ಮುಂಬೈ ನಂಟು: ಒಂದೇ ದಿನ ರಾಜ್ಯದಲ್ಲಿ 99 ಸೋಂಕಿತರು
ಮೈಸೂರು

ಮುಂಬೈ ನಂಟು: ಒಂದೇ ದಿನ ರಾಜ್ಯದಲ್ಲಿ 99 ಸೋಂಕಿತರು

May 19, 2020

ಬೆಂಗಳೂರು, ಮೇ 18- ಮುಂಬೈನಿಂದ ತವರಿಗೆ ಹಿಂದಿರುಗಿ ದವರಿಂದ ರಾಜ್ಯ ತತ್ತರಿಸಿದೆ. ಸೋಮವಾರದಂದು ರಾಜ್ಯದಲ್ಲಿ 99 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1246ಕ್ಕೆ ಏರಿದೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ ಮುಂಬೈನಿಂದ ತವರಿಗೆ ಹಿಂತಿರುಗಿದವರ ಸಂಖ್ಯೆಯೇ ಹೆಚ್ಚಾಗಿದ್ದು, ಕಳೆದ 20 ದಿನಗಳಿಂದ ಸೋಂಕು ಪತ್ತೆಯಾಗದೇ ಇದ್ದ ಮೈಸೂರು ಮತ್ತು ಕಳೆದ 60 ದಿನಗಳಿಂದಲೂ ಯಾವುದೇ ಸೋಂಕು ಇಲ್ಲದಿದ್ದ ಕೊಡಗು ಜಿಲ್ಲೆಗೆ ಇಂದು ಮತ್ತೇ ಕೊರೊನಾ ಮುಂಬೈ ಮೂಲದಿಂದ ವಕ್ಕರಿಸಿದೆ. ಮುಂಬೈನಿಂದ ಕೆ.ಆರ್.ನಗರ ತಾಲೂಕು ಸಾಲಿಗ್ರಾಮಕ್ಕೆ ಬಂದಿದ್ದ 46 ವರ್ಷದ ವ್ಯಕ್ತಿಗೆ ಇಂದು ಸೋಂಕು ಪತ್ತೆಯಾಗಿದ್ದು, ಈತನನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಕೊರೊನಾ ಸೋಂಕಿತರಿಂದ ಮುಕ್ತವಾಗಿದ್ದ ಸಾಂಸ್ಕøತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮತ್ತೇ ಕೊರೊನಾ ಖಾತೆ ತೆರೆದಂತಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 91 ಮಂದಿಗೆ ಸೋಂಕು ಪತ್ತೆಯಾಗಿದ್ದು, 90 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಇಂದು ಸೋಂಕು ಪತ್ತೆಯಾದ ವ್ಯಕ್ತಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಡಗಿನಲ್ಲಿ ದುಬೈನಿಂದ ಬಂದಿದ್ದ ವ್ಯಕ್ತಿಗೆ ಈ ಹಿಂದೆ ಸೋಂಕು ಪತ್ತೆಯಾಗಿ ಈ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದರು. ಮೇ 14ರಂದು ಮುಂಬೈನಿಂದ ಬೆಂಗಳೂರು ಮೂಲಕ ಕೊಡಗಿಗೆ ಬರುತ್ತಿದ್ದ 45 ವರ್ಷದ ಮಹಿಳೆ ಸಂಪಾಜೆ ಚೆಕ್‍ಪೋಸ್ಟ್‍ಗೆ ಬಂದಾಗ ಆಕೆಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಆಕೆಗೆ ಸೋಮವಾರ ಸೋಂಕು ಪತ್ತೆಯಾಗಿದ್ದು, ಕಳೆದ 60 ದಿನದಿಂದ ಕೊರೊನಾ ಮುಕ್ತವಾಗಿದ್ದ ಕೊಡಗಲ್ಲಿ ಮತ್ತೆ

ಕೊರೊನಾ ಖಾತೆ ತೆರೆದಂತಾಗಿದೆ. ಮಂಡ್ಯ ಜಿಲ್ಲೆಗೆ ಮುಂಬೈ ನಂಟು ಬಿಟ್ಟು ಬಿಡದಂತೆ ಕಾಡುತ್ತಿದೆ. ಭಾನುವಾರ 22 ಮಂದಿಗೆ ಸೋಂಕು ಪತ್ತೆಯಾಗಿದ್ದರೆ, ಸೋಮವಾರ ಮತ್ತೆ 17 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮುಂಬೈನಿಂದ ತವರಿಗೆ ಮರಳಿದವರು.

ಇಂದು ಪತ್ತೆಯಾದ ಸೋಂಕಿತರಲ್ಲಿ 13 ಮಂದಿ ಕೆ.ಆರ್.ಪೇಟೆಯವರಾದರೆ, ಉಳಿದ ನಾಲ್ವರು ಮಂಡ್ಯ ತಾಲೂಕು ಕಿಲಾರ ಗ್ರಾಮದವರು. ಈ ನಾಲ್ವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 89ಕ್ಕೇರಿದರೆ, ಇವರಲ್ಲಿ ಕೆ.ಆರ್.ಪೇಟೆಯವರೇ 56 ಮಂದಿ ಇದ್ದಾರೆ. ಇಂದು ಮಂಡ್ಯದಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 60 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 21 ಮಂದಿ ಗುಣಮುಖರಾಗಿದ್ದಾರೆ. ಹಾಸನದಲ್ಲಿ ಇಂದು ಇಬ್ಬರು ಮಹಿಳೆಯರು ಸೇರಿ ನಾಲ್ವರಿಗೆ ಸೋಂಕು ಪತ್ತೆಯಾಗಿದ್ದು, ಇವರೆಲ್ಲಾ ಮುಂಬೈನಿಂದ ಹಿಂದಿರುಗಿದವರು. ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 29ಕ್ಕೇರಿದೆ. ಇಂದು ಬೆಂಗಳೂರಿ ನಲ್ಲಿ 24, ಕಲಬುರಗಿಯಲ್ಲಿ 10, ಉತ್ತರ ಕನ್ನಡದಲ್ಲಿ 9, ರಾಯಚೂರು, ಯಾದಗಿರಿ ಮತ್ತು ವಿಜಯಪುರದಲ್ಲಿ ತಲಾ 5, ಕೊಪ್ಪಳದಲ್ಲಿ 3, ದಕ್ಷಿಣ ಕನ್ನಡದಲ್ಲಿ ಮತ್ತು ಬೆಳಗಾವಿಯಲ್ಲಿ ತಲಾ 2, ಬಳ್ಳಾರಿ, ಬೀದರ್, ದಾವಣಗೆರೆ, ಉಡುಪಿಯಲ್ಲಿ ತಲಾ 1 ಪ್ರಕರಣ ಸೇರಿ ರಾಜ್ಯದಲ್ಲಿ 99 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246 ಕ್ಕೇರಿದ್ದು, ಅವರಲ್ಲಿ 530 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. 37 ಮಂದಿ ಮೃತಪಟ್ಟಿದ್ದು, ಉಳಿದ 678 ಮಂದಿ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »