ಮೈಸೂರಲ್ಲಿ ಒಂದೇ ದಿನ 43 ಪ್ರಕರಣದಲ್ಲಿ   78,000 ರೂ. ದಂಡ ವಸೂಲಿ
ಮೈಸೂರು

ಮೈಸೂರಲ್ಲಿ ಒಂದೇ ದಿನ 43 ಪ್ರಕರಣದಲ್ಲಿ  78,000 ರೂ. ದಂಡ ವಸೂಲಿ

May 8, 2020

ಮೈಸೂರು, ಮೇ 7 (ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದವರ ವಿರುದ್ಧ 43 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮೈಸೂರು ಸಂಚಾರ ಪೊಲೀಸರು, ಒಂದೇ ದಿನ ಒಟ್ಟು 78,000 ರೂ. ದಂಡ ವಸೂಲಿ ಮಾಡಿದ್ದಾರೆ. ಕೆಂಪು ವಲಯವಾಗಿರುವುದರಿಂದ ಮೈಸೂರಲ್ಲಿ ಲಾಕ್‍ಡೌನ್ ನಿರ್ಬಂಧ ಮುಂದುವರಿದಿದೆಯಾದರೂ ಅದನ್ನು ಲೆಕ್ಕಿಸದೇ ಅನಗತ್ಯವಾಗಿ ಮಧ್ಯಾಹ್ನ 12 ಗಂಟೆ ನಂತರವೂ ವಾಹನಗಳಲ್ಲಿ ಸಂಚರಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು, ಬುಧವಾರ ಒಂದೇ ದಿನ 43 ಪ್ರಕರಣಗಳನ್ನು ದಾಖಲಿಸಿ 78,000 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಮೈಸೂರು ನಗರ ಸಂಚಾರ ಎಸಿಪಿ ಸಂದೇಶ್‍ಕುಮಾರ್ ತಿಳಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ನಂತರ ಯಾರೂ ವಾಹನಗಳಲ್ಲಿ ಅನಗತ್ಯವಾಗಿ ಸಂಚರಿಸಬಾರ ದೆಂಬ ನಿರ್ಬಂಧವಿದ್ದಾಗ್ಯೂ ಕೆಲವರು ಸೂಕ್ತ ಕಾರಣವಿಲ್ಲದಿದ್ದರೂ ಓಡಾಡುತ್ತಿರುವುದು ಕಂಡು ಬಂದಿದೆ. ದೇವರಾಜ, ಕೃಷ್ಣರಾಜ, ವಿ.ವಿ. ಪುರಂ, ಎನ್.ಆರ್. ಹಾಗೂ ಸಿದ್ದಾರ್ಥ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ವೈದ್ಯರು, ಪೌರ ಕಾರ್ಮಿಕರು, ಹೋಟೆಲ್‍ಗಳಿಂದ ಆಹಾರ ಪದಾರ್ಥ ಪೂರೈಸುವವರು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ರೈತರು, ಮಾಧ್ಯಮ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆ ಯರನ್ನು ಹೊರತುಪಡಿಸಿ ಉಳಿದಂತೆ ಬೇರೆಯವರು ಓಡಾಡುವುದನ್ನು ನಿರ್ಬಂಧಿಸ ಲಾಗಿದೆ. ದಿನಸಿ, ಹಾಲು, ಹಣ್ಣು-ತರಕಾರಿ, ಔಷಧಿಗಳಂತಹ ಅಗತ್ಯ ವಸ್ತುಗಳ ಖರೀದಿಯನ್ನು ಅಪರಾಹ್ನ 12 ಗಂಟೆಯವರೆಗೆ ಪಡೆಯಲು ಅವಕಾಶವಿದೆ. ನಂತರವೂ ಆ ಅಂಗಡಿಗಳು ತೆರೆದಿರುತ್ತವೆ. ಆಗ, ಅವರ ಮನೆ ಸಮೀಪದಲ್ಲಿ ನಡೆದೇ ಹೋಗಿ ಖರೀದಿಸಬೇಕೇ ಹೊರತು, ಯಾರೂ ವಾಹನಗಳಲ್ಲಿ ಸಂಚರಿಸಬಾರದು ಎಂದು ಸಂದೇಶ್‍ಕುಮಾರ್ ತಿಳಿಸಿದರು. ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಓಡಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿರುವ ಅವರು, ಮಧ್ಯಾಹ್ನ 12ರ ನಂತರ ವಾಹನಗಳಲ್ಲಿ ಓಡಾಡದೇ ಪೊಲೀಸರೊಂದಿಗೆ ಸಹಕರಿಸಬೇಕೆಂದೂ ತಿಳಿಸಿದ್ದಾರೆ.

 

 

Translate »