ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಸ್ವಚ್ಛತಾ ಕಾರ್ಯ
ಮೈಸೂರು

ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಸ್ವಚ್ಛತಾ ಕಾರ್ಯ

March 2, 2020

ಹನೂರು, ಮಾ.1(ಎಂಟಿವೈ, ಸೋಮ)- ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಹಿನ್ನೆಲೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದ ಹಳೆ ಚಪ್ಪಲಿ ಹಾಗೂ ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ಭಾನುವಾರ 70 ಸ್ವಯಂಸೇವಕರು ಒಳಗೊಂಡಂತೆ 130ಕ್ಕೂ ಹೆಚ್ಚು ಮಂದಿ ಶ್ರಮದಾನ ಮಾಡಿ 8 ಲೋಡ್ ತ್ಯಾಜ್ಯ ಸಂಗ್ರಹಿಸುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.

ಪ್ರತಿ ವರ್ಷ ಶಿವರಾತ್ರಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದ್ದು, ಕೊಳ್ಳೇಗಾಲ, ಹನೂರು ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಿಂದ ಹಾಗೂ ವಿವಿಧ ಜಿಲ್ಲೆ, ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವುದು ವಾಡಿಕೆಯಾಗಿದೆ. ಈ ವೇಳೆ ಮಹದೇಶ್ವರ ಬೆಟ್ಟಕ್ಕೆ ಚಪ್ಪಲಿ ಹಾಕಿಕೊಂಡು ಹೋಗಬಾರದೆಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ವಿವಿಧೆಡೆಯಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರು ತಾಳುಬೆಟ್ಟದ ಮುನ್ನವೇ ತಮ್ಮ ಚಪ್ಪಲಿಗಳನ್ನು ಬಿಟ್ಟು ಹೋಗು ತ್ತಾರೆ. ಇದರೊಂದಿಗೆ ತಾವು ಹಾಕಿದ್ದ ಚಪ್ಪಲಿ ಬಿಟ್ಟು ಬಂದರೆ ಒಳಿತಾಗುತ್ತದೆ, ಸಂಕಷ್ಟ ನಿವಾರಣೆಯಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿರುವುದರಿಂದ ಮಾರ್ಗದುದ್ದಕ್ಕೂ ಸಾವಿರಾರು ಜೊತೆ ಚಪ್ಪಲಿ ಬಿಟ್ಟು ಹೋಗುವುದೂ ವಾಡಿಕೆಯಾಗಿ ನಡೆದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮ.ಬೆಟ್ಟದ ಪೊನ್ನಚ್ಚಿ ಜಂಕ್ಷನ್‍ನಿಂದ ಕೌದಳ್ಳಿವರೆಗಿನ ಅರಣ್ಯ ಮತ್ತು ರಸ್ತೆ ಬದಿಯ 18 ಕಿ.ಮಿ ದೂರದು ದ್ದಕ್ಕೂ ಅಪಾರ ಪ್ರಮಾಣದ ತ್ಯಾಜ್ಯ ಬಿಸಾಡಿ ಹೋಗಿದ್ದರು.

ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದಲ್ಲಿ ರಾಶಿಗಟ್ಟಲೆ ಬಿದ್ದಿದ್ದ ತ್ಯಾಜ್ಯ ಸಂಗ್ರಹಕ್ಕೆ ಡಿಸಿಎಫ್ ವಿ.ಏಡು ಕೊಂಡಲು ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿತ್ತು. ಮೂವರು ಆರ್‍ಎಫ್‍ಓ, ಹತ್ತಾರು ಡಿಆರ್‍ಎಫ್ ಹಾಗೂ ಅರಣ್ಯ ಇಲಾಖೆಯ 70 ಪ್ರೆಂಟ್‍ಲೈನ್ ಸಿಬ್ಬಂದಿಯೊಂದಿಗೆ ಮೈಸೂರು ಮಹಾ ರಾಜ ಕಾಲೇಜಿನ ಉಪನ್ಯಾಸಕ ಅನಿಲ್‍ಕುಮಾರ್ ನೇತೃತ್ವದಲ್ಲಿ 25 ವಿದ್ಯಾರ್ಥಿಗಳು, ಬೆಂಗಳೂರಿನಿಂದ 25 ಸ್ವಯಂಸೇವಕರು, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್, ಚಾಮರಾಜನಗರ, ಕೊಳ್ಳೇ ಗಾಲ, ಹನೂರಿನಿಂದ ಕೆಲವು ಸ್ವಯಂ ಸೇವಕರು ಭಾನುವಾರ ಬೆಳಿಗ್ಗೆ 6.30 ಮಧ್ಯಾಹ್ನ 2.30ರವರೆಗೆ ಸತತ 8 ಗಂಟೆಗಳ ಕಾಲ 18 ಕಿ.ಮೀವರೆಗೂ ಬಿದ್ದಿದ್ದ ತ್ಯಾಜ್ಯ ಸಂಗ್ರಹಿಸಿದರು. ಸುಮಾರು 8 ಲಾರಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿ ಸೇರಿದಂತೆ ಪರಿಸರ ಹಾಗೂ ವನ್ಯಜೀವಿಗಳ ಮೇಲೆ ಮಾರಕ ಪ್ರಭಾವ ಬೀರುವ ವಸ್ತುಗಳನ್ನು ಸಂಗ್ರಹಿಸಲಾಯಿತು.

ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಡಿಸಿಎಫ್ ವಿ.ಏಡು ಕೊಂಡಲು ಮಾತನಾಡಿ, ಬೆಟ್ಟಕ್ಕೆ ಬರುವ ಭಕ್ತರು ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ಹಿತಕಾಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲಾಗಿತ್ತು. ಜಾಗೃತಿ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆದರೂ ಭಕ್ತರು ಮಾರ್ಗ ದುದ್ದಕ್ಕೂ ಚಪ್ಪಲಿ, ವಿವಿಧ ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ಎಸೆದು ಹೋಗಿದ್ದರು. ಇದು ಪರಿಸರ ಹಾಗೂ ವನ್ಯಜೀವಿಗಳ ಮೇಲೆ ವ್ಯಾಪಕವಾದ ದುಪ್ಟರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರನ್ನು ಒಳಗೊಂಡತೆ 130ಕ್ಕೂ ಹೆಚ್ಚುಮಂದಿ ಶ್ರಮಧಾನ ಮಾಡಿ ತ್ಯಾಜ್ಯ ಸಂಗ್ರಹಿಸಲಾಗಿದೆ. ಭಕ್ತರು ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಸಹಕರಿಸಬೇಕು. ಅರಣ್ಯ ಪ್ರದೇಶವಿದ್ದರೆ, ನಾವು ಉತ್ತಮ ಜೀವನ ನಡೆಸ ಬಹುದು. ಇದರ ಅರಿವು ಎಲ್ಲರಲ್ಲೂ ಮೂಡಬೇಕು ಎಂದರು. ಮ.ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾತನಾಡಿ, ಈಗಾಗಲೇ ಅರಣ್ಯದ ಹಾದಿಯಲ್ಲಿ ಇದ್ದ ಅಪಾರ ಪ್ರಮಾಣ ಚಪ್ಪಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರು ಪ್ಲಾಸ್ಟಿಕ್ ಬಾಟಲ್ ಬದಲು ಸ್ಟಿಲ್ ಬಾಟಲ್‍ಗಳನ್ನು ಉಪಯೋಗಿಸು ವಂತೆ ಅರಿವನ್ನು ಮೂಡಿಸಲಾಗುವುದು. ಜೊತೆಗೆ ಅಲ್ಲಲ್ಲಿ ಭಕ್ತರ ಅನುಕೂಲಕ್ಕೆ ನೀರನ್ನು ಒದಗಿಸುವ ವ್ಯವಸ್ಥೆ ಮಾಡುವ ಮೂಲಕ ಇದನ್ನು ಪ್ಲಾಸ್ಟಿಕ್ ಬಾಟಲ್‍ನ್ನು ಬಳಕೆ ಮಾಡುವುದನ್ನು ತಡೆಗಟ್ಟಬಹುದು ಎಂದರು. ಅಭಿಯಾನದಲ್ಲಿ ವಿವಿಧ ವಲಯಗಳ ಆರ್‍ಎಫ್‍ಓಗಳಾದ ರಾಜೇಶ್ ಗವಾಲ್, ಸುಂದರ್, ನದಾಫ್ ಇನ್ನಿತರರು ಉಪಸ್ಥಿತರಿದ್ದರು.

Translate »