ಲಾಕ್‍ಡೌನ್ ಸಂಕಷ್ಟ ನಿವಾರಣೆಗೆ ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್: ಕೇಂದ್ರಕ್ಕೆ ವಿಪಕ್ಷಗಳ ಒತ್ತಾಯ
ಮೈಸೂರು

ಲಾಕ್‍ಡೌನ್ ಸಂಕಷ್ಟ ನಿವಾರಣೆಗೆ ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್: ಕೇಂದ್ರಕ್ಕೆ ವಿಪಕ್ಷಗಳ ಒತ್ತಾಯ

May 9, 2020

ಬೆಂಗಳೂರು, ಮೇ 8(ಕೆಎಂಶಿ)- ಕೊರೊನಾ ಮಾರ ಣಾಂತಿಕ ಸೋಂಕು ಹಾಗೂ ಅದರ ತಡೆಗೆ ವಿಧಿಸಲಾಗಿ ರುವ ಲಾಕ್‍ಡೌನ್‍ನಿಂದ ಎದುರಾಗಿರುವ ಜನರ ಸಂಕಷ್ಟ ಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಟ ರೂ. 50,000 ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ ಮತ್ತಿತರರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ, ಕೋವಿಡ್-19ರ ನಂತರ ರೈತರು ಮತ್ತು ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಇವರ ನೆರವಿಗೆ ಸರ್ಕಾರ ಬರಬೇಕೆಂದು ಒತ್ತಾಯಿಸಿದರು.

ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರು ಕಟ್ಟೆ ಒದಗಿಸುವುದು. ರೈತರು ಬೆಳೆದಿರುವ ಸದರಿ ಪದಾರ್ಥ ಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೆ ಇದ್ದ ಸಂದರ್ಭ ದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡು ವುದು. ಲಾಕ್‍ಡೌನ್ ಅವಧಿಯಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡುವುದು. ಹಾಗೆಯೇ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೆ ನಷ್ಟ ಅನುಭವಿ ಸಿರುವ ರೈತರಿಗೂ ಸಹ ಸೂಕ್ತ ನಷ್ಟ ಪರಿಹಾರ ನೀಡ ಬೇಕು. ರೈತರು ಬೆಳೆದ ಬೆಳೆ, ತರಕಾರಿ, ಹಣ್ಣು, ಹೂವು, ಪೌಲ್ಟ್ರಿ, ರೇಷ್ಮೆ ಮುಂತಾದ ಉತ್ಪನ್ನಗಳ ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿ,
ನ್ಯಾಯೋಚಿತವಾಗಿ ಕನಿಷ್ಟ ಶೇ.50ರಷ್ಟು ಪರಿಹಾರವನ್ನು ಸಮರೋಪಾದಿಯಲ್ಲಿ ನೀಡಬೇಕು. ರೈತರು ಬೆಳೆದ ಪ್ರತಿ ಪದಾರ್ಥಗಳಿಗೂ ಉತ್ಪಾದನಾ ವೆಚ್ಚವನ್ನು ಆಧರಿಸಿ, ನಿಗದಿತ ಬೆಲೆಯನ್ನು ತುರ್ತಾಗಿ ನಿಗದಿ ಮಾಡುವುದು. ನಿಗದಿ ಮಾಡಿದ ದರಗಳಿಗಿಂತ ಬೆಲೆ ಕಡಿಮೆಯಾದರೆ ಸರ್ಕಾರವು ಮಧ್ಯ ಪ್ರವೇಶ ಮಾಡಿ ಪ್ರೋತ್ಸಾಹ ಧನ/ಬೆಂಬಲ ಬೆಲೆ ನೀಡಲು 5000 ಕೋಟಿ ರೂ.ಗಳ ಆವರ್ತ ನಿಧಿಯನ್ನು ಸ್ಥಾಪಿಸಿ, ಆ ನಿಧಿಯನ್ನು ಬಳಸಿ ಎ.ಪಿ.ಎಂ.ಸಿ.ಗಳ ಮೂಲಕ ರೈತರ ಉತ್ಪನ್ನಗಳನ್ನು ಖರೀದಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವುದು. ಸರ್ಕಾರ ಈ ಕೂಡಲೇ ಬರಪೀಡಿತ ತಾಲೂಕುಗಳಿಗೆ ನೀಡಬೇಕಾದ ಸವಲತ್ತುಗಳನ್ನು ನೀಡುವುದು. ಬರಗಾಲದಿಂದ ನಷ್ಟವಾಗಿರುವ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಬೇಕು.

ರಾಜ್ಯದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಹಣ ಸುಮಾರು ರೂ.3,000 ಕೋಟಿ ತುರ್ತಾಗಿ ಪಾವತಿಸುವಂತೆ ಆದೇಶ ಮಾಡಬೇಕು. ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ, ಅಗತ್ಯ ಔಷಧಿ ಹಾಗೂ ಇತರೇ ಸಲಕರಣೆಗಳನ್ನು ರೈತರಿಗೆ ಉಚಿತ ವಾಗಿ ನೀಡಲು ಕ್ರಮ ಜರುಗಿಸುವುದು. ವಿವಿಧ ಬ್ಯಾಂಕುಗಳಲ್ಲಿ ರೈತರಿಗೆ ನೀಡಿರುವ ಸಾಲ ವಸೂಲಾತಿ ಕೊರೊನಾ ಅವಧಿ ಮುಗಿಯುವವರೆಗೂ ಷರತ್ತು ರಹಿತವಾಗಿ ಮುಂದೂಡಲು ಹಾಗೂ ಈ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಲಾಕ್‍ಡೌನ್ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನಿರ್ವಹಿಸಲು ಸಾಧ್ಯವಾಗದ ಅವಧಿಗೆ ನೋಂದಾಯಿತ ಕಾರ್ಮಿಕರಿಗೆ ನಿಗಧಿತ ವೇತನವನ್ನು ಕಡ್ಡಾಯವಾಗಿ ನೀಡಲು ಕ್ರಮವಹಿಸುವುದು. ಜಾನುವಾರುಗಳಿಗೆ ಉಚಿತವಾಗಿ ಹಿಂಡಿ, ಬೂಸಾ, ಮೇವು ಮತ್ತು ಪಶು ಆಹಾರಗಳನ್ನು ಉಚಿತವಾಗಿ ನೀಡಲು ಸರ್ಕಾರ ವಿಶೇಷ ಪ್ಯಾಕೇಜ್‍ನ್ನು ರೂಪಿಸ ಬೇಕು. ವಿವಿಧ ಕಾರಣಗಳಿಂದ ಮರಣ ಹೊಂದುವ ಕುರಿ, ಮೇಕೆ, ಹಸು, ಎತ್ತು, ಎಮ್ಮೆ ಮುಂತಾದವುಗಳಿಗೆ ರೂ. 5,000 ದಿಂದ ರೂ. 10,000ಗಳವರೆಗೆ ಅನುಗ್ರಹ ಯೋಜನೆ ಯಡಿ ಪರಿಹಾರ ನೀಡಲಾಗುತ್ತಿತ್ತು. ಇದನ್ನು ಸರ್ಕಾರ ಇತ್ತೀಚಿಗೆ ನಿಲ್ಲಿಸಿದೆ. ರೈತರ ಹಿತದೃಷ್ಟಿಯಿಂದ ಸದರಿ ಯೋಜನೆಯನ್ನು ಮುಂದುವರೆಸಿ ಮರಣ ಹೊಂದಿದ ಜಾನುವಾರು ಗಳಿಗೆ ಪರಿಹಾರ ನೀಡಲು ಕ್ರಮವಹಿಸುವುದು. ನೇಕಾರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್‍ನಲ್ಲಿ ಕಂಬಳಿ ನೇಕಾರರ ಸೇರ್ಪಡೆ ಮಾಡುವುದು. ಆಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Translate »