ಮೈಸೂರು ಮಹಾ ನಗರ ಪಾಲಿಕೆಯಲ್ಲಿ 878 ಕೋಟಿ ಗಾತ್ರದ ಆಯವ್ಯಯ ಮಂಡನೆ
ಮೈಸೂರು

ಮೈಸೂರು ಮಹಾ ನಗರ ಪಾಲಿಕೆಯಲ್ಲಿ 878 ಕೋಟಿ ಗಾತ್ರದ ಆಯವ್ಯಯ ಮಂಡನೆ

May 19, 2020

ಮೈಸೂರು, ಮೇ 18(ಆರ್‍ಕೆಬಿ)-ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ, ಎರಡು ಕಡೆ ಮಲ್ಟಿಲೆವೆಲ್ ಪಾರ್ಕಿಂಗ್ ಯೋಜನೆ, ದೇವ ರಾಜ ಅರಸು ರಸ್ತೆ ಅಭಿವೃದ್ಧಿ, ಪ್ರಮುಖ ವೃತ್ತಗಳ ಅಭಿ ವೃದ್ಧಿ ಹಾಗೂ ಸೌಂದರ್ಯೀಕರಣ, ಸೀವೆಜ್ ಫಾರಂ ಅನ್ನು ಉದ್ಯಾ ನವನವನ್ನಾಗಿ ಮಾರ್ಪಡಿಸುವುದು ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಒಳಗೊಂಡ 87,879.99 ಲಕ್ಷ ರೂ.ಗಳ 2020ರ ಆಯವ್ಯಯಕ್ಕೆ ಸೋಮವಾರ ಮೈಸೂರು ಮಹಾನಗರ ಪಾಲಿಕೆ ಸಭೆಯಲ್ಲಿ ಅನುಮೋದನೆ ದೊರೆಯಿತು.

ಮೇಯರ್ ತಸ್ನೀಂ ಅಧ್ಯಕ್ಷತೆಯಲ್ಲಿ ಉಪ ಮೇಯರ್ ಸಿ.ಶ್ರೀಧರ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಸಮ್ಮುಖದಲ್ಲಿ ಬಜೆಟ್ ಸಭೆ ನಡೆಯಿತು. ಇದರಲ್ಲಿ 26,008.72 ಲಕ್ಷ ರೂ. ಪ್ರಾರಂಭ ಶಿಲ್ಕು, 61,871. 27 ಲಕ್ಷ ರೂ. ಜಮೆ ಸೇರಿ ಒಟ್ಟು 87,879.99 ರೂ. ಗಳ ಬಜೆಟ್ ಅನ್ನು ತೆರಿಗೆ ನಿರ್ಧರಣಾ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ ಮಂಡಿಸಿದರು.

ತಮ್ಮ 45 ನಿಮಿಷಗಳ ಬಜೆಟ್ ಭಾಷಣದಸಲ್ಲಿ ನಿರ್ಮಲಾ, ಒಟ್ಟು 87,879.99 ಲಕ್ಷ ರೂ.ಗಳಲ್ಲಿ 87, 143.34 ಲಕ್ಷ ರೂ. ಪಾವತಿ ಕಳೆದು ಅಖೈರು ಶಿಲ್ಕು 736.65 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

ಪಾಲಿಕೆಯ ಬೊಕ್ಕಸ ತುಂಬಿಸಲು ವಿನೂತನ ಪ್ರಯತ್ನ ನಡೆಸಲಾಗಿದೆ. ಪಾಲಿಕೆಯ ಆದಾಯವನ್ನು ಕ್ರೋಢೀಕರಿಸಲು ಅನೇಕ ಹೊಸ ಅಂಶಗಳನ್ನು ಪ್ರಸ್ತಾ ಪಿಸಿದ್ದಾರೆ. ವಿವಿಧ ಮೂಲಗಳಿಂದ ಸಂಪನ್ಮೂಲ ನಿರೀಕ್ಷಿಸಲಾಗಿದ್ದು, ಈ ಪೈಕಿ ಬಹು ಮುಖ್ಯವಾಗಿ ತೆರಿಗೆ ದರ ಪರಿಷ್ಕರಣೆ ಮಾಡುವ ಹಾಗೂ ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸುವ ಉದ್ದೇಶ ಹೊಂದ ಲಾಗಿದೆ. ಈ ಮೂಲಕ 15,779 ಲಕ್ಷ ರೂ. ನಿರೀ ಕ್ಷಿಸಲಾಗಿದೆ. ಉದ್ದಿಮೆ ಪರವಾನಗಿಯಿಂದ 800 ಲಕ್ಷ ಆದಾಯ ನಿರೀಕ್ಷೆ, ಪಾಲಿಕೆ ಆಸ್ತಿಗಳಿಂದ 2.93 ಕೋಟಿ ಬಾಡಿಗೆ ನಿರೀಕ್ಷಿಸಲಾಗಿದೆ.

ಆನ್‍ಲೈನ್ ಆಸ್ತಿ ತೆರಿಗೆ ಪಾವತಿ: ಆಸ್ತಿ ತೆರಿಗೆಯ ಲೆಕ್ಕಾಚಾರ ಹಾಗೂ ಡಿಸಿಬಿ ನಿರ್ವಹಣೆಯಲ್ಲಿನ ಲೋಪದೋಷಗಳನ್ನು ತಡೆಗಟ್ಟಿ ಪ್ರಸ್ತುತ ವ್ಯವಸ್ಥೆಯಲ್ಲಿ ಆಸ್ತಿ ತೆರಿಗೆ ಪಾವತಿಸಲು ನಾಗರಿಕರಿಗೆ ಉಂಟಾಗು ತ್ತಿದ್ದ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ 2020-21ನೇ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯ ಬರುವ ಎಲ್ಲಾ ಆಸ್ತಿಗಳ ವಿವರಗಳನ್ನು
ಗಣಕೀಕರಣಗೊಳಿಸಲಾಗುತ್ತಿದೆ. ಇನ್ನು ಮುಂದೆ ಆಸ್ತಿ ತೆರಿಗೆ ಹಾಗೂ ಇನ್ನಿತರೆ ಶುಲ್ಕಗಳನ್ನು ಆನ್‍ಲೈನ್ ಮೂಲಕ ಅಥವಾ ಇಡಿಸಿ ಯಂತ್ರದ ಮೂಲಕ ನಾಗರಿಕರು ಪಾಲಿಕೆಯ ಸೇವಾ ಕೇಂದ್ರಗಳಲ್ಲಿ ಪಾವತಿಸುವ ವ್ಯವಸ್ಥೆ ಹಾಗೂ ಡಿಸಿಬಿಯನ್ನು ತಕ್ಷಣ (ಪಾವತಿಸಿದ ಸಂದರ್ಭದಲ್ಲಿಯೇ) ಕಾಲೋಚಿತಗೊಳ್ಳುವ ವ್ಯವಸ್ಥೆಯನ್ನು ಆಟೋಮೆಟಿಕ್ ಅಪ್‍ಡೇಟಿಂಗ್ ಜಾರಿಗೊಳಿಸಲಾಗುತ್ತಿದೆ.

ಈ ವ್ಯವಸ್ಥೆಯಿಂದ ಪಾಲಿಕೆಗೆ ಹೆಚ್ಚಿನ ಆದಾಯ ಸಂಗ್ರಹವಾಗುವ ಜೊತೆಗೆ ನಗರದ ನಾಗರಿಕರಿಗೂ ಹೆಚ್ಚು ಅನುಕೂಲವಾಗಲಿದೆ ಎಂಬ ಅಂಶವನ್ನು ಸಭೆಯ ಗಮನಕ್ಕೆ ತಂದರು. ಪ್ರಾರಂಭಿಕವಾಗಿ ತಂತ್ರಾಂಶದಲ್ಲಿ ಉಂಟಾಗಬಹುದಾದ ಅಡೆ-ತಡೆಗಳ ನಿವಾರಣೆ ಮಾಡುವ ತನಕ ಆಫ್‍ಲೈನ್ ಮೂಲಕವೂ ಸಹ ಆಸ್ತಿ ತೆರಿಗೆ ಹಾಗೂ ಇನ್ನಿತರೆ ಶುಲ್ಕಗಳನ್ನು ಸಂಗ್ರಹಿಸಲು ಬ್ಯಾಂಕ್‍ಗಳೊಡನೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಆನ್‍ಲೈನ್‍ನಲ್ಲಿ ವಾಟರ್ ಪ್ರೊರೇಟ ಮತ್ತು ಯುಜಿಡಿ ಪ್ರೋರೇಟ ಶುಲ್ಕವನ್ನು ಜಮೆ ಮಾಡÀಲು ಸಾರ್ವಜನಿಕರಿಗೆ ಈ ಸಾಲಿನಿಂದ ಕಡ್ಡಾಯಗೊಳಿಸಲಾಗಿದೆ. ಪ್ರೋರೇಟಾ ಶುಲ್ಕವನ್ನು ಒಂದು ಚದರ ಮೀಟರ್ ಕಟ್ಟಿರುವ ಕಟ್ಟಡದ ವಿಸ್ತೀರ್ಣದ ಅನುಸಾರÀ ಲೆಕ್ಕಾಚಾರ ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಆನ್‍ಲೈನ್ ಮುಖಾಂತರ ದಾಖಲಿಸಲು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದು.

ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ನಿರೀಕ್ಷೆ: ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ನಿರೀಕ್ಷಿಸಲಾಗಿದ್ದು, ಸಂಸದ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಮುಖ್ಯಮಂತ್ರಿಗಳ ಎಸ್‍ಎಫ್‍ಸಿ ಅನುದಾನ, ದಸರಾ ವಿಶೇಷ ಅನುದಾನ, ಪೌರ ಕಾರ್ಮಿಕರ ಗೃಹಭಾಗ್ಯ ಅನುದಾನಗಳನ್ನು ನಿರೀಕ್ಷಿಸಲಾಗಿದೆ.

ಫೋಟೋ ಬಿಲ್ಲಿಂಗ್ ಯೋಜನೆ ಪೂರ್ಣಗೊಳಿಸುವ ವ್ಯವಸ್ಥೆ: ವಾಣಿವಿಲಾಸ ನೀರು ಸರಬರಾಜು ವಿಭಾಗದಿಂದ ಮೈಸೂರು ಹಾಗೂ ಹೊರವಲಯದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರಸ್ತುತ ಸಾಮಾನ್ಯ ರೀತಿಯ ಬಿಲ್ಲಿಂಗ್ ಮಾಡಲಾಗುತ್ತಿದೆ. ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದ ಬಗ್ಗೆ ಮೀಟರ್ ರೀಡರ್ ಸಮರ್ಪಕ ಕಾರ್ಯ ನಿರ್ವಹಣೆ ಹಾಗೂ ಗ್ರಾಹಕರಿಗೆ ಪಾರದರ್ಶಕ ಬಿಲ್ ವಿತರಿಸುವ ದೃಷ್ಟಿಯಿಂದ ಫೋಟೋ ಬಿಲ್ಲಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ಸಾಲಿನಲ್ಲಿ ಅದನ್ನು ಪೂರ್ಣಗೊಳಿಸಲಾಗುವುದು. ಇದರಿಂದ ನೀರು ಸರಬರಾಜು ಪ್ರಮಾಣದ ಬಿಲ್ಲಿಂಗ್ ನೀಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜೊತೆಗೆ ರೀಡಿಂಗ್ ಬಗೆಗಿನ ನ್ಯೂನತೆ ಕಡಿಮೆ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬಹುದಾಗಿದೆ ಎಂದರು.

ಪ್ರಮುಖ ವೃತ್ತಗಳ ಅಭಿವೃದ್ಧಿ: ನಗರದ ಸೌಂದರ್ಯ ಹೆಚ್ಚಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಪ್ರಮುಖ ವೃತ್ತ ಹಾಗೂ ರಸ್ತೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು 800 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಪಿಂಕ್ ಶೌಚಾಲಯಗಳ ನಿರ್ಮಾಣ: ಹೆಚ್ಚು ಜನಸಂದಣಿಇರುವ ಆಯ್ದ ಸ್ಥಳಗಳಲ್ಲಿ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ವಿದ್ಯಾಬ್ಯಾಸಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೈಸೂರು ಅರಸರಿಂದ ನಿರ್ಮಿತ ಮಹಾರಾಣಿ ಮಹಿಳಾ ಕಾಲೇಜಿನಲ್ಲ ಪಿಂಕ್ ಶೌಚಾಲಯಗಳ ನಿರ್ಮಾಣಕ್ಕೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಕಾಯ್ದಿರಿಸಿದ 50 ಲಕ್ಷ ರೂ.ಗಳಲ್ಲಿ 25 ಲಕ್ಷ ವಿನಿಯೋಗಿಸಲು ನಿರ್ಧರಿಸಲಾಗಿದೆ.

ಮಲೀನ ನೀರು ಶುದ್ಧೀಕರಣಕ್ಕೆ ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆ: ನಗರದಲ್ಲಿ ಪ್ರಸ್ತುತ ಇರುವ ಮಲೀನ ನೀರು ಶುದ್ಧೀಕರಣ ಘಟಕಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ ಮಲೀನ ನೀರನ್ನು ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ನೂ ಹೆಚ್ಚಿನ ಎಸ್‍ಟಿಪಿಗಳ ಅವಶ್ಯಕತೆ ಇದೆ. ಈ ಸಾಲಿನಲ್ಲಿ 400 ಲಕ್ಷ ರೂ. ವೆಚ್ಚದಲ್ಲಿ ದೇವನೂರು ಕೆರೆಯಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಿಂದ ಪರಿಸರ ಸ್ನೇಹಿ ತಂತ್ರಜ್ಞಾನದ ಮೂಲಕ ಮಲೀನ ನೀರು ಶುದ್ಧೀಕರಣಗೊಳಿಸಲು ನಿರ್ಧರಿಸಲಾಗಿದೆ.

ಜನೌಷಧಿ ಕೇಂದ್ರಗಳ ಮೂಲಕ ಉಚಿತ ಔಷಧಿ: ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಾಗರಿಕರು, ತಜ್ಞ ವೈದ್ಯರ ಶಿಫಾರಸಿನ ಮೇಲೆ ಪ್ರಧಾನಮಂತ್ರಿಗಳ ಜನೌಷಧಿ ಕೇಂದ್ರಗಳಲ್ಲಿ ಖರೀದಿಸುವ ಔಷಧಿಗಳಿಗೆ ಪಾಲಿಕೆಯಿಂದ ಸಹಾಯಧನ ನೀಡಲಾಗುತ್ತದೆ.

ಪಾರಂಪರಿಕ ಮಾದರಿ ವಿದ್ಯುತ್ ದೀಪಗಳ ಅಳವಡಿಕೆ: ವಿಶ್ವವಿಖ್ಯಾತ ದಸರಾ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಪಾರಂಪರಿಕ ಮಾದರಿಯ ವಿದ್ಯುತ್ ದೀಪಗಳನ್ನು ಅಳವಡಿಸುವ ಮೂಲಕ ನಗರದ ಸೌಂದರ್ಯ ವೃದ್ಧಿ ಹಾಗೂ ಪ್ರವಾಸಿಗರ ಆಕರ್ಷಣೆಗೆ ಕ್ರಮ ವಹಿಸಲು 300 ಲಕ್ಷ ಕಾಯ್ದಿರಿಸಲಾಗಿದೆ.

ಮಳೆ ನೀರು ಕೊಯ್ಲು ಯೋಜನೆ: ಈಗಾಗಲೇ ಈ ಯೋಜನೆ ಕಡ್ಡಾಯವಾಗಿದ್ದು, ಪಾಲಿಕೆಯಿಂದ ಕೊರೆಸಿರುವ ಕೊಳವೆ ಬಾವಿಗಳ ಸುತ್ತ ಇಂಗುಗುಂಡಿಗಳನ್ನು ತೆಗೆದು ಮಳೆ ನೀರು ಕೊಯ್ಲು ಅಳವಡಿಸಿ, ಅಂತರ್ಜಲ ವೃದ್ದಿ ದೃಷ್ಟಿಯಿಂದ ಇದಕ್ಕಾಗಿ 50 ಲಕ್ಷ ರೂ. ತೆಗೆದಿರಿಸಲಾಗಿದೆ. ನಾಗರಿಕರಿಗೆ ಶುದ್ಧ, ಸಂಸ್ಕರಿತ ಹಾಗೂ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಲು ವಿವಿಧ ನದಿ ಮೂಲಗಳಿಂದ ಲಭ್ಯವಾಗುವ ನೀರಿನ ವ್ಯವಸ್ಥಿತ ನಿರ್ವಹಣೆ ಹಾಗೂ ಹಂಚಿಕೆಗಾಗಿ ಟ್ಯಾಂಕುಗಳನ್ನು ನಿರ್ಮಿಸಲು 200 ಲಕ್ಷ ರೂ. ಮೀಸಲಿರಿಸಲಾಗಿದೆ.

ವಾಟರ್ ಪಾರ್ಕ್ ಅಭಿವೃದ್ಧಿ: ವಾಣಿವಿಲಾಸ ನೀರು ಸರಬರಾಜು ಘಟಕದಲ್ಲಿ ಆಕರ್ಷಣೀಯ ಹಾಗೂ ಆಧುನಿಕ ರೀತಿಯಲ್ಲಿ ವಾಟರ್ ಪಾರ್ಕ್ ನಿರ್ಮಿಸಲು 200 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಸ್ಮಶಾನಗಳ ಅಭಿವೃದ್ದಿ: ಈ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯ ಸ್ಮಶಾನಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 300 ಲಕ್ಷ ರೂ. ಕಾಯ್ದಿರಿಸಿದ್ದು, ಕುಂಬಾರಕೊಪ್ಪಲು ಸ್ಮಶಾನಕ್ಕೆ ವಿದ್ಯುತ್ ಚಿತಾಗಾರ ಯಂತ್ರ ಅಳವಡಿಸಿಕೊಳ್ಳುವ ಅಗತ್ಯವಿರುವ ಅನುದಾನವನ್ನು ಈ ಮೊತ್ತದಲ್ಲಿ ಭರಿಸಲು ಉದ್ದೇಶಿಸಲಾಗಿದೆ.

ಜ್ಞಾನಸಿರಿ ಯೋಜನೆ ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಶೇ.95ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಮೈಸೂರಿನ ಪ್ರತಿ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲು 5 ಲಕ್ಷ ರೂ. ಇಡಲಾಗಿದೆ.

ಬಳಸಿದ ಅಡುಗೆ ಎಣ್ಣೆಯಿಂದ ಬಯೋ ಡೀಸೆಲ್ ತಯಾರಿಕೆ: ಎನ್‍ಐಇ ಸಂಸ್ಥೆಯ ಮಾರ್ಗದರ್ಶನ ಮತ್ತು ಸಹಭಾಗಿತ್ವದಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ ಬಯೋ ಡೀಸೆಲ್ ತಯಾರಿಕೆ ಯೋಜನೆ ಹಮ್ಮಿಕೊಳ್ಳಲಿದ್ದು, ಇದರಿಂದ ಉತ್ಪತ್ತಿಯಾಗುವ ಡೀಸಲ್ ಮಾರಾಟದಿಂದ ಪಾಲಿಕೆ ಆದಾಯ ಗಳಿಸಬಹುದು. ಉತ್ಪತ್ತಿಯಾಗುವ ಡೀಸೆಲ್ ಅನ್ನು ತನ್ನವಾಹನಗಳಿಗೆ ಬಳಸುವುದರಿಂದ ಪಾಲಿಕೆಯು ಪ್ರತಿ ವರ್ಷ ತನ್ನ ವಾಹನಗಳ ಇಂಧನ ವೆಚ್ಚಕ್ಕಾಗಿ 300 ಲಕ್ಷ ರೂ. ಹೆಚ್ಚಿನ ಹಣ ಉಳಿತಾಯವಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ: ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ವೈ-ಫೈ ಸೇವೆ ಪ್ರಾರಂಭಿಸಲು ಪ್ರಾರಂಭಿಕ ಹಂತದಲ್ಲಿ 2 ಲಕ್ಷ ಕಾಯ್ದಿರಿಸಲಾಗಿದೆ. ಇದರಿಂದ ಇಂಟರ್‍ನೆಟ್ ಸೌಲಭ್ಯ ಪಡೆಯಲು ಸಾಧ್ಯವಾಗದ ಆರ್ಥಿಕ ದುರ್ಬಲ ವರ್ಗಗಳ ನಾಗರಿಕರು, ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಲು ಸಹಾಯವಾಗುತ್ತದೆ.

ಮೈಸೂರು ಯೋಗಲಕ್ಷಿ ಯೋಜನೆ: ನಗರಪಾಲಿಕೆ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿನ ನಿವಾಸಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಬಾಂಡ್ ರೂಪದಲ್ಲಿ ಠೇವಣಿ ಇಡಲು ಯೋಜಿಸಲಾಗಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ 2019-20ನೇ ಸಾಲಿನ ಬಜೆಟ್‍ನಲ್ಲಿ 250 ಲಕ್ಷ ಇಡಲಾಗಿತ್ತು. ಇದರಲ್ಲಿ 15 ಲಕ್ಷ ರೂ.ಗಳನ್ನು ಭಾರತೀಯ ಜೀವವಿಮಾ ನಿಗಮದಲ್ಲಿ ತೊಡಗಿಸಿದ್ದು, ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ 49 ಫಲಾನುಭವಿಗಳಿಗೆ ಈಗಾಗಲೇ ಸೌಲಭ್ಯ ನೀಡಲಾಗಿದೆ. ಈ ಸಾಲಿನಲ್ಲಿಯೂ ಯೋಜನೆ ಮುಂದುವರಿಸಲು 250 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣ ಕಾರ್ಯಕ್ರಮ: ಪಾಲಿಕೆಯ ಸ್ವಂತ ಆದಾಯ, ನಿರೀಕ್ಷಿತ ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿ ಅನುದಾನವು ಸೇರಿದಂತೆ 2253 ಲಕ್ಷ ರೂ.ಗಳನ್ನು ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ, ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರುವ ನಗರದ ಯುವಕ-ಯುವತಿಯರಿಗೆ ನಿಯಮಾನುಸಾರ ಸಹಾಯ ಧನ, ಪಕ್ಕಾಮನೆ ನಿರ್ಮಾಣಕ್ಕೆ ಸಹಾಯ ಧನ, ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವ್ಯಾಸಂಗ ಪ್ರೋತ್ಸಾಹ ಧನ, ಕ್ರೀಡಾ ಪ್ರೋತ್ಸಾಹ ಧನ, ವೈದ್ಯಕೀಯ ಸಹಾಯ ಧನ, ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿರುವ ಎಲ್ಲಾ ರೀತಿಯ ಸಹಾಯ ಧನ ಹಾಗೂ ವೈಯಕ್ತಿಕ ಸೌ¯ಭ್ಯ ನೀಡಲು ಕ್ರಮ ವಹಿಸಲಾಗುವುದು.

ಹಿಂದುಳಿದ ಬಡಜನರ ಕಲ್ಯಾಣ ಕಾರ್ಯಕ್ರಮ: ಆರ್ಥಿಕವಾಗಿ ಹಿಂದುಳಿದ ಬಡಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಅನುಷ್ಟಾನಗೊಳಿಸಲಾಗುವ ವೈಯಕ್ತಿಕ ಹಾಗೂ ಸಮುದಾಯ ಕಾರ್ಯಕ್ರಮಗಳಿಗೆ ಪಾಲಿಕೆ ಅನುದಾನ ಮತ್ತು ನಿರೀಕ್ಷಿತ ಎಸ್‍ಎಫ್‍ಸಿ ಅನುದಾನದಿಂದ 496.53 ಲಕ್ಷ ರೂ. ಕಾಯ್ದಿರಿಸಲಾಗಿದೆ.

ವಿಕಲಚೇತನರ ಕಲ್ಯಾಣ ಕಾರ್ಯಕ್ರಮ: ವಿಶೇóಷ ಚೇತನರ ಕ್ಷೇಮಾಭಿವೃದ್ಧಿಗಾಗಿ ಆಯವ್ಯಯದಲ್ಲಿ 343.44 ಲಕ್ಷ ರೂ. ಕಾಯ್ದಿರಿಸಲಾಗಿದೆ. ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ನೀಡುವ ಪ್ರಸ್ತುತ ಸಾಲಿನಲ್ಲಿ ಪೆಟ್ರೋಲ್ ಚಾಲಿತ ತ್ರಿಚಕ್ರ ವಾಹನಕ್ಕೆ ಬದಲಾಗಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಕ್ರಿಯಾಯೋಜನೆ ತಯಾರಿಸುವ ಸಂದರ್ಭದಲ್ಲಿ ಅನುದಾನ ಕಾಯ್ದಿರಿಸಲಾಗುವುದು.

ಬಜೆಟ್ ಕುರಿತು ಕೆಲ ಸದಸ್ಯರ ಅಭಿಪ್ರಾಯ
* ಸಣ್ಣಪುಟ್ಟ ಲೋಪದೋಷ ಹೊರತುಪಡಿಸಿದರೆ ಉತ್ತಮ ಬಜೆಟ್. ಉಪಯೋಗವಾಗುವ ಬಹಳ ಕಾರ್ಯಕ್ರಮ ನೀಡಿದ್ದೀರಿ. ಎರಡು ಕಡೆ ಮಲ್ಟಿಲೆವೆಲ್ ಪಾರ್ಕಿಂಗ್ ಸ್ವಾಗತಾರ್ಹ. ಹಾಗೆಯೇ ದೇವರಾಜ ಅರಸು ರಸ್ತೆಯ ಆಜುಬಾಜು ಮಲ್ಟಿಲೆವೆಲ್ ಪಾರ್ಕಿಂಗ್ ಅವಶ್ಯವಿದೆ. ಗಮನಿಸಿ, ಮಳೆ ನೀರು ಕೊಯ್ಲು ಯೋಜನೆ ಗಂಭೀರವಾಗಿ ಪರಿಗಣಿಸಿ, – ಸುಬ್ಬಯ್ಯ, ವಿಪಕ್ಷ ನಾಯಕ

*  ಬಡಬಡ ಎಂದ ಬಜೆಟ್. ಬುಡುಬುಡುಕೆಯಾಗದಿರಲಿ.. ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿ. ಸೀವೆಜ್ ಫಾರಂನಲ್ಲಿ ಉದ್ಯಾನವನದ ಜೊತೆಗೆ ಗೋಮಾಳ ರೀತಿ ಮಾಡಿ ಹಸು ಮೇಯಿಸುವವರಿಗೆ ಅನುಕೂಲ ಕಲ್ಪಿಸಿಕೊಡಿ. – ಮಾ.ವಿ.ರಾಮಪ್ರಸಾದ್

* ಪ್ರತೀ ವರ್ಷ ಬಜೆಟ್ ಕಾರ್ಯಗತವಾಗುವುದನ್ನು ಕಂಡಿಲ್ಲ. ಬರೀ ಚಪ್ಪಾಳೆ ಹೊಡೆದರೆ ಸಾಲದು. ಯೋಜನೆಗಳು ಜನರಿಗೆ ತಲುಪಬೇಕು. ನನ್ನ ಕ್ಷೇತ್ರದಲ್ಲಿ ಒಂದು ಉದ್ಯಾನವನಗಳಿಲ್ಲ. – ಸುನಂದಾ ಪಾಲನೇತ್ರ

* ಹುತಾತ್ಮ ಸೈನಿಕರಿಗೆ ಒಂದು ಲಕ್ಷ ನೀಡುವುದು ಅವಮಾನ. ಕನಿಷ್ಟ 5 ಲಕ್ಷ ರೂ.ಗಳನ್ನಾದರೂ ನೀಡುವುದು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. – ಶಿವಕುಮಾರ್

Translate »