ಸೆ.27ರಿಂದ 7 ದಿನ ದಸರಾದ ಮಸ್ತ್ ಮನರಂಜನೆ ಯುವ ದಸರಾ
ಮೈಸೂರು

ಸೆ.27ರಿಂದ 7 ದಿನ ದಸರಾದ ಮಸ್ತ್ ಮನರಂಜನೆ ಯುವ ದಸರಾ

September 23, 2022

ಮೈಸೂರು,ಸೆ.22(ಎಸ್‍ಬಿಡಿ)-ಮೈಸೂರು ದಸರಾ ಮಹೋತ್ಸವದಲ್ಲಿ ಮನರಂಜನೆಯ ರಸ ದೌತಣ ನೀಡುವ `ಯುವ ದಸರಾ’ ಸೆ.27ರಿಂದ ಆರಂಭವಾಗಲಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂದಿನಿಂದ ಅ.3ರವರೆಗೆ ಒಟ್ಟು 7 ದಿನ ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯ ಲಿರುವ `ಯುವ ದಸರಾ’ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡ ಲಿದ್ದು, ಚಿತ್ರನಟ ಕಿಚ್ಚ ಸುದೀಪ್ ವಿಶೇಷ ಆಹ್ವಾ ನಿತರಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಬಾರಿಯೂ ಪ್ರಸಿದ್ಧ ಗಾಯಕರು, ಚಿತ್ರ ತಾರೆಯರು `ಯುವ ದಸರಾ’ವನ್ನು ರಂಗುಗೊಳಿಸಲಿದ್ದಾರೆ.

ಮಂಗ್ಲಿ ಮೋಡಿ: ಉದ್ಘಾಟನಾ ಸಮಾರಂಭದ ಬಳಿಕ ಮೊದಲ ಕಾರ್ಯಕ್ರಮವಾಗಿ ಪ್ರಸಿದ್ಧ ನೃತ್ಯ ಪಟು ಮೈಸೂರಿನ ಶ್ರೀಧರ್ ಜೈನ್ ಹಾಗೂ ತಂಡದ ಕಲಾವಿದರು ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ. ನಂತರ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದಲೇ ಜನಪ್ರಿಯರಾಗಿರುವ ರಘು ದೀಕ್ಷಿತ್ ಗಾಯನ ಸುಧೆ ಹರಿಸಲಿದ್ದಾರೆ. ಹಾಗೆಯೇ `ಕಣ್ಣು ಹೊಡಿ ಯಾಕ ಮೊನ್ನೆ ಕಲತೀನಿ…’ ಖ್ಯಾತಿಯ ವಿಶೇಷ ಕಂಠದ ಗಾಯಕಿ ಮಂಗ್ಲಿ ಮೋಡಿ ಮಾಡಲಿದ್ದಾರೆ.

`ಅಪ್ಪು ನಮನ’: 2ನೇ ದಿನದಿಂದ (ಸೆ.28) ಕೊನೆ ವರೆಗೂ `ಯುವ ದಸರಾ’ ಕಾರ್ಯಕ್ರಮದ ಮೊದಲ ಅವಧಿಯಲ್ಲಿ `ಯುವ ಸಂಭ್ರಮ’ದ ವಿಜೇತ ತಂಡ ಗಳ ನೃತ್ಯ ಪ್ರದರ್ಶನವಿರಲಿದೆ. ಮೊದಲೇ ಘೋಷಿಸಿ ದಂತೆ `ಯುವ ದಸರಾ’ದ ಒಂದು ದಿನವನ್ನು ದಿವಂಗತ ಪುನೀತ್ ರಾಜ್‍ಕುಮಾರ್ ಅವರ ನೆನಪಿನ ಕಾರ್ಯಕ್ರಮಕ್ಕೆ ನಿಗದಿಪಡಿಸಲಾಗಿದೆ. ಅಂತೆಯೇ ಸೆ.28ಕ್ಕೆ ಸಂಗೀತ ನಿರ್ದೇಶಕ, ಗಾಯಕ ಗುರು ಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ ಇನ್ನಿತರ ಗಾಯಕರು ಪುನೀತ್ ಹಾಡಿರುವ ಹಾಗೂ ಅಭಿನಯಿಸಿರುವ ಹತ್ತಾರು ಗೀತೆಗಳನ್ನು ಹಾಡುವ ಮೂಲಕ `ಅಪ್ಪು ನಮನ’ ಸಲ್ಲಿಸಲಿದ್ದಾರೆ. ಅಂದು ಸ್ಥಳೀಯ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಲಿದ್ದಾರೆ.

`ಬೇಬಿ ಡಾಲ್’ ಸಿಂಗರ್: ಶಿಕ್ಷಣ, ಉದ್ಯೋಗ ಹಾಗೂ ಪ್ರವಾಸ ಕಾರಣದಿಂದ ಮೈಸೂರಿನಲ್ಲಿರುವ ಹೊರರಾಜ್ಯ ಹಾಗೂ ವಿದೇಶಿಗರೂ ದಸರಾ ಸಂಭ್ರಮ ದಲ್ಲಿ ಉತ್ಸಾಹದಿಂದ ಭಾಗಿಯಾಗಬೇಕೆಂಬ ಉದ್ದೇಶ ದಿಂದ ಬಾಲಿವುಡ್ ಗಾಯಕರನ್ನು `ಯುವ ದಸರಾ’ಗೆ ಆಹ್ವಾನಿಸಲಾಗುತ್ತದೆ. ಹಾಗೆಯೇ ಈ ಬಾರಿ ಸೆ.29 ರಂದು `ಬೇಬಿ ಡಾಲ್…’ ಹಾಡಿನ ಮೂಲಕ ಹೆಚ್ಚು ಶೋತ್ರುಗಳ ಮನಮುಟ್ಟಿರುವ ಬಾಲಿವುಡ್ ಗಾಯಕಿ `ಕನ್ನಿಕಾ ಕಪೂರ್’ ಅಸೆಂಟ್ ಸಂಗೀತ ತಂಡದೊಂ ದಿಗೆ ಕಾರ್ಯಕ್ರಮ ನೀಡಲಿದ್ದಾರೆ. ವಿಶಿಷ್ಟ ಗಾಯನ ಶೈಲಿಯ ಮೂಲಕ ಸಂಗೀತ ರಸಿಕರಿಗೆ ಇಷ್ಟವಾಗಿ ರುವ ಇವರು, ಹತ್ತಾರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ. ಜೊತೆಗೆ ಸಿಗ್ನೇಚರ್ ಗ್ರೂಪ್ ತಂಡ ಹಾಗೂ ಸ್ಥಳೀಯ ಕಲಾವಿದರು ನರ್ತಿಸಲಿದ್ದಾರೆ. ಜೊತೆಗೆ ಅಂದು ಚಿತ್ತಾಕರ್ಷಕ ಲೇಸರ್ ಶೋ ಕೂಡ ಇರಲಿದೆ.

ಸ್ಯಾಂಡಲ್‍ವುಡ್ ನೈಟ್ಸ್: ಸೆ.30ರಂದು `ಸ್ಯಾಂಡಲ್ ವುಡ್ ನೈಟ್’ ಯುವಸಮೂಹದ ಸಡಗರವನ್ನು ಇಮ್ಮಡಿಗೊಳಿಸಲಿದೆ. ಕನ್ನಡ ಚಿತ್ರರಂಗದ ನಾಯ ಕರು, ನಾಯಕಿಯರು, ಗಾಯಕರು, ಪೋಷಕ ನಟರು ಸೇರಿದಂತೆ ಸ್ಯಾಂಡಲ್‍ವುಡ್‍ನ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನೆಚ್ಚಿನ ನಟ-ನಟಿಯರನ್ನು ಕಣ್ತುಂಬಿಕೊಳ್ಳುವ ತವಕದಲ್ಲಿರುವ ಯುವ ಸಮೂಹಕ್ಕೆ ಅಂದು ಮನರಂಜನೆ ಉಣ ಬಡಿಸಲಿದ್ದಾರೆ. ಕಾರ್ಯಕ್ರಮದ ನಡುವೆ ಸ್ಥಳೀಯ ನೃತ್ಯ ಕಲಾವಿದರು ರಂಜಿಸಲಿದ್ದಾರೆ.

ಪ್ರಸಿದ್ಧ ಗಾಯಕರ ಆಕರ್ಷಣೆ: ಅಕ್ಟೋಬರ್ 1ರಂದು ದಂತವೈದ್ಯೆ, ಸಂಗೀತ ನಿರ್ದೇಶಕಿ, ಕಂಠದಾನ ಕಲಾವಿದೆ, ಪ್ರಸಿದ್ಧ ಗಾಯಕಿ ಶಮಿತಾ ಮಲ್ನಾಡ್ ಸಂಗೀತ ಸುಧೆ ಹರಿಸಲಿದ್ದಾರೆ. ಅಂದೂ ಕೂಡ ವಿಶಿಷ್ಟ ನೃತ್ಯ ರೂಪಕವನ್ನು ಸಂಯೋಜಿಸ ಲಾಗಿದೆ. ಅ.2ರಂದು ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ಅಮಿತ್ ತ್ರಿವೇದಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಂದು ಚಿತ್ರತಾರೆಯರಾದ ಹರ್ಷಿಕಾ ಪೂಣಚ್ಚ ಹಾಗೂ ವಿಜಯ್ ರಾಘವೇಂದ್ರ ಭಾಗಿಯಾಗುವುದು ವಿಶೇಷ. ಕೊನೆಯ ದಿನ ಅ.3ರಂದು `ವಿಕ್ರಾಂತ್ ರೋಣಾ’ ಚಿತ್ರದ `ರಾ… ರಾ… ರಕ್ಕಮ್ಮಾ…’ ಹಾಡಿನ ಮೂಲಕ ಯುವಸಮೂಹಕ್ಕೆ ಕಿಕ್ಕೇರಿಸಿರುವ ಖ್ಯಾತ ಗಾಯಕಿ ಸುನಿಧಿ ಚೌಹಾನ್ ಸಂಗೀತ ಲೋಕದಲ್ಲಿ ತೇಲಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಗಾಯಕಿ ಸುಪ್ರಿಯಾ ರಾಮ್, ಮಹಿಳಾ ಕಲಾವಿದರ ಬ್ಯಾಂಡ್ ಜೊತೆಗೆ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಅಂದು ಕಣ್ಮನ ಸೆಳೆಯುವ ಫ್ಯಾಷನ್ ಷೋ ಕೂಡ ಇರಲಿದೆ.

ದಸರಾ ನಂತರ ವೆಚ್ಚ ಪ್ರಕಟ: ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ `ಯುವ ದಸರಾ’ ಕಾರ್ಯಕ್ರಮದ ವಿವರ ನೀಡಿದ ಯುವ ದಸರಾ ಉಪ ಸಮಿತಿ ವಿಶೇಷಾಧಿಕಾರಿಯಾದ ಎಸ್ಪಿ ಆರ್.ಚೇತನ್, ಉದ್ಘಾ ಟನೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿರುವ ನಟ ಸುದೀಪ್ ಅವರು ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಕಾರ್ಯಕ್ರಮ ನೀಡುವ ಕಲಾವಿದರ ಸಂಭಾವನೆ ಸೇರಿದಂತೆ `ಯುವ ದಸರಾ’ ಒಟ್ಟು ವೆಚ್ಚದ ಬಗ್ಗೆ ದಸರಾ ನಂತರ ವಿವರಣೆ ನೀಡಲಾಗುವುದು. ಕೆಲ ಕಲಾವಿದರನ್ನು ನೇರವಾಗಿ ಮತ್ತಷ್ಟು ಕಲಾವಿದರನ್ನು ಅವರು ಟೈಅಪ್ ಮಾಡಿ ಕೊಂಡಿರುವ ಏಜೆನ್ಸಿ ಕಂಪನಿಗಳ ಮೂಲಕ ಸಂಪರ್ಕಿಸಲಾಗಿದೆ. ಆದರೆ ಅವರ ಹಿಂದಿನ ಕಾರ್ಯಕ್ರಮಗಳಿಗೆ ಪಡೆದಿರುವ ಸಂಭಾವನೆ ಬಗ್ಗೆ ಮಾಹಿತಿ ಪಡೆದು ಅದರನ್ವಯ ಅಂತಿಮಗೊಳಿಸಲಾಗಿದೆ. ಯಾವುದೇ ರೀತಿ ದುಂದು ವೆಚ್ಚವಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಮತ್ತೊಂದು ಮೂಲದ ಪ್ರಕಾರ ಈ ಬಾರಿ ಕಲಾವಿದರ ಸಂಭಾವನೆಗಾಗಿಯೇ 1.50 ಕೋಟಿ ರೂ. ವೆಚ್ಚವಾಗು ತ್ತಿದ್ದು, ಅದರಲ್ಲಿ ಗಾಯಕಿ ಸುನಿದಿ ಚೌಹಾನ್ ಹೆಚ್ಚು ಪಡೆದಿದ್ದಾರೆ ಎನ್ನಲಾಗಿದೆ.

Translate »