7 ಮಂದಿ ಜಲ ಸಮಾಧಿ
ಮೈಸೂರು

7 ಮಂದಿ ಜಲ ಸಮಾಧಿ

June 15, 2020

ಮಂಡ್ಯ, ಜೂ.14(ನಾಗಯ್ಯ)- ಜಿಲ್ಲೆಯಲ್ಲಿ ಇಂದು ಕರಾಳ ಭಾನುವಾರವಾಗಿದ್ದು, ಪ್ರತ್ಯೇಕ ಮೂರು ಪ್ರಕರಣದಲ್ಲಿ ಐವರು ಮಹಿಳೆಯರು ಸೇರಿ ದಂತೆ ಒಟ್ಟು 7 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಬೀರನಹಳ್ಳಿಯಲ್ಲಿ ತಾಯಿ, ಇಬ್ಬರು ಮಕ್ಕಳು ನೀರು ಪಾಲು: ನಾಗಮಂಗಲ ತಾಲೂಕು ಬೋಗಾಧಿ ಗ್ರಾಪಂ ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕಾಲು ಜಾರಿ ಬಿದ್ದು ಸಾವನ್ನಪ್ಪಿ ದ್ದಾರೆ. ಬೀರನಹಳ್ಳಿ ಗ್ರಾಮದ ನರ ಸಿಂಹಯ್ಯ ಎಂಬುವರ ಪತ್ನಿ ಗೀತಾ (40) ಹಾಗೂ ಅವರ ಪುತ್ರಿಯರಾದ ಸವಿತಾ (19), ಸೌಮ್ಯ (14) ಎಂಬುವರು ಮೃತಪಟ್ಟವರು. ಇವರು ಬೆಳಗ್ಗೆ ಸುಮಾರು 11.30ರಲ್ಲಿ ಕೆರೆಯಲ್ಲಿ ಬಿಂದಿಗೆ ತೇಲು ತ್ತಿರುವುದನ್ನು ಹಾಗೂ ಕೆರೆ ದಡದಲ್ಲಿ ಬಟ್ಟೆಗಳು ಬಿದ್ದಿ ರುವುದನ್ನು ಗಮನಿಸಿದ ದಾರಿಹೋಕರು ಸಂಶಯ ಗೊಂಡು ಕೆರೆಯಲ್ಲಿ ಹುಡುಕಾಟನಡೆಸಿದಾಗ ಮೃತ ದೇಹಗಳು ದೊರೆತಿವೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೋಳ ಸಂದ್ರದಲ್ಲಿ ಇಬ್ಬರು ಕೆರೆ ಪಾಲು: ನಾಗಮಂಗಲ ತಾಲೂಕು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೋಳಸಂದ್ರ ಗ್ರಾಮದ ಇಬ್ಬರು ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಜರುಗಿದೆ. ಚೋಳ ಸಂದ್ರ ಗ್ರಾಮದ ಗಂಗಾಧರ ಎಂಬುವರ ಪುತ್ರಿ ರಶ್ಮಿ (23) ಹಾಗೂ ಅದೇ ಗ್ರಾಮದ ನಿರಂಜನ್ ಕುಮಾರ್ ಎಂಬುವರ ಪುತ್ರಿ ಇಂಚರ (7) ಸಾವನ್ನಪ್ಪಿದವರು. ಇವರಿಬ್ಬರು ಚೋಳಸಂದ್ರ ಗ್ರಾಮದ ಪಕ್ಕದಲ್ಲಿರುವ ಯಲಾದಹಳ್ಳಿ ಗ್ರಾಮದ ಕೆರೆಗೆ ಬಟ್ಟೆ ಒಗೆಯಲು ತೆರಳಿದಾಗ ಇಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಶವಗಳನ್ನು ಕೆರೆಯಿಂದ ಹೊರಗೆ ತೆಗೆದು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಯಲ್ಲಿ ಮುಳುಗಿ ಇಬ್ಬರು ಸಾವು: ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿ ಹುರುಳಿ ಗಂಗನಹಳ್ಳಿಯ ಹೇಮಾವತಿ ನಾಲೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುರುಳಿ ಗಂಗನಹಳ್ಳಿ ಗ್ರಾಮದ ಲೇಟ್ ಸ್ವಾಮೀಗೌಡ ಅವರ ಮಗ ಅಭಿಷೇಕ್(15) ಮತ್ತು ಆದಿಹಳ್ಳಿ ಗ್ರಾಮದ ಜವರೇಗೌಡ ಅವರ ಮಗ ಕುಮಾರ್(25) ಮೃತಪಟ್ಟವರು.

ಬೆಳಿಗ್ಗೆ 10ಗಂಟೆ ಸಮಯದಲ್ಲಿ ಅಭಿಷೇಕ್ ಮತ್ತು ಕುಮಾರ್ ಅವರು ಗ್ರಾಮದ ಬಳಿಯ ಹೇಮಾವತಿ ಕಾಲುವೆಯಲ್ಲಿ ಜಾನುವಾರಗಳ ಮೈ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅಭಿಷೇಕ್ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯೊಳಗೆ ಬಿದ್ದಿದ್ದಾರೆ. ತಕ್ಷಣ ಆತನÀನ್ನು ರಕ್ಷಿಸಲು ಹೋದ ಕುಮಾರ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜಾನುವಾರುಗಳು ಈಜಿ ದಡ ಸೇರಿವೆ. ಮೃತ ಅಭಿಷೇಕ್ ಕೊರಟೀಕೆರೆ ಶ್ರೀ ಚನ್ನಕೇಶವ ಅನುದಾನಿತ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯಾಗಿದ್ದಾರೆ. ಕುಮಾರ್ ಅವರು ಅಭಿಷೇಕ್ ಅವರ ಸೋದರ ಮಾವನವರಾಗಿದ್ದಾರೆ. ಕುಮಾರ್ ಅವರು ಅಕ್ಕನ ಮನೆ ಗಂಗನಹಳ್ಳಿ ಬಂದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಅಭಿಷೇಕ್ ನಿಧನಕ್ಕೆ ಶ್ರೀ ಚನ್ನಕೇಶವ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಹಾಗೂ ಶಿಕ್ಷಕ ವೃಂದದವರು ಕಂಬನಿ ಮಿಡಿದಿದ್ದಾರೆ. ತಾಲೂಕು ಎಪಿಎಂಸಿ ಅಧ್ಯಕ್ಷ ಜೆ.ಚಂದ್ರಹಾಸ ಮತ್ತು ಉಪಾಧ್ಯಕ್ಷೆ ಮಂಜಮ್ಮ ಅವರು ಮೃತ ಅಭಿಷೇಕ್ ಮತ್ತು ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

Translate »