ಬಡತನ ರೇಖೆಗಿಂತ ಕೆಳಗಿರುವ ಶೇ.72ರಷ್ಟು ರೈತರು
ಮೈಸೂರು

ಬಡತನ ರೇಖೆಗಿಂತ ಕೆಳಗಿರುವ ಶೇ.72ರಷ್ಟು ರೈತರು

December 27, 2021

ಮೈಸೂರು, ಡಿ.26(ಆರ್‍ಕೆಬಿ)- ಕೃಷಿ ಬೆಲೆ ಆಯೋಗದ ಅಧ್ಯಯನ ಪ್ರಕಾರ ರಾಜ್ಯದ ಶೇ.72ರಷ್ಟು ರೈತರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಕೃಷಿ ಆರ್ಥಿಕ ತಜ್ಞ ಹಾಗೂ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಆಯೋ ಜಿಸಿದ್ದ ವಿಶ್ವ ರೈತ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಕೃಷಿ ಹಾಗೂ ರೈತ ಸಮಸ್ಯೆಗಳ ಕುರಿತ ವಿಚಾರ ಮಂಡನೆ ಮತ್ತು ಸಂವಾದದಲ್ಲಿ ಮಾತನಾಡಿದರು. ರೈತ ಹೇಗೆ ಸಾಯುತ್ತಿದ್ದಾನೆ ಎಂಬ ಅಂಕಿ ಅಂಶಗಳು ಮಾತ್ರ ಬರುತ್ತಿವೆಯೇ ಹೊರತು, ರೈತರನ್ನು ಮೇಲೆತ್ತುವ ಬಗ್ಗೆಯಾಗಲೀ, ಕೃಷಿಕರ ಬಗ್ಗೆಯಾಗಲೀ ಚಿಂತಿಸದೇ ಕಡೆಗಣಿಸುತ್ತಿದ್ದಾರೆ. ಎಷ್ಟು ಹೋರಾಟ ಮಾಡಿದರೂ ಅದರ ಪರಿಣಾಮ ವ್ಯವಸ್ಥೆಯ ಮೇಲೆ ಅದರಿಂದ ಏನೂ ಪರಿಣಾಮ ಬೀರುವುದಿಲ್ಲ ಎಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.

ವೈದ್ಯರು, ಸಾರಿಗೆ ಬಸ್ ಚಾಲಕರು ಮುಷ್ಕರ ಹೂಡಿದರೆ ತಕ್ಷಣ ಸ್ಪಂದಿಸುವ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಿದ್ದರೂ ರೈತರು ಹೋರಾಟದ ಜೊತೆಜೊತೆಗೆ ಆಹಾರದ ಉತ್ಪಾದನೆ ಮಾತ್ರ ನಿಲ್ಲಿಸಿಲ್ಲ. 2019-20, 2020-21ನೇ ಸಾಲಿನಲ್ಲಿ ಕೋವಿಡ್‍ನಿಂದಾಗಿ ಎಲ್ಲಾ ವಲಯಗಳು ಕೈ ಕಟ್ಟಿ ಕುಳಿತಿದ್ದಾಗ ಕೃಷಿ ವಲಯದಲ್ಲಿ ರೈತರು ಧನಾತ್ಮಕವಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಆದರೆ, ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳು ವಲ್ಲಿ ಸೋತಿದ್ದೇವೆ ಎಂದು ಹೇಳಿದರು.

ರೈತ ಕಷ್ಟಪಟ್ಟು ದುಡಿದು ಉತ್ಪಾದಿಸಿದ 100 ಮಿಲಿಯನ್ ಟನ್‍ಗಿಂತಲೂ ಹೆಚ್ಚಿನ ಆಹಾರ ಸರ್ಕಾರದ ಗೋದಾಮುಗಳಲ್ಲಿ ಕೊಳೆಯುತ್ತಾ ಬಿದ್ದಿದೆ. ಕೃಷಿ ಬಿಕ್ಕಟ್ಟು, ರೈತರ ವಲಸೆ, ರೈತರ ಆತ್ಮಹತ್ಯೆಗಳು ಹೆಚ್ಚಿವೆ. ಕೃಷಿ ವಲಯವನ್ನೇ ನಂಬಿರುವ ರೈತರು ಹೆಚ್ಚು ಸಮಸ್ಯೆಗಳನ್ನು ಎದುರಿಸಿದ್ದಾರೆ. ದೇಶದ ಆಗುಹೋಗಿನ ದೃಷ್ಟಿಯಿಂದ ಕೋವಿಡ್ ಸಂದರ್ಭದಲ್ಲೂ ಯಶಸ್ವಿಯಾಗಿ ಆಹಾರ ಪದಾರ್ಥಗಳನ್ನು ಬೆಳೆದಿದ್ದಾರೆ. ಹೀಗಿದ್ದೂ ರೈತರ ಆದಾಯದ ಬಗ್ಗೆಯಾಗಲೀ, ರೈತ ಹೇಗೆ ಬದುಕುತ್ತಿದ್ದಾನೆ ಎಂಬ ಬಗ್ಗೆ ಯಾಗಲೀ ಸ್ಪಷ್ಟತೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ರೈತರ ಸಮಸ್ಯೆಗಳು ಮತ್ತು ಅವರ ಆದಾಯದ ಬಗ್ಗೆ ಗಮನ ಹರಿಸುವ ಅವಶ್ಯ ವಿದೆ. ಕೃಷಿ ನೀತಿಯಲ್ಲಿ ಬೆಲೆ ನೀತಿ ಬಹಳ ಮುಖ್ಯವಾಗಿದ್ದು, ಬೆಲೆ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಗಮನ ಹರಿಸಿ, ಅಗತ್ಯ. ಬೆಂಬಲ ಬೆಲೆಗೆ ಕಾನೂನು ರೂಪ ನೀಡಬೇಕು. ರೈತರ ಆದಾಯದ ಜೊತೆಗೆ ರೈತರಿಗೆ ಭರವಸೆ ನೀಡುವಂತಹ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

Translate »