ಮೈಸೂರು, ಮಾ.1- ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಮೈಸೂರು -ಕುಶಾಲನಗರ ರೈಲ್ವೆ ಮಾರ್ಗ ಆರಂಭಕ್ಕೆ ಬಜೆಟ್‍ನಲ್ಲಿ ಹಣ ಬಿಡು ಗಡೆ ಮಾಡುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮೈಸೂರು ನಗರ ಅತ್ಯಂತ ವೇಗ ವಾಗಿ ಬೆಳೆಯುತ್ತಿದ್ದು, ಉಡಾನ್ ಯೋಜನೆಯ ಯಶಸ್ವಿ ಅನುಷ್ಠಾನ ದಿಂದಾಗಿ ವಿಮಾನ ಹಾರಾಟ ಹೆಚ್ಚಾ ಗಿದೆ. ಮುಂಬರುವ ದಿನಗಳಲ್ಲಿ ದೊಡ್ಡ ವಿಮಾನಗಳ ಸೇವೆಯನ್ನು ಒದಗಿ ಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಹಾಗೂ ರನ್‍ವೇ ವಿಸ್ತರಿಸಲು 240 ಎಕರೆ ಭೂಮಿ ಅಗತ್ಯವಿದೆ. ಕೆಐಎಡಿಬಿ ವತಿ ಯಿಂದ ತಕ್ಷಣಕ್ಕೆ ಅಗತ್ಯವಿರುವ 115 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ವಿಸ್ತರಣೆಗೆ ಗುರುತಿಸಲಾಗಿದೆ. ಈ ಭೂಮಿ ಸ್ವಾಧೀನಪಡಿಸಿಕೊಳ್ಳಲು ಈ ಸಾಲಿನ ಬಜೆಟ್‍ನಲ್ಲಿ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ರಾಜ್ಯದ ಅತೀ ಚಿಕ್ಕ ಜಿಲ್ಲೆಯಾದ ಕೊಡಗು ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ಏಕೈಕ ಜಿಲ್ಲೆಯಾಗಿದೆ. ಈ ಜಿಲ್ಲೆಗೆ ರೈಲ್ವೆ ಸಂಪರ್ಕ ಕ್ಕಾಗಿ ಬ್ರಿಟಿಷರ ಕಾಲದಿಂದಲೂ ಬೇಡಿಕೆ ಇದ್ದರೂ ಯಾವ ಸರ್ಕಾರವೂ ಯೋಜನೆಗೆ ಅನುಮೋದನೆ ನೀಡಿಲ್ಲ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2018- 19ನೇ ಸಾಲಿನ ಬಜೆಟ್‍ನಲ್ಲಿ 1855 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದೆ. ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಅನುದಾನ ಕೋರಿ ತಮಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ. ಮೈಸೂರು-ಕುಶಾಲನಗರ ಸಂಪರ್ಕಿಸುವ 87 ಕಿ.ಮೀ. ಉದ್ದದ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಭೂಮಿ ನೀಡುವಂತೆ ಹಾಗೂ ಸದರಿ ಕಾಮಗಾರಿ ಆರಂಭಕ್ಕೆ ಈ ಸಾಲಿನ ಬಜೆಟ್‍ನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.