ಮೈಸೂರಲ್ಲಿ ಆರ್ಥಿಕ ಗಣತಿ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಆರ್ಥಿಕ ಗಣತಿ ಪರಿಶೀಲನೆ

March 2, 2020

ಮೈಸೂರು,ಮಾ.1(ಎಂಟಿವೈ)- ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ನಡೆಸುತ್ತಿ ರುವ 7ನೇ ಆರ್ಥಿಕ ಗಣತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)ದ ರಾಜ್ಯಮಟ್ಟದ ತಂಡ ಸಂಚರಿಸಿ ವಿವಿಧೆಡೆ ಮೊಬೈಲ್ ಆ್ಯಪ್ ಮೂಲಕ ಗಣತಿ ನಡೆಸಿ ಸಂಘಟಿತ ಮತ್ತು ಅಸಂಘಟಿತ ಉದ್ದಿಮೆದಾರರಿಂದ ಮಾಹಿತಿ ಕಲೆಹಾಕಿತು.

ಕೇಂದ್ರ ಸರ್ಕಾರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ, ಕೇಂದ್ರ ಸರ್ಕಾರದ ಇ-ಆಡಳಿತ ಅಡಿಯಲ್ಲಿ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)ದ ಸಹಯೋಗದಲ್ಲಿ ಖಾಸಗಿ ಗಣತಿದಾರರನ್ನು ನಿಯೋಜಿಸಿ ಮೊಬೈಲ್ ಆಪ್ ಮೂಲಕ 7ನೇ ಆರ್ಥಿಕ ಗಣತಿಯನ್ನು 2019ರ ನವೆಂಬರ್‍ನಿಂದ ಆರಂಭಿಸಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಜ.6ರಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆರ್ಥಿಕ ಗಣತಿಗೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದರು. ಜ.22ರಂದು ಪಾಲಿಕೆ ವ್ಯಾಪ್ತಿಯಲ್ಲಿ ಗಣತಿ ನಡೆಸಲು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ(ಫೆ.29) ಸಾಮಾನ್ಯ ಸೇವಾ ಕೇಂದ್ರದ ರಾಜ್ಯ ಹಾಗೂ ಕೇಂದ್ರದ ತಂಡದ ಸದಸ್ಯರು ಮೈಸೂರಿಗೆ ಆಗಮಿಸಿ, ಜಿಲ್ಲಾ ತಂಡದ ಕಾರ್ಯ ವೈಖರಿ ಪರಿಶೀಲಿಸಿ ದ್ದಲ್ಲದೆ, ವಿವಿಧೆಡೆ ಉದ್ದಿಮೆದಾರರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದರು.

ಪ್ರತಿ 5 ವರ್ಷಕ್ಕೊಮ್ಮೆ ಆರ್ಥಿಕ ಗಣತಿ ನಡೆಸಲಾಗುತ್ತದೆ. 2014ರಲ್ಲಿ ನಡೆದ 6ನೇ ಆರ್ಥಿಕ ಗಣತಿಯಲ್ಲಿ ಜಿಲ್ಲೆಯಲ್ಲಿ 1,40, 232 ಉದ್ದಿಮೆದಾರರನ್ನು ಗಣತಿಯಲ್ಲಿ ಗುರು ತಿಸಲ್ಪಟ್ಟಿತ್ತು. ಅವರಲ್ಲಿ ಗ್ರಾಮೀಣ ಪ್ರದೇಶದಲ್ಲಿ 88062 ಉದ್ದಿಮೆದಾರರಿದ್ದರೆ, ನಗರ/ಪಟ್ಟಣಗಳಲ್ಲಿ 52,170 ಸಂಘಟಿತ ಹಾಗೂ ಅಸಂಘಟಿತ ಉದ್ದಿಮೆದಾರರು ಮಾಹಿತಿ ನೀಡಿದ್ದರು. ಈ ಬಾರಿ ಮೈಸೂರು ನಗರ ದಲ್ಲೇ 30ರಿಂದ 32 ಸಾವಿರ ಉದ್ದಿಮೆ ದಾರರು, ವ್ಯಾಪಾರಿಗಳು ಇರಬಹುದೆಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಗಣತಿ ನಡೆಸಲು 220 ಸೂಪರ್‍ವೈಸರ್, 890 ಗಣತಿದಾರರನ್ನು ನಿಯೋಜಿಸಲಾಗಿದೆ. ಅಗತ್ಯ ಸೂಚನೆ, ಸಲಹೆ ನೀಡಲು ಡಿಸಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ, ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ.

ಗಣತಿಯಲ್ಲಿ : ಪ್ಲಾಂಟೇಷನ್ ಬೆಳೆಗಳು ಸೇರಿ ಋತುಕಾಲಿಕ, ವಾರ್ಷಿಕ, ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವ, ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಇಲಾಖೆ ಆಡಳಿತ ಕಚೇರಿ, ರಕ್ಷಣಾ ಮಂತ್ರಾಲಯದ ಕಚೇರಿ ಇನ್ನಿತರ ಉದ್ದಿಮೆಗಳನ್ನು ಗಣತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಉದ್ದಿಮೆಗಳನ್ನು ಗಣತಿ ಮಾಡುವಾಗ ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಸ್ಥಳಗಳಲ್ಲಿ ಗಣತಿ ಮಾಡಲಾಗುವುದು. ರಸ್ತೆ ಬದಿ, ಬೀದಿ, ಬಯಲು ಪ್ರದೇಶಗಳಲ್ಲಿ ಯಾವುದೇ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಉದ್ದಿಮೆಯ ಮಾಲೀಕನ ಮನೆಯಲ್ಲಿಯೇ ಗಣತಿ ಮಾಡಲಾಗು ವುದು. ಗಣತಿದಾರರು ಮನೆ, ಉದ್ದಿಮೆಗಳಿಗೆ ಭೇಟ ನೀಡಿದಾಗ ಉದ್ದಿಮೆಯ ಮಾಲೀಕರು, ಸಾರ್ವಜನಿಕರು ಅಗತ್ಯವಾದ ವಿವರ ನೀಡಬೇಕು. ಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಗಳು ಮುಂದಿನ ವರ್ಷಗಳಲ್ಲಿ ಯೋಜನೆ ತಯಾರಿಸಲು ಹಾಗೂ ಹಾಲಿ ಇರುವ ಉದ್ದಿಮೆ ಗಳ ಸ್ಥಿತಿಗತಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗುತ್ತದೆ. ಉದ್ದಿಮೆಗಳಿಗೆ ಪ್ರೋತ್ಸಾಹ, ಮಾರುಕಟ್ಟೆ, ಆರ್ಥಿಕ ಸಹಾಯ ಹಾಗೂ ಮತ್ತಿತರ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗುತ್ತದೆ. ಈ ಸಂದರ್ಭದಲ್ಲಿ ಕಾಮನ್ ಸರ್ವಿಸ್ ಸೆಂಟರ್‍ನ ರಾಜ್ಯ ತಂಡದ ಮುಖ್ಯಸ್ಥರಾದ ರಾಬರ್ಟ್ ಡಿ.ನೆಲ್ಸನ್, ನೇಪಾಳ್ ಚಂದ್ರಸೇನಾ, ರಾಜ್ಯ ಪ್ರಾಯೋಗಿಕ ಮ್ಯಾನೇಜರ್ ಅನಿಲ್ ರೆಡ್ಡಿ, ಜಿಲ್ಲಾ ಮ್ಯಾನೇಜರ್ ಉಮಾಶಂಕರ್, ಜಿಲ್ಲಾ ಸೂಪರ್‍ವೈಸರ್ ಯಶೋಧಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »