ನವಂಬರ್‍ನಲ್ಲಿ 84,633 ಪ್ರಕರಣ, 1,36,61,500 ರೂ. ದಂಡ ವಸೂಲಿ
ಮೈಸೂರು

ನವಂಬರ್‍ನಲ್ಲಿ 84,633 ಪ್ರಕರಣ, 1,36,61,500 ರೂ. ದಂಡ ವಸೂಲಿ

December 6, 2020

ಮೈಸೂರು, ಡಿ.5(ಆರ್‍ಕೆ)-ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಸಂಚಾರ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಮೈಸೂರಿನ ದೇವರಾಜ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಮುನಿಯಪ್ಪ, ಕೆ.ಆರ್. ಸಂಚಾರ ಠಾಣೆಯ ಹೆಚ್.ಎಂ.ವಿನಯ್, ವಿವಿಪುರಂನ ಅರುಣ ಕುಮಾರಿ, ಎನ್‍ಆರ್‍ನ ಪ್ರಸನ್ನಕುಮಾರ್ ಹಾಗೂ ಸಿದ್ಧಾರ್ಥ ನಗರ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಿದ್ದಾರೆ.

ನವಂಬರ್ 1ರಿಂದ 30ರವರೆಗೆ 5 ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 84,633 ಪ್ರಕರಣ ದಾಖಲಿಸಿ ವಾಹನ ಚಾಲಕರು ಮತ್ತು ಮಾಲೀಕರಿಂದ 1,36, 61,500 ರೂ. ದಂಡ ಸಂಗ್ರಹಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಿದ ಸಂಚಾರ ಪೊಲೀಸರು, ನ್ಯಾಯಾಲಯದಲ್ಲಿ 10,000 ರೂ. ದಂಡ ಕಟ್ಟಿಸಿ ದ್ದಾರೆ. 638 ಅತೀ ವೇಗ ಪ್ರಕರಣ, 1,246 ಅಪಾಯ ಕಾರಿ ವಾಹನ ನಿಲುಗಡೆ, 24 ಫುಟ್‍ಪಾತ್ ಪಾರ್ಕಿಂಗ್, ಮೊಬೈಲ್‍ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದ 91, ಹೆಲ್ಮೆಟ್ ರಹಿತ ವಾಹನ ಚಾಲನೆ 26,432, ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ 329, ಟ್ರಾಫಿಕ್ ಸಿಗ್ನಲ್ ಜಂಪಿಂಗ್ 66, ದೋಷಪೂರಿತ ಸೈಲನ್ಸರ್ 59, ಕಾರಿನ ಗಾಜಿಗೆ ಕಪ್ಪು ಫಿಲಂ ಅಳವಡಿಕೆ 220, ದೋಷಪೂರಿತ ನಂಬರ್ ಪ್ಲೇಟ್ 583, ನೋ ಎಂಟ್ರಿ 250, ಸಮವಸ್ತ್ರ ಧರಿಸದಿರುವುದಕ್ಕೆ 101, ತ್ರಿಬಲ್ ರೈಡಿಂಗ್ 686, ದ್ವಿಚಕ್ರ ವಾಹನದ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು 13,839 ಸೇರಿದಂತೆ ವಿವಿಧ 47 ಬಗೆಯ ಸಂಚಾರ ನಿಯಮ ಉಲ್ಲಂಘಿಸಿ ದವರ ವಿರುದ್ಧ ಒಟ್ಟು 84,633 ಪ್ರಕರಣವನ್ನು ನವಂಬರ್ ಒಂದೇ ತಿಂಗಳಲ್ಲಿ ದಾಖಲಿಸಲಾಗಿದೆ. ತಪಾಸಣಾ ಸ್ಥಳದಲ್ಲೇ 1,36,02,300 ರೂ. ಹಾಗೂ ಆಟೋಮೇಷನ್ ಸೆಂಟರ್‍ನಲ್ಲಿ 49,200 ರೂ. ಸೇರಿದಂತೆ ಒಟ್ಟು 1,36,61,500 ರೂ. ದಂಡ ವಸೂಲಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ನಿರ್ದೇಶನ ದಂತೆ ಸಂಚಾರ ಠಾಣೆ ಪೊಲೀಸರು ಮೈಸೂರಿನ ಪ್ರಮುಖ ಜಂಕ್ಷನ್, ರಸ್ತೆಗಳಲ್ಲಿ ಪ್ರತೀದಿನ ತಪಾಸಣೆ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಎಚ್ಚರದಿಂದ ವಾಹನ ಚಾಲನೆ ಮಾಡಿ ದಂಡ ಪಾವತಿಸುವುದರಿಂದ ತಪ್ಪಿಸಿಕೊಳ್ಳಬೇಕಾಗಿದೆ.

Translate »