6.37 ಕೋಟಿ ರೂ. ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಮನವಿ
ಮೈಸೂರು

6.37 ಕೋಟಿ ರೂ. ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಮನವಿ

March 3, 2021

ಮೈಸೂರು,ಮಾ.2(ಪಿಎಂ)- ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಿರ್ಮಾಣ ಗೊಳ್ಳುತ್ತಿರುವ ತಾಲೂಕು ಮತ್ತು ಹೋಬಳಿ ಮಟ್ಟದ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಒಟ್ಟಾರೆ 6.37 ಕೋಟಿ ರೂ. ಹೆಚ್ಚುವರಿ ಅನುದಾನ ಕಲ್ಪಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದ್ದಾರೆ. ಪಿರಿಯಾಪಟ್ಟಣದಲ್ಲಿ ನಿರ್ಮಿ ಸುತ್ತಿರುವ ತಾಲೂಕು ಮಟ್ಟದ ಸಮುದಾಯ ಭವನಗಳ ಕಾಮಗಾರಿಗೆ 3.60 ಕೋಟಿ ರೂ. ಹಾಗೂ ಮೈಸೂರು ಮತ್ತು ಹುಣಸೂರು ತಾಲೂಕುಗಳಲ್ಲಿ ನಿರ್ಮಾಣ ಹಂತದ ಹೋಬಳಿ ಮಟ್ಟದ ಸಮು ದಾಯ ಭವನಗಳ ಕಾಮಗಾರಿಗೆ 2.77 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಬೇಕೆಂದು ಸಂಸದರು ಮನವಿಯಲ್ಲಿ ಕೋರಿದ್ದಾರೆ.

ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಇದರ ಜೊತೆಗೆ 50 ಲಕ್ಷ ರೂ. ಹೆಚ್ಚುವರಿ ಅನುದಾನ ಮಂಜೂರಾಗಿದೆ. ಇದೀಗ ಭವನದ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿ 2 ಕೋಟಿ ರೂ. ಅನುದಾನ ನೀಡಬೇಕು. ಅದೇ ರೀತಿ ಪಿರಿಯಾಪಟ್ಟಣದಲ್ಲೇ ನಿರ್ಮಾಣ ಗೊಳ್ಳುತ್ತಿರುವ ವಾಲ್ಮೀಕಿ ಭವನಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಜೊತೆಗೆ 50 ಲಕ್ಷ ರೂ. ಹೆಚ್ಚುವರಿ ಅನು ದಾನ ಮಂಜೂರಾಗಿದೆ. ಇದೀಗ ಭವನದ ಕಾಮಗಾರಿ ಪೂರ್ಣ ಗೊಳಿಸಲು ಹೆಚ್ಚುವರಿ 1.10 ಕೋಟಿ ರೂ. ಅನುದಾನ ಅಗತ್ಯವಿದೆ. ಅಂತೆಯೇ ಪಿರಿಯಾಪಟ್ಟಣದಲ್ಲಿಯೇ ಬಾಬು ಜಗಜೀವನ್ ರಾಮ್ ಭವನ ನಿರ್ಮಾಣಗೊಳ್ಳುತ್ತಿದ್ದು, 1 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಇದೀಗ ಭವನದ ಕಾಮಗಾರಿ ಪೂರ್ಣಗೊಳಿ ಸಲು ಹೆಚ್ಚುವರಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇ ಕೆಂದು ಮನವಿಯಲ್ಲಿ ಕೋರಿದ್ದಾರೆ.

ಅಂತೆಯೇ ಮೈಸೂರು ತಾಲೂಕಿನ ಉದ್ಬೂರು ಹೋಬಳಿಯಲ್ಲಿ ನಿರ್ಮಿಸುತ್ತಿ ರುವ ವಾಲ್ಮೀಕಿ ಭವನಕ್ಕೆ 94 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಇದರ ಕಾಮ ಗಾರಿ ಪೂರ್ಣಗೊಳಿಸಲು 50 ಲಕ್ಷ ರೂ. ಹೆಚ್ಚುವರಿ ಅನುದಾನ ನೀಡಬೇಕು. ಅದೇ ರೀತಿ ಮೈಸೂರು ತಾಲೂಕಿನ ರಮ್ಮನಹಳ್ಳಿ ಹೋಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನಕ್ಕೂ ಹೆಚ್ಚುವರಿ 1.14 ಕೋಟಿ ರೂ. ಅನುದಾನ ನೀಡಬೇಕು. ಇದರ ನಿರ್ಮಾಣಕ್ಕೆ 84 ಲಕ್ಷ ರೂ. ಅನುದಾನ ಕಲ್ಪಿಸಲಾಗಿತ್ತು ಎಂದು ಮನವಿಯಲ್ಲಿ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಹುಣಸೂರು ತಾಲೂಕಿನ ಹೊಸರಾಮೇನಹಳ್ಳಿ ನಿರ್ಮಿ ಸುತ್ತಿರುವ ವಾಲ್ಮೀಕಿ ಭವನಕ್ಕೆ 20 ಲಕ್ಷ ರೂ. ಅನುದಾನ ನೀಡಲಾಗಿತ್ತು. ಇದೀಗ ಇದರ ಕಾಮಗಾರಿ ಪೂರ್ಣಗೊಳಿಸಲು 63 ಲಕ್ಷ ರೂ. ಹೆಚ್ಚುವರಿ ಅನುದಾನ ಕಲ್ಪಿಸಬೇಕು. ಅಂತೆಯೇ ಇದೇ ತಾಲೂಕಿನ ಗಾವಡಗೆರೆ ಹೋಬಳಿಯಲ್ಲಿ ನಿರ್ಮಿಸು ತ್ತಿರುವ ವಾಲ್ಮೀಕಿ ಭವನಕ್ಕೆ 12 ಲಕ್ಷ ರೂ. ಅನುದಾನ ನೀಡಲಾ ಗಿತ್ತು. ಇದರ ಕಾಮಗಾರಿ ಪೂರ್ಣಗೊಳಿಸಲು 50 ಲಕ್ಷ ರೂ. ಹೆಚ್ಚುವರಿ ಅನುದಾನ ಕಲ್ಪಿಸಬೇಕೆಂದು ಸಂಸದರು ಮನವಿಯಲ್ಲಿ ಕೋರಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಸಂಸದರು ಮನವಿ ಸಲ್ಲಿಸಿದ್ದರು. ಈ ಸಂಬಂಧ ಸಚಿವರು ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.

 

Translate »