ಮೈಸೂರು, ಆ.೩೦ (ಆರ್‌ಕೆಬಿ)- ಕೋವಿಡ್-೧೯ ಆತಂಕದ ನಡುವೆಯೂ ಉದ್ಯೋಗಾಕಾಂಕ್ಷಿ ಯುವಕರಿಗೆ ಮೈಸೂರಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಸೋಮವಾರ ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಒಟ್ಟು ೩೧೬೫ ಮಂದಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಈ ಪೈಕಿ ೬೮೫ ಮಂದಿಗೆ ಉದ್ಯೋಗಾವಕಾಶ ಲಭಿಸಿದೆ.
ಬೆಳಿಗ್ಗೆ ೯ರಿಂದ ಸಂಜೆ ೪ರವರೆಗೆ ನಡೆದ ಉದ್ಯೋಗ ಮೇಳದಲ್ಲಿ ೬೨ಕ್ಕೂ ಹೆಚ್ಚು ವಿವಿಧ ಕಂಪನಿಗಳು, ಸಂಸ್ಥೆಗಳು ಭಾಗವಹಿಸಿದ್ದವು. ಖಾಲಿ ಇದ್ದ ಒಟ್ಟು ೪೦೦೪ ಉದ್ಯೋಗಗಳಿಗೆ ಆನ್‌ಲೈನ್ ಮೂಲಕ ೧೯೮೨ ಹಾಗೂ ಸ್ಥಳದಲ್ಲಿಯೇ ೧೧೮೩ ಮಂದಿ ಹೆಸರು ನೋಂದಾಯಿಸಿ ಕೊಂಡಿದ್ದರು. ಇವರಲ್ಲಿ ವಿವಿಧ ಕಂಪನಿಗಳು ತಮಗೆ ಸೂಕ್ತವೆಂದು ಕಂಡು ಬಂದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರವನ್ನು ನೀಡಿದವು. ಆಯ್ಕೆಯಾದ ೬೮೫ ಜನರ ಪೈಕಿ ೫೦ ಮಂದಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಉದ್ಯೋಗ ಆದೇಶ ಪತ್ರ ವಿತರಿಸಿದರು.
ಬೆಳಿಗ್ಗೆಯಿಂದಲೇ ಮೈಸೂರು ಮತ್ತು ನೆರೆಯ ಜಿಲ್ಲೆಗಳಿಂದ ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳು ದಸರಾ ವಸ್ತುಪ್ರದರ್ಶನ ಆವರಣಕ್ಕೆ ಬರತೊಡಗಿದರು. ವಿವಿಧ ಕಂಪನಿಗಳ ೬೦ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ನಿರ್ಮಿಸಲಾಗಿತ್ತು. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಮತ್ತು ಪದವಿಗಳವರೆಗಿನ ಅರ್ಹ ಉದ್ಯೋಗಾಕಾಂಕ್ಷಿಗಳು ತಮಗೆ ಸೂಕ್ತ ಎನಿಸಿದ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ದಾಖಲಾತಿಗಳನ್ನು ಒದಗಿಸಿದರು. ಕೆಲವು ಕಂಪನಿಗಳು ಸ್ಥಳದಲ್ಲಿಯೇ ಮೌಖಿಕ ಸಂದರ್ಶನ ನಡೆಸಿದವು.
ಇದಕ್ಕೂ ಮುನ್ನ ಉದ್ಯೋಗ ಮೇಳಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಶಾಸಕ ಎಸ್.ಎ.ರಾಮ ದಾಸ್, ಇಂದಿನ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯ ಗಳನ್ನು ಪಡೆಯುವುದು ಅಗತ್ಯವಾಗಿದೆ. ಬಹುತೇಕ ಕಂಪನಿಗಳು ಅಭ್ಯರ್ಥಿಗಳ ಕೌಶಲ್ಯವನ್ನೇ ಬಯಸು ತ್ತಾರೆ. ಕೌಶಲ್ಯ ಅಭಿವೃದ್ಧಿ ಇಲಾಖೆಯು ಯುವಕರಿಗೆ ಅಗತ್ಯ ಕೌಶಲ್ಯಗಳನ್ನು ಪಡೆಯಲು ಮತ್ತು ಉದ್ಯಮಕ್ಕೆ ಸಿದ್ಧವಾಗಲು ಅವರಿಗೆ ತರಬೇತಿ ನೀಡುತ್ತಿದೆ ಎಂದರು.
ಕೌಶಲ್ಯ ಕಲಿಕೆಯಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದ ಅವರು, ತರಬೇತಿ ಪಡೆದ ಅಭ್ಯರ್ಥಿಗಳನ್ನು ಕೈಗಾರಿಕಾ ಮತ್ತು ಇತರ ಉತ್ಪಾದನಾ ಸಂಸ್ಥೆಗಳು ಹೆಚ್ಚು ಹುಡುಕುತ್ತವೆ. ಹಾಗಾಗಿ ಯುವಜನರಿಗೆ ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ, ಉದ್ಯೋಗಾವಕಾಶಗಳಲ್ಲಿ ತರಬೇತಿ ನೀಡುವ ಮೂಲಕ ನಿರುದ್ಯೋಗ ವನ್ನು ಕಡಿಮೆ ಮಾಡಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಇಲಾಖೆಯು ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿದೆ ಮತ್ತು ಅವರ ಸ್ವಯಂ ಉದ್ಯೋಗ ಆರಂಭಿಸಲು ಹಾಗೂ ಅದಕ್ಕೆ ಬ್ಯಾಂಕ್ ಸಾಲ ಸೌಲಭ್ಯ ಕೊಡಿಸಲು ನೆರವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್‌ಗೌಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸಿ.ಜಗನ್ನಾಥ್, ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್. ಸುದರ್ಶನ್, ಸಾಂಖ್ಯಿತ ಅಧಿಕಾರಿ ಸಿ.ಮಹದೇವಸ್ವಾಮಿ, ಜಿಲ್ಲಾ ಉದ್ಯೋಗಾಧಿಕಾರಿ ಡಿ.ಎಂ.ರಾಣ ನಂಜುAಡ ಸ್ವಾಮಿ, ಕೃಷ್ಣಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.