ಕೆ.ಆರ್.ಪೇಟೆ, ಏ.9- ತಾಲೂಕಿನ ತೆಂಡೇಕೆರೆ ಬಳಿ ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ನಮಗೆ ಕೊರೊನಾ ಇದೆ ಮುಟ್ಟಿದ್ರೆ ನಿಮಗೂ ಬರುತ್ತದೆ ಎಂದು ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಆರ್.ಪೇಟೆ ಸಿಪಿಐ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಎಸ್ಐ ಲಕ್ಷ್ಮಣ್ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ತಾಲೂಕಿನ ಬಳ್ಳೇಕೆರೆ ಗ್ರಾಮದ ಮಹೇಶ್, ಅಭಿಷೇಕ್ ಮತ್ತು ಶ್ರೀನಿವಾಸ್ ಎಂಬ ಯುವಕರನ್ನು ಬಳ್ಳೇಕೆರೆ ಗ್ರಾಮದಲ್ಲಿ ಬಂಧಿಸಿದ್ದಾರೆ. ಇದರಿಂದಾಗಿ ತಾಲೂಕಿನ ಜನತೆಯಲ್ಲಿ ಉಂಟಾಗಿದ್ದ ಆತಂಕವನ್ನು ಗ್ರಾಮಾಂತರ ಪೊಲೀಸರು ದೂರ ಮಾಡಿದ್ದಾರೆ.
ಬಂಧಿತರ ಪೈಕಿ ಮಹೇಶ್ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದು, ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಬಂದಿದ್ದ. ಹಾಗಾಗಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಹೇಶ್ ಕೈಗೆ ಗ್ರಾಪಂನವರು ಸೀಲ್ ಹಾಕಿ ಹೋಂ ಕ್ವಾರಂಟೈನ್ನಲ್ಲಿರುವಂತೆ ಸಲಹೆ ನೀಡಿದ್ದರು. ಆದರೆ ಮಹೇಶ್ ಹೋಂ ಕ್ವಾರಂಟೈನ್ ಧಿಕ್ಕರಿಸಿ ಸ್ನೇಹಿತರಾದ ಶ್ರೀನಿವಾಸ್ ಮತ್ತು ಅಭಿಷೇಕ್ರೊಂದಿಗೆ ಚಿನಕುರಳಿಗೆ ತೆರಳಿ ವಾಪಸ್ ಬರುವಾಗ ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಸೀಲ್ ನೋಡಿ ಹಿಡಿದುಕೊಳ್ಳುತ್ತಾರೆ ಎಂಬ ಭಯದಿಂದ ನಮಗೆ ಕೊರೊನಾ ಇದೆ. ಮುಟ್ಟಿದರೆ ನಿಮಗೂ ಕೊರೊನಾ ಬರುತ್ತದೆ ಎಂದು ಕೈಯಲ್ಲಿದ್ದ ಸೀಲ್ ತೋರಿಸಿ ಚೆಕ್ಪೋಸ್ಟ್ನಲ್ಲಿ ಕಾರ್ಯನಿರತ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಆಟೋದಲ್ಲಿ ಈ ಮೂವರೂ ಪರಾರಿಯಾಗಿದ್ದರು.
ವಿಷಯ ತಿಳಿಯುದ್ದಂತೆಯೇ ತಹಸೀಲ್ದಾರ್ ಎಂ. ಶಿವಮೂರ್ತಿ, ಸಿಪಿಐ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಎಸ್ಐ ಲಕ್ಷ್ಮಣ್ ಮತ್ತಿತರರ ಅಧಿಕಾರಿಗಳು ಕೆ.ಆರ್.ಪೇಟೆ ತಾಲೂಕಿಗೆ ಬರುವ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಿ ಚೆಕ್ಪೋಸ್ಟ್ ನೌಕರರು ಯುವಕರ ಬಗ್ಗೆ ನೀಡಿದ ಚಹರೆ ಮಾಹಿತಿಯನ್ನಾದರಿ ಕಾರ್ಯಾ ಚರಣೆ ನಡೆಸಿ ಆಟೋ ಸಮೇತ ಯುವಕರನ್ನು ಬಂಧಿಸಿದ್ದಾರೆ.