ಅಕ್ರಮವಾಗಿ ದಾಸ್ತಾನು ಮಾಡಿದ್ದ 65 ಬಾಕ್ಸ್ ಮದ್ಯ ವಶ: ಇಬ್ಬರ ಬಂಧನ
ಮಂಡ್ಯ

ಅಕ್ರಮವಾಗಿ ದಾಸ್ತಾನು ಮಾಡಿದ್ದ 65 ಬಾಕ್ಸ್ ಮದ್ಯ ವಶ: ಇಬ್ಬರ ಬಂಧನ

April 20, 2020

ಕೆ.ಆರ್.ಪೇಟೆ, ಏ.19(ಶ್ರೀನಿವಾಸ್)- ತಾಲೂಕಿನ ಕಳ್ಳನಕೆರೆ ಗ್ರಾಮದ 2 ಮನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 10 ಲಕ್ಷ ರೂ. ಮೌಲ್ಯದ 65 ಬಾಕ್ಸ್ ಮದ್ಯ ವಶಪಡಿಸಿ ಕೊಂಡಿರುವ ಕಿಕ್ಕೇರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳನಕೆರೆ ಗ್ರಾಮದ ನಿವಾಸಿಗಳಾದ ದೇವರಾಜು ಹಾಗೂ ತಮ್ಮಣ್ಣೇಗೌಡ ಬಂಧಿತ ಆರೋಪಿಗಳು.

ವಿವರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ವೈನ್‍ಸ್ಟೋರ್ ಬಂದ್ ಆಗಿರುವುದನ್ನೇ ನೆಪವಾಗಿಟ್ಟುಕೊಂಡು ಮದ್ಯ ಮಾರಾಟಗಾರರು ಮದ್ಯವನ್ನು ಒಂದಕ್ಕೆ ಮೂರರಷ್ಟು ಬೆಲೆ ನಿಗದಿ ಮಾಡಿ ಅಕ್ರಮವಾಗಿ ಗ್ರಾಹಕರಿಗೆ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳ್ಳನಕೆರೆಯ 2 ಮನೆಯಲ್ಲಿ ಮದ್ಯ ದಾಸ್ತಾನು ಮಾಡಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ದಂಧೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ ಸಿಪಿಐ ಕೆ.ಎನ್. ಸುಧಾಕರ್, ಎಸ್‍ಐ ಶಿವಮಂಜು ಹಾಗೂ ಸಿಬ್ಬಂದಿ ಮನೆಯಲ್ಲಿ ಅಡಗಿಸಿಟ್ಟಿದ್ದ 10 ಲಕ್ಷ ರೂ. ಮೌಲ್ಯದ ವಿವಿಧ ಬ್ರಾಂಡ್‍ನ 65 ಮದ್ಯದ ಬಾಕ್ಸ್‍ಗಳನ್ನು ವಶಪಡಿಸಿಕೊಂಡು ದೇವರಾಜು, ತಮ್ಮಣ್ಣೇಗೌಡರನ್ನು ಬಂಧಿಸಿದ್ದಾರೆ. ಈ ಅಕ್ರಮ ಮದ್ಯ ದಾಸ್ತಾನು ಮತ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕಿಕ್ಕೇರಿ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಉಳಿದ ಆರೋಪಿ ಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜಾವೇದ್, ದೇವರಾಜು, ರವಿ, ಮಧು, ಅರುಣ್, ಅಶೋಕ್, ಬೊಮ್ಮಯ್ಯ ಇತರರಿದ್ದರು.

Translate »