ಮೈಸೂರಲ್ಲಿ ನಿತ್ಯ 5,000 ಪ್ರಕರಣ, 5 ಲಕ್ಷ ರೂ. ದಂಡ ವಸೂಲಿ
ಮೈಸೂರು

ಮೈಸೂರಲ್ಲಿ ನಿತ್ಯ 5,000 ಪ್ರಕರಣ, 5 ಲಕ್ಷ ರೂ. ದಂಡ ವಸೂಲಿ

February 21, 2021

ಮೈಸೂರು, ಫೆ. 20(ಆರ್‍ಕೆ)- ಮೈಸೂರಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮೈಸೂರು ನಗರ ದಾದ್ಯಂತ ವಾಹನ ಸಂಚಾರ ಹೆಚ್ಚುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಅಧಿಕ ವಾಗುತ್ತಿರುವುದರಿಂದ ಅಪಘಾತ ತಪ್ಪಿಸಿ ಜನರ ಪ್ರಾಣ ರಕ್ಷಿಸುವ ಸಲುವಾಗಿ ತಪಾಸಣಾ ಕಾರ್ಯಾ ಚರಣೆಯನ್ನೂ ತೀವ್ರಗೊಳಿಸಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು, ಸಿಗ್ನಲ್ ಜಂಪ್, ಅತೀ ವೇಗದ ಚಾಲನೆ, ಮೂರು ಮಂದಿ ದ್ವಿಚಕ್ರ ವಾಹನದಲ್ಲಿ ಸವಾರಿ, ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರತೀದಿನ ಸರಾಸರಿ 5,000 ಪ್ರಕರಣ ದಾಖಲಿಸಿ ಸುಮಾರು 5 ಲಕ್ಷ ರೂ.ವರೆಗೆ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೇವರಾಜ, ಕೆ.ಆರ್, ಸಿದ್ಧಾರ್ಥ, ಎನ್.ಆರ್., ವಿವಿ ಪುರಂ ಸಂಚಾರ ಠಾಣೆಗಳ ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಆಯಾ ವ್ಯಾಪ್ತಿಯ ಪ್ರಮುಖ ಜಂಕ್ಷನ್, ಮುಖ್ಯ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಂಚಾರ ಪೊಲೀಸರು ಮೊಬೈಲ್, ಎಜಿಎಂ ಟ್ಯಾಬ್ ಮೂಲಕ ಫೋಟೋ ತೆಗೆದು ಪ್ರಕರಣ ದಾಖಲಿಸುತ್ತಿದ್ದಾರೆ. ಅಲ್ಲದೆ, ಮೈಸೂರು ನಗರದಾ ದ್ಯಂತ ಇರುವ 59 ಸಿಸಿ ಕ್ಯಾಮರಾಗಳಲ್ಲೂ ಸಂಚಾರ ನಿಯಮ ಉಲ್ಲಂಘಿಸುವವರ ದೃಶ್ಯ ಸೆರೆಯಾಗುತ್ತಿದೆ ಎಂದು ಸಂದೇಶ್‍ಕುಮಾರ್ ತಿಳಿಸಿದ್ದಾರೆ. ಸಾರ್ವಜನಿಕರು ನಿಯಮ ಪಾಲಿಸಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಮೂಲಕ ತಮ್ಮ ಹಾಗೂ ಇತರರ ಅಮೂಲ್ಯ ಪ್ರಾಣ ರಕ್ಷಿಸಬೇಕೆಂದು ಅವರು ತಿಳಿಸಿದ್ದಾರೆ.

Translate »