ಮೈಸೂರು ವಿವಿಯಿಂದ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್
ಮೈಸೂರು

ಮೈಸೂರು ವಿವಿಯಿಂದ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್

March 14, 2022

ವಿಜ್ಞಾನಿ ಡಾ.ವಾಸುದೇವ್ ಕಲ್ಕುಂಟೆ ಅತ್ರೆ, ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿಗೂ ಡಾಕ್ಟರೇಟ್

ಮಾ.೨೨ರಂದು ಘಟಿಕೋತ್ಸವದಲ್ಲಿ ಪದವಿ ಪ್ರದಾನ

ಮೈಸೂರು, ಮಾ.೧೩(ಎಂಟಿವೈ)- ನಟನೆಯೊಂದಿಗೆ ಸಮಾಜ ಸೇವಾ ಕಾರ್ಯದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಮರಣೋತ್ತರವಾಗಿ ಹಾಗೂ ಡಿಆರ್‌ಡಿಒ ನಿವೃತ್ತ ಮಹಾ ನಿರ್ದೇಶಕ ಡಾ.ವಾಸು ದೇವ್ ಕಲ್ಕುಂಟೆ ಅತ್ರೆ ಮತ್ತು ಜಾನಪದ ಕಲಾವಿದ ಎಂ.ಮಹ ದೇವಸ್ವಾಮಿ(ಮಳವಳ್ಳಿ) ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದ್ದು, ಮಾ.೨೨ರಂದು ನಡೆಯಲಿರುವ ೧೦೨ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.
ಮಾ.೧೭ರಂದು ನಟ ಪುನೀತ್ ರಾಜ್‌ಕುಮಾರ್ ಅವರಿಗೆ ೪೭ ವರ್ಷ ಪೂರ್ಣಗೊಳ್ಳುತ್ತಿದ್ದು, ಅದೇ ದಿನ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ `ಜೇಮ್ಸ್’ ತೆರೆ ಕಾಣುತ್ತಿರುವ ಸಂಭ್ರಮದಲ್ಲಿ ಅಭಿಮಾನಿಗಳು ಇರುವ ಬೆನ್ನಲ್ಲೇ ಇದೀಗ ಮೈಸೂರು ವಿಶ್ವವಿದ್ಯಾನಿಲಯ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು ಮಾತ್ರವಲ್ಲದೆ, ಅಭಿಮಾನಿ ಗಳಿಗೆ ಸಿಹಿ ಸುದ್ದಿ ನೀಡಿದೆ. ಘಟಿಕೋತ್ಸವದ ವೇಳೆ ಪ್ರತಿ ವರ್ಷ ಕೊಡುವ ಗೌರವ ಡಾಕ್ಟರೇಟ್ ಪದವಿಯನ್ನು ಪುನೀತ್ ರಾಜ್‌ಕುಮಾರ್ ಸೇರಿದಂತೆ ಮೂವರಿಗೆ ಪ್ರದಾನ ಮಾಡಲಾಗು ತ್ತಿದ್ದು, ಎಲ್ಲೆಡೆ ಮೈಸೂರು ವಿವಿಯ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಮೂಲಕ ಮೈಸೂರು ವಿವಿಯಲ್ಲಿ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿ ಪಡೆದವ ರಲ್ಲಿ ಪುನೀತ್ ರಾಜ್‌ಕುಮಾರ್ ಎರಡನೆಯವರಾಗಿದ್ದಾರೆ.

ಪುನೀತ್ ರಾಜ್‌ಕುಮಾರ್: ವರನಟ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ದಂಪತಿ
ಪುತ್ರರಾಗಿದ್ದ ಪುನೀತ್ ರಾಜ್‌ಕುಮಾರ್ ೨೦೨೧ರ ಅ.೨೯ರಂದು ತೀವ್ರ ಹೃದಯಾ ಘಾತಕೊಳ್ಳಗಾಗಿ ಮೃತಪಟ್ಟಿದ್ದರು. ೨೯ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಮರಣದ ಬಳಿಕ ಹಲವು ಸಮಾಜ ಸೇವಾ ಕಾರ್ಯಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮರಣೋತ್ತರವಾಗಿ `ಕರ್ನಾಟಕ ರತ್ನ’ ಬಿರುದು ನೀಡಿ ಗೌರವಿಸಿತ್ತು. ಇದೀಗ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿ ನೀಡುವ ಮೂಲಕ ಗೌರವ ಸಮರ್ಪಿಸುತ್ತಿದೆ.

ಡಾ.ವಾಸುದೇವ್ ಕಲ್ಕುಂಟೆ ಅತ್ರೆ: ಹಿರಿಯ ವಿಜ್ಞಾನಿ, ಡಿಆರ್‌ಡಿಓ ನಿವೃತ್ತ ಮಹಾನಿರ್ದೇ ಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ. ೧೯೩೯ರಲ್ಲಿ ಜನಿಸಿದ ಡಾ.ಅತ್ರೆ ಅವರು ಡಿಫೆನ್ಸ್ ಟೆಕ್ನಾ ಲಜಿಗೆ ಅಪಾರ ಕೊಡುಗೆ ನೀಡಿದ್ದಾರೆ. ಡಿಫೆನ್ಸ್ ರಿಸರ್ಚ್ನಲ್ಲೂ ಗಮನಾರ್ಹ ಸಾಧನೆ ಮಾಡಿ ಹಲವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ೧೯೮೦ರಲ್ಲಿ ಡಿಆರ್‌ಡಿಓ ಸೇರಿದ್ದ ಅವರು, ೨೦೦೦ನೇ ಸಾಲಿನಲ್ಲಿ ಡಿಆರ್‌ಡಿಓದ ಡೈರೆಕ್ಟರ್ ಜನರಲ್(ಮಹಾ ನಿರ್ದೇಶಕ) ಆಗಿ ನಿಯೋಜನೆಗೊಂಡರು. ೨೦೦೪ರಲ್ಲಿ ನಿವೃತ್ತಿ ಹೊಂದಿದ್ದರು. ಪದ್ಮ ಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಪ್ರತಿಷ್ಟಿತ ಪ್ರಶಸ್ತಿಗಳಿಗೆ ಡಾ.ಅತ್ರೆ ಭಾಜನರಾಗಿದ್ದು, ಇದೀಗ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ.
ಎಂ.ಮಹದೇವಸ್ವಾಮಿ: ಜಾನಪದ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂ.ಮಹದೇವಸ್ವಾಮಿ ಅವರಿಗೂ ನೀಡಲಾಗುತ್ತಿದೆ. ಮಳವಳ್ಳಿ ಮಹದೇವಸ್ವಾಮಿ ಎಂದೇ ಚಿರಪರಿಚಿತರಾಗಿರುವ ಅವರು ಅಮೆರಿಕಾದಲ್ಲಿ ನಡೆದ ಅಕ್ಕಸಮ್ಮೇಳನ, ದೆಹಲಿಕರ್ನಾಟಕ ಸಾಂಸ್ಕöÈತಿಕ ಉತ್ಸವ, ವಾರಣಾಸಿ, ನಾಗಾಪುರ ವಿಚಾರ ಸಂಕಿರಣಗಳಲ್ಲೂ ಪಾಲ್ಗೊಂಡು ತಮ್ಮ ಛಾಪು ಮೂಡಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಪ್ರಶಸ್ತಿ, ನೇತಾಜಿ ಸದ್ಭಾವನ ಪ್ರಶಸ್ತಿಗಳು ಸೇರಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿ ದ್ದಾರೆ. ಇದೀಗ ಮೈಸೂರು ವಿವಿಯು ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.

೧೨ರಲ್ಲಿ ಮೂವರಿಗೆ ಗೌರವ: ಮೈಸೂರು ವಿವಿಯು ಗೌರವ ಡಾಕ್ಟರೇಟ್ ನೀಡಲು ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲು ರಚಿಸಿದ್ದ ಸಮಿತಿಯು ೧೨ ಮಂದಿ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಅದರಲ್ಲಿ ಮೂವರು ಗಣ್ಯರ ಹೆಸರನ್ನು ಆಯ್ಕೆ ಮಾಡಿ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಕುಲಪತಿಗಳು ತಿಳಿಸಿದರು.
ಅಶ್ವಿನಿ ಪುನೀತ್‌ರಾಜ್‌ಕುಮಾರ್ ಸ್ವೀಕರಿಸಲಿದ್ದಾರೆ: ನಟ ಪುನೀತ್‌ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಪತ್ರ ನೀಡಿ ಬಂದಿದ್ದು, ಘಟಿಕೋತ್ಸವಕ್ಕೆ ಆಗಮಿಸಿ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ. ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ ದೂರ ವಾಣ ಮೂಲಕ ವಿಚಾರ ತಿಳಿಸಲಾಗಿದ್ದು, ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ ಆಹ್ವಾನಿಸ ಲಾಗುತ್ತದೆ. ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ಕಾರ್ಯ ಕ್ರಮಕ್ಕೆ ಬಂದು ಗೌರವ ಪದವಿ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮಾ ಘಟಿಕೋ ತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಉಪಸ್ಥಿತರಿರುತ್ತಾರೆ ಎಂದರು.

ಆದೇಶ ಪತ್ರ ಕೈಸೇರಿಲ್ಲ: ಮೈಸೂರು ವಿವಿ ಬೋಧಕರ ನೇಮಕಾತಿಗೆ ಸರ್ಕಾರದಿಂದ ಇನ್ನೂ ಅನುಮೋದನೆ ಪತ್ರ ಬಂದಿಲ್ಲ. ಆದರೆ, ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ, ಸರ್ಕಾರದ ಯಾವುದೇ ಆದೇಶ ಪತ್ರ ಇನ್ನೂ ಕೈಸೇರಿಲ್ಲ. ೬೬೦ ಬೋಧಕರ ಹುದ್ದೆಯಲ್ಲಿ ೩೮೦ ಖಾಲಿ ಇವೆ. ೨೮೦ ಬೋಧಕರಿದ್ದು, ೭೦೦ ಅತಿಥಿ ಉಪನ್ಯಾಸಕರಿದ್ದಾರೆ. ಉಪನ್ಯಾಸಕ ಕೊರತೆಯಿಂದ ಗುಣಮಟ್ಟದ ಶಿಕ್ಷಣ ಕೊಡಲು ಆಗಲ್ಲ ಎಂದು ಕುಲಪತಿ ಪ್ರೊ.ಹೇಮಂತ್‌ಕುಮಾರ್ ಹೇಳಿದರು.

ಶೇ.೪೦ರಷ್ಟು ವಿದೇಶಿಯರ ಕುಸಿತ: ಕರೊನಾ ಇನ್ನಿತರ ಕಾರಣಕ್ಕೆ ಮೈಸೂರು ವಿವಿ ಯಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಶೇ.೩೦ರಿಂದ ೪೦ರಷ್ಟು ಕಡಿಮೆ ಯಾಗಿದೆ. ವೀಸಾ ಸಮಸ್ಯೆಯಿಂದ ಇಲ್ಲಿಗೆ ಕಲಿಯಲು ಬರಲು ವಿದೇಶಿಯರಿಗೆ ಆಗಿಲ್ಲ. ಆಫ್ಗಾನಿಸ್ತಾನದ ವಿದ್ಯಾರ್ಥಿಗಳು ಕಲಿಕೆಯನ್ನು ಮುಂದುವರಿಸಿದ್ದು, ಕೈಯಲ್ಲಿ ಆಗುವ ಸಹಾಯ ಮಾಡಲಾಗಿದೆ. ಅದನ್ನು ಮೀರಿದ ನೆರವು ನೀಡಲು ವಿವಿಗೂ ಕಷ್ಟಕರವಾಗಲಿದ್ದು, ಅದಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

Translate »