2020ರಿಂದ ಚಾ.ನಗರ ಜಿಲ್ಲೆ ಅಭಯಾರಣ್ಯದಲ್ಲಿ 59 ಕಳ್ಳಬೇಟೆ; 45 ವನ್ಯಜೀವಿ ಹತ್ಯೆ, 75 ಜನರ ಬಂಧನ
News

2020ರಿಂದ ಚಾ.ನಗರ ಜಿಲ್ಲೆ ಅಭಯಾರಣ್ಯದಲ್ಲಿ 59 ಕಳ್ಳಬೇಟೆ; 45 ವನ್ಯಜೀವಿ ಹತ್ಯೆ, 75 ಜನರ ಬಂಧನ

September 21, 2021

ಬೆಂಗಳೂರು,ಸೆ.20- ಕಳೆದ ಜನವರಿ 2020ರಿಂದ ಇದುವ ರೆಗೆ ಚಾಮರಾಜನಗರ ಜಿಲ್ಲೆಯ ಅಭಯಾರಣ್ಯಗಳಲ್ಲಿ 59 ಕಳ್ಳ ಬೇಟೆ ಪ್ರಕರಣಗಳು ವರದಿಯಾಗಿದ್ದು, 45 ವನ್ಯ ಪ್ರಾಣಿಗಳ ಹತ್ಯೆ ಮಾಡಲಾಗಿದೆ. ಈ ಸಂಬಂಧ 75 ಜನರನ್ನು ಬಂಧಿಸಲಾಗಿದೆ, ಅದೇ ರೀತಿ ಮೈಸೂರು ಜಿಲ್ಲೆಯ ಅಭಯಾರಣ್ಯ ಗಳಲ್ಲಿ 37 ಕಳ್ಳಬೇಟೆ ಪ್ರಕರಣಗಳು ವರದಿಯಾಗಿದ್ದು 34 ವನ್ಯಪ್ರಾಣಿಗಳ ಹತ್ಯೆ ಮಾಡಲಾಗಿದೆ. ಈ ಸಂಬಂಧ 47 ಜನರನ್ನು ಬಂಧಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಬಂಡಿಪುರ, ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ನಾಗರ ಹೊಳೆ ಅಭಯಾರಣ್ಯಗಳಲ್ಲಿ ಕಳ್ಳಬೇಟೆ ಪ್ರಕರಣಗಳು ಜಾಸ್ತಿಯಾಗು ತ್ತಿದ್ದು, ವನ್ಯಪ್ರಾಣಿಗಳನ್ನು ಹತ್ಯೆ ಮಾಡುತ್ತಿರುವುದನ್ನು ನಿಯಂತ್ರಿ ಸುವ ಬಗ್ಗೆ ಮತ್ತು ಆನೆಗಳು ಹೆಚ್ಚಾಗಿ ಸಾವನ್ನಪ್ಪುತ್ತಿರುವುದರ ಬಗ್ಗೆ ಸಂದೇಶ ನಾಗರಾಜ್‍ರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಚಾಮರಾಜನಗರ ಜಿಲ್ಲೆಯ ಬಿಆರ್‍ಟಿ ಅರಣ್ಯದಲ್ಲಿ 28, ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ 20 ಮತ್ತು ಕಾವೇರಿ ವನ್ಯಧಾಮ ದಲ್ಲಿ 13 ಕಳ್ಳ ಬೇಟೆ ಪ್ರಕರಣಗಳು ವರದಿಯಾಗಿದ್ದು ಕ್ರಮವಾಗಿ 15, 18 ಮತ್ತು 12 ವನ್ಯಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಅದೇ ರೀತಿ ಮೈಸೂರು ವಲಯದಲ್ಲಿ 9, ಹುಣಸೂರು ವಲಯದಲ್ಲಿ 6 ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ 22 ಕಳ್ಳಬೇಟೆ ಪ್ರಕ ರಣಗಳು ವರದಿಯಾಗಿದ್ದು, ಕ್ರಮವಾಗಿ 8, 3 ಮತ್ತು 23 ಪ್ರಾಣಿ ಗಳ ಹತ್ಯೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಇದೇ ಅವಧಿಯಲ್ಲಿ ಬಿಳಿಗಿರಿರಂಗನ ಬೆಟ್ಟ ಅರಣ್ಯದಲ್ಲಿ 1, ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ 20 ಮತ್ತು ಕಾವೇರಿ ವನ್ಯಧಾಮ ದಲ್ಲಿ 15 ಆನೆಗಳು ಸಾವನ್ನಪ್ಪಿದ್ದು, ಈ ಪೈಕಿ ವಿದ್ಯುತ್ ಸ್ಪರ್ಶ ದಿಂದ ಕೇವಲ 3 ಆನೆಗಳು ಮೃತಪಟ್ಟಿದ್ದು, ಉಳಿದ ಆನೆಗಳು ಸಹಜ ವಾಗಿ ಮೃತಪಟ್ಟಿವೆ ಎಂದು ಸಂದೇಶರ ಇನ್ನೊಂದು ಪ್ರಶ್ನೆಗೆ ಸಚಿವರು ವಿವರ ನೀಡಿದರು.

ನೂರಾರು ಸಾಕುಪ್ರಾಣಿ ಬಲಿ: ಚಾಮರಾಜ ನಗರ ಜಿಲ್ಲೆಯಲ್ಲಿ 2020-21ರಲ್ಲಿ 246, ಮತ್ತು ಮೈಸೂರು ಜಿಲ್ಲೆಯಲ್ಲಿ 490, ಜಾನುವಾರು ಮತ್ತು ಆಡು, ಕುರಿ ಸಾಕುಪ್ರಾಣಿಗಳು, ವನ್ಯ ಪ್ರಾಣಿಗಳಿಂದ ಹತ್ಯೆಯಾಗಿವೆ. ಅದೇ ರೀತಿ 2021-22 ರಲ್ಲಿ ಇದುವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ 133 ಮತ್ತು ಮೈಸೂರು ಜಿಲ್ಲೆಯಲ್ಲಿ 230 ರೈತಾಪಿ ಜನರ ಸಾಕು ಜಾನುವಾರುಗಳು ಮತ್ತು ಪ್ರಾಣಿಗಳು ವನ್ಯಜೀವಿಗಳ ದಾಳಿಯಿಂದ ಸಾವಿಗೀಡಾಗಿವೆ ಎಂದು ಉಮೇಶ್ ಕತ್ತಿ ತಿಳಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೈತಾಪಿ ಜನರ ಸಾಕಾಣಿಕೆ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ವನ್ಯಪ್ರಾಣಿಗಳಿಂದ ಹತ್ಯೆಯಾಗುತ್ತಿರುವ ಬಗ್ಗೆ, ಹಾಗೂ ರೈತಾಪಿ ಜನರಿಗೆ ಸಕಾಲದಲ್ಲಿ ಪರಿಹಾರ ಪಾವತಿ ಮಾಡಲು ಅಡೆ ತಡೆ ಆಗುತ್ತಿರುವ ಬಗ್ಗೆ ಸಂದೇಶ್ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡುತ್ತಿದ್ದರು.

ಕುರಿ, ಮೇಕೆಗಳು ವನ್ಯಜೀವಿಗಳ ದಾಳಿಯಿಂದ ಮೃತಪಟ್ಟಲ್ಲಿ 5 ಸಾವಿರ ರೂ, ಹಸು, ಎತ್ತು, ಎಮ್ಮೆ, ಕೋಣಗಳು ಮೃತಪಟ್ಟಲ್ಲಿ 2021-22ನೇ ಸಾಲಿನಿಂದ ಮೂವತ್ತು ಸಾವಿರ ರೂ. ದಯಾತ್ಮಕ ಪರಿಹಾರ ಧನ ನೀಡಲಾಗುತ್ತಿದೆ. ಅರ್ಜಿಗಳನ್ನು ಕಡ್ಡಾಯವಾಗಿ ಇ-ಪರಿಹಾರ ತಂತ್ರಾಂಶದ ಮೂಲಕವೇ ಸ್ವೀಕರಿಸಲಾಗುತ್ತಿದ್ದು, ಅರ್ಜಿ ಸಲ್ಲಿಕೆಯಾದ ತಕ್ಷಣ ನಿಯಮಾವಳಿಗಳ ಪ್ರಕಾರ ಪರಿಹಾರಧನ ಮಂಜೂರು ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Translate »