ-ಪಕ್ಕದ ಜಮೀನಿನವರು ಹಾಗೂ ಗ್ರಾಮ ಸ್ಥರು ಸ್ಥಳಕ್ಕಾಗಮಿಸಿ ಪ್ರಯಾಣಿಕರನ್ನು ಸುರಕ್ಷಿತ ವಾಗಿ ಹಳ್ಳದಿಂದ
ಮೇಲೆತ್ತುವಲ್ಲಿ ಯಶಸ್ವಿಯಾದರು.

85 ಜನರಿಗೆ ಚಿಕಿತ್ಸೆ: ಘಟನೆಯಿಂದ ಗಾಯಗೊಂಡಿದ್ದ 85 ಜನರಿಗೆ ಪಿ.ಜಿ.ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 44 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡಿದ್ದ 39 ಜನರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಯಿತು. ಈ ಪೈಕಿ 33 ಜನರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಒಳರೋಗಿಗಳನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. 6 ಜನರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

ಶಾಸಕ ನರೇಂದ್ರರಿಂದ ಸೂಚನೆ: ವಿಧಾನಸಭಾ ಅಧಿವೇಶನದಲ್ಲಿದ್ದ ಶಾಸಕ ನರೇಂದ್ರ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಬಳಿಕ ಜಿಲ್ಲಾ ವೈದ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಅವರ ಜೊತೆ ಚರ್ಚಿಸಿ ಅಗತ್ಯ ವೈದ್ಯಕೀಯ ಸೇವೆ ಒದಗಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿ ನಿಯಮಾನುಸಾರ ಪರಿಹಾರ ನೀಡಲು ಕೊಳ್ಳೇಗಾಲ ಬಸ್ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.

ಜನಮನ್ನಣೆ ಕಾರ್ಯವೈಖರಿ: ಬಸ್ ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಜೆಪಿ ಮುಖಂಡ ಹಾಗೂ ಜನಾಶ್ರಯ ಟ್ರಸ್ಟ್‍ನ ವೆಂಕಟೇಶ್ ಅವರು ಗಾಯಾಳುಗಳ ಅನುಕೂಲಕ್ಕಾಗಿ ಆಂಬುಲೆನ್ಸ್, ಕಾರುಗಳು ಮತ್ತು ಅವರ ಕಾರ್ಯಕರ್ತರನ್ನು ಘಟನಾ ಸ್ಥಳಕ್ಕೆ ಕಳುಹಿಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸುವಲ್ಲಿ ಮುತುವರ್ಜಿ ವಹಿಸಿದರು. ವೆಂಕಟೇಶ್ ಮತ್ತು ಕಾರ್ಯಕರ್ತರ ಈ ಕಾರ್ಯವೈಖರಿಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Translate »