ಮೈಸೂರು, ಜೂ.23(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮೂಲಕ ಭೂಮಿ ಖರೀದಿಗೆ ಇದ್ದ ಆದಾಯ ಮಿತಿಯನ್ನು ಹೆಚ್ಚಿಸಿ ಕಾಯ್ದೆಯನ್ನು ಬಲಹೀನಗೊಳಿಸಿ ದರೆ, ಇದೀಗ ಬಿಜೆಪಿ ಸರ್ಕಾರ ತಿದ್ದುಪಡಿ ಮೂಲಕ ಕಾಯ್ದೆಯನ್ನು ಪೂರ್ಣ ದುರ್ಬಲಗೊಳಿಸಲು ಹೊರ ಟಿದೆ. ಆ ಮೂಲಕ ಬಿಜೆಪಿ ಸರ್ಕಾರ, ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ನಾಶ ಮಾಡಲು ಮುಂದಾಗಿದೆ ಎಂದು ಆಲ್ ಇಂಡಿಯಾ ಕ್ರಾಂತಿಕಾರಿ ಕಿಸಾನ್ ಸಭಾ (ಎಐಕೆಕೆಎಸ್) ಕರ್ನಾಟಕ ಘಟಕ ಖಂಡಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿ ನಡೆಸಿದ ಎಐಕೆಕೆಎಸ್ ರಾಜ್ಯ ಉಪಾಧ್ಯಕ್ಷ ಕಂದೇಗಾಲ ಶ್ರೀನಿವಾಸ್, ರಾಜ್ಯ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳು, ವಿದೇಶಿ ಕಾರ್ಪೋರೇಟ್ ಕಂಪನಿಗಳಿಗೆ ಭೂಮಿ ನೀಡಿ ಇಡೀ ಒಕ್ಕಲುತನವನ್ನು ನಾಶ ಮಾಡಲು ಹೊರಟಿದೆ. ಕೃಷಿಯೇ ತರ ಮೂಲಗಳಿಂದ 2 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ ವ್ಯಕ್ತಿ ಕೃಷಿ ಭೂಮಿ ಖರೀದಿಸಲು ಕಾಯ್ದೆ ಯಲ್ಲಿ ಅವಕಾಶ ಇರಲಿಲ್ಲ. ಆದರೆ ಇದಕ್ಕೆ ತಿದ್ದುಪಡಿ ತಂದು ಆದಾಯ ಮಿತಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ 25 ಲಕ್ಷ ರೂ.ಗೆ ವಿಸ್ತರಿಸಿತು. ಆ ಮೂಲಕ ಕಾಂಗ್ರೆಸ್ ಸರ್ಕಾರ ಕಿಟಕಿ ಬಾಗಿಲು ತೆರೆದರೆ, ಇದೀಗ ಬಿಜೆಪಿ ಸರ್ಕಾರ ಹೆಬ್ಬಾಗಿಲು ತೆರೆಯಲು ಮುಂದಾಗುವ ಮೂಲಕ ಕಾಯ್ದೆಯ ಅಸ್ತಿತ್ವವನ್ನೇ ಇಲ್ಲದಂತೆ ಮಾಡಲು ಹೊರಟಿದೆ ಎಂದು ಆಪಾದಿಸಿದರು.
ಕೇಂದ್ರ ಸರ್ಕಾರ ಗುತ್ತಿಗೆ ಕೃಷಿ ಪದ್ಧತಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆ ಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ಯೋಗ್ಯ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾ ರವೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಇದರಿಂದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಭೂ ಹಿಡುವಳಿದಾರರು ಭೂಮಿ ಕಳೆದು ಕೊಂಡು ನಿರ್ಗತಿಕರಾಗುವರು. ಕೂಡಲೇ ಸರ್ಕಾರ ತಿದ್ದುಪಡಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಬೊಕ್ಕ ಹಳ್ಳಿ ನಂಜುಂಡಸ್ವಾಮಿ, ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ನಗರ್ಲೆ ವಿಜಯಕುಮಾರ್, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಮುಖಂಡ ಮಹದೇವಸ್ವಾಮಿ ಬೊಕ್ಕಹಳ್ಳಿ ಗೋಷ್ಠಿಯಲ್ಲಿದ್ದರು.
ಭೂರಹಿತರಿಗೆ ನೀಡಿ
ಭೂಮಿತಿ ಕಾಯ್ದೆ ಪ್ರಕಾರ ಒಂದು ಕುಟುಂ ಬಕ್ಕೆ `ಎ’ ದರ್ಜೆ ಭೂಮಿ 13 ಎಕರೆ, `ಬಿ’ ದರ್ಜೆ ಭೂಮಿ 19 ಎಕರೆ, `ಸಿ’ ದರ್ಜೆ ಭೂಮಿ 30 ಎಕರೆ ಹಾಗೂ `ಡಿ’ ದರ್ಜೆ ಭೂಮಿ 54 ಎಕರೆ ಒಡೆತನ ಮೀರುವಂತಿಲ್ಲ. ಆದರೆ ಈ ನಿಯಮ ಮೀರಿ ಸಾವಿ ರಾರು ಎಕರೆ ಭೂಮಿಯುಳ್ಳ ಕುಟುಂಬಗಳು ರಾಜ್ಯದಲ್ಲಿವೆ. ಮಲೆನಾಡು ಪ್ರದೇಶದಲ್ಲಿ 10 ಸಾವಿರ ಎಕರೆ ಭೂಮಿ ಹೊಂದಿದ ಜಮೀನ್ದಾರರಿದ್ದಾರೆ. ಕೊಡಗು ಜಿಲ್ಲೆಯಲ್ಲೇ ಕಂಪನಿ ಹೆಸರಿನಲ್ಲಿ 50 ಸಾವಿರ ಎಕರೆ ಭೂಮಿ ಇದೆ. ಇಂತಹ ಹೆಚ್ಚುವರಿ ಭೂಮಿ ವಶಪಡಿಸಿಕೊಂಡು ನಿಜವಾದ ಭೂಹೀನ ಬಡವರಿಗೆ ಹಂಚಲು ಸರ್ಕಾರ ಮುಂದಾಗಬೇಕೆ ಹೊರತು ಕಂಪನಿಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಭೂಮಿ ನೀಡುವ ರೀತಿಯಲ್ಲಿ ತಿದ್ದುಪಡಿ ತರುವುದು ಸರಿಯಲ್ಲ. -ಕಂದೇಗಾಲ ಶ್ರೀನಿವಾಸ್