ನಾಳೆಯಿಂದ ಪಾರ್ಸಲ್ ಬಂದ್ ಹೋಟೆಲ್ ಮಾಲೀಕರ ನಿರ್ಧಾರ
ಮೈಸೂರು

ನಾಳೆಯಿಂದ ಪಾರ್ಸಲ್ ಬಂದ್ ಹೋಟೆಲ್ ಮಾಲೀಕರ ನಿರ್ಧಾರ

May 19, 2020

ಬೆಂಗಳೂರು, ಮೇ 18- ಹೋಟೆಲ್‍ಗಳಲ್ಲಿ ಮೇ 20ರಿಂದ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಘೋಷಿಸಿದ್ದಾರೆ. ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಾದ್ಯಂತ ಲಾಕ್‍ಡೌನ್ ಸಡಿಲಗೊಳಿಸಿ ಎಲ್ಲಾ ವ್ಯವಹಾರ ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ, ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಿರುವುದರಿಂದ ಹೋಟೆಲ್ ಮಾಲೀಕರು ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದರು.ಪಾರ್ಸಲ್ ಆರ್ಡರ್‍ಗಳು ಹೆಚ್ಚೇನು ಬರುತ್ತಿಲ್ಲ.

ಆದರೂ ನಾವು ಹೋಟೆಲ್‍ನ ಬಾಡಿಗೆ ಮತ್ತು ತೆರಿಗೆ ಪಾವತಿಸಲೇಬೇಕಾಗಿದೆ. ಜೊತೆಗೆ ಕಾರ್ಮಿಕರಿಗೆ ವೇತನದ ಜೊತೆ ಊಟ, ತಿಂಡಿ ನೀಡಬೇಕಾಗಿದೆ. ಕೇವಲ ಪಾರ್ಸಲ್ ಸೇವೆ ಮಾತ್ರ ಇದ್ದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ 5000ಕ್ಕೂ ಹೆಚ್ಚು ಹೋಟೆಲ್‍ಗಳಿದ್ದು, ಕಳೆದ 2 ತಿಂಗಳಿಂದ ಹೋಟೆಲ್ ಉದ್ಯಮಿಗಳು ನಷ್ಟ ಅನುಭವಿಸು ತ್ತಿದ್ದರೂ ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸಹಾಯವೂ ದೊರೆಯಲಿಲ್ಲ. ಆದ್ದರಿಂದ ಪಾರ್ಸಲ್ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಹೋಟೆಲ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡುತ್ತೇವೆ, ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಸೇವೆ ನೀಡುತ್ತೇವೆ ಎಂದು ಸರ್ಕಾರಕ್ಕೆ ಹೇಳಿದ್ದರೂ ಕೂಡ ಹೋಟೆಲ್‍ಗಳಲ್ಲಿ ಊಟ-ತಿಂಡಿ ನೀಡಲು ಅವಕಾಶ ಕೊಟ್ಟಿಲ್ಲ. ಪಾರ್ಸಲ್ ಸೇವೆಯಿಂದ ಕೇವಲ ಶೇ. 10ರಷ್ಟು ಮಾತ್ರ ವ್ಯಾಪಾರವಾಗುತ್ತಿದ್ದು, ಕಾರ್ಮಿಕರಿಗೆ ವೇತನ, ಕಟ್ಟಡ ಬಾಡಿಗೆ ಹಾಗೂ ತೆರಿಗೆ ಕಟ್ಟಲು ಕೂಡ ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್ ನಡೆಸುವ ಬದಲು ಅಂಗಡಿ ಮುಂದೆ ಗಾಡಿ ಇಟ್ಟು ವ್ಯಾಪಾರ ಮಾಡುವುದೇ ನಮಗೆ ಉಳಿದಿರುವ ಮಾರ್ಗವಾಗಿ ಪರಿಣಮಿಸಿದೆ. ಆದ್ದರಿಂದ ಮೈಸೂರಿನಲ್ಲಿರುವ ಬೇಕರಿಗಳೂ ಸೇರಿದಂತೆ 1300 ಹೋಟೆಲ್‍ಗಳಲ್ಲಿ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

Translate »