`ಗ್ರಾಪಂ ಚುನಾವಣೆಯಲ್ಲೂ ಬಿಜೆಪಿ ಹಣದ ಹೊಳೆ ಹರಿಸಲಿದೆ’
ಮೈಸೂರು

`ಗ್ರಾಪಂ ಚುನಾವಣೆಯಲ್ಲೂ ಬಿಜೆಪಿ ಹಣದ ಹೊಳೆ ಹರಿಸಲಿದೆ’

December 6, 2020

ಮೈಸೂರು, ಡಿ.5(ಎಂಟಿವೈ)- ಹಣದ ಹೊಳೆ ಹರಿಸುವ ಮೂಲಕ ಉಪ ಚುನಾ ವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ, ಇದೀಗ ಗ್ರಾಪಂ ಚುನಾವಣೆಯಲ್ಲೂ ಹಣದ ಹೊಳೆ ಹರಿಸಿ ಜನರನ್ನು ಸೆಳೆಯಲು ಸಂಚು ನಡೆಸುತ್ತಿದೆ. ಬಿಜೆಪಿ ಈ ಚುನಾವಣಾ ಅಕ್ರಮ ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಕಟ್ಟೆ ಚ್ಚರ ವಹಿಸಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಎಚ್ಚರಿಸಿದ್ದಾರೆ.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತ ರೊಂದಿಗೆ ಮಾಜಿ ಸಂಸದರು ಜತೆಗೂಡಿ ಶನಿವಾರ ಬೆಳಿಗ್ಗೆ ಸಭೆ ನಡೆಸಿದರು.

ಬಳಿಕ ಜಲದರ್ಶಿನಿ ಸರ್ಕಾರಿ ಅತಿಥಿಗೃಹ ದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಧಿಕಾರದ ಅಮಲಿನಿಂದಾಗಿ ಸರ್ವಾ ಧಿಕಾರಿ ಧೋರಣೆ ಅನುಸರಿಸುತ್ತಿದೆ. ಹಣದ ಹೊಳೆ ಹರಿಸಿ, ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣೆಯ ಮಹತ್ವ ವನ್ನೇ ಧೂಳಿಪಟ ಮಾಡುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಆರ್.ಆರ್.ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅನೀತಿಯ ರಾಜಕಾರಣ ಮಾಡಿದೆ. ಎರಡೂ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಹಣದ ಹೊಳೆ ಯನ್ನೇ ಹರಿಸಿದ್ದು ಜಗಜ್ಜಾಹೀರಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಗ್ರಾ.ಪಂ ಚುನಾ ವಣೆಯಲ್ಲೂ ಹಣದ ಹೊಳೆಯೇ ಹರಿ ಯುವ ಅಪಾಯವಿದೆ. ಇದನ್ನು ಎದುರಿ ಸಲು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯ ಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿ ದರು. ಕಾಂಗ್ರೆಸ್ ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಪಂ ವ್ಯವಸ್ಥೆ ಜಾರಿಗೆ ತಂದಿದ್ದು, ಮೀಸ ಲಾತಿ ಕ್ರಮ ಅನುಸರಿಸಿ ಗ್ರಾಪಂ ವ್ಯವಸ್ಥೆ ಯನ್ನು ಬಲಪಡಿಸಿದ್ದು ಕಾಂಗ್ರೆಸ್ ಸರ್ಕಾರ. ಇದನ್ನು ಗ್ರಾಮೀಣ ಮತದಾರರು ಅರಿತಿ ದ್ದಾರೆ. ಗ್ರಾಪಂ ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಈ ಅವಧಿ ಕಡಿತಗೊಳಿಸಿ ಗ್ರಾಪಂ ವ್ಯವಸ್ಥೆಯನ್ನೇ ಬಲ ಹೀನಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗ್ರಾ.ಪಂ ಚುನಾ ವಣೆಯನ್ನು ಸಮರ್ಥವಾಗಿ ನಡೆಸುವಂತೆ ಸೂಚಿಸಿದ್ದಾರೆ. ಅದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ. ಈ ಹಿಂದೆ ನಮ್ಮ ಸರ್ಕಾರ ನೀಡಿದ ಜನಪ್ರಿಯ ಕಾರ್ಯ ಕ್ರಮಗಳ ಕುರಿತೂ ಪ್ರಚಾರ ಮಾಡಿ ಮತದಾ ರರ ಗಮನ ಸೆಳೆಯಲಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷವು ಗ್ರಾಪಂ ಮೂಲಕ ಹಲವು ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಪಂಚಾಯಿತಿ ವ್ಯವಸ್ಥೆಗೆ ಬಲ ತುಂಬಿದೆ ಎಂದು ಹೇಳಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಆದರೆ, ಬಿಜೆಪಿ ಸರ್ಕಾರ ಗ್ರಾಪಂಗಳ ಮೀಸಲಾತಿ ಕಡಿತಗೊಳಿಸಿ ಗ್ರಾಪಂ ವ್ಯವಸ್ಥೆಯನ್ನು ಬಲಹೀನಗೊಳಿ ಸುತ್ತಿದೆ ಎಂದು ಟೀಕಿಸಿದರು.

ಶಾಸಕ ಹೆಚ್.ಪಿ.ಮಂಜುನಾಥ್ ಮಾತ ನಾಡಿ, ಸದ್ಯದಲ್ಲೇ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿನ ವೆಚ್ಚವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ವೆಚ್ಚ ಮಿತಿಗೊಳಿಸಲು ಜಿಲ್ಲಾ ಧಿಕಾರಿಗಳಿಗೆ ಸುತ್ತೋಲೆ ಹೊರಡಿಸಬೇಕು. ಅಭ್ಯರ್ಥಿಗಳು ಮಾಡುವ ವೆಚ್ಚದ ಮೇಲೆ ಹದ್ದಿನ ಕಣ್ಣಿಡಬೇಕು. ಆಡಳಿತಾರೂಢ ಪಕ್ಷ ಅಧಿಕಾರ ದುರ್ಬಳಕೆ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿ ದರು. ವರಿಷ್ಠರ ಸೂಚನೆಯಂತೆ ಕಾಂಗ್ರೆಸ್ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸು ವುದೇ ನಮ್ಮ ಗುರಿ. ಕಾಂಗ್ರೆಸ್ ಬೆಂಬಲಿ ತರನ್ನು ಗೆಲ್ಲಿಸಿದರೆ ಗ್ರಾಪಂಗೆ ಹೆಚ್ಚಿನ ಕೊಡುಗೆ ನೀಡಲಿದ್ದೇವೆ. ಪಕ್ಷದ ಕಾರ್ಯಕರ್ತರು ಮನೆಮನೆಗೂ ಹೋಗಿ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ, ಶಾಸಕರಾದ ಅನಿಲ್ ಚಿಕ್ಕಮಾದು, ಆರ್.ಧರ್ಮಸೇನಾ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‍ಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಡಿ.ರವಿಶಂಕರ್, ಸಿತಾ ರಾಮು ಇನ್ನಿತರರು ಉಪಸ್ಥಿತರಿದ್ದರು.

Translate »