ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇನ್ನಿಲ್ಲ
ಮೈಸೂರು

ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇನ್ನಿಲ್ಲ

September 7, 2020

ನವದೆಹಲಿ: ಕೇರಳದ ಕೇಶವಾನಂದ ಭಾರತಿ ಸ್ವಾಮೀಜಿ(80) ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕೇರಳದ ಕಾಸರಗೂಡಿನ ಶಂಕರಾ ಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾಗಿದ್ದ ಶ್ರೀಗಳು 1940ರ ಡಿ.9ರಂದು ಜನಿಸಿದರು. ಇವರು ಯಕ್ಷಗಾನ ಮೇಳ ಕಟ್ಟಿ ಪೌರಾಣಿಕ ಪ್ರಸಂಗ ಪ್ರದರ್ಶನಗಳನ್ನು ಬೆಳಸಿದ್ದು, ಸ್ವಯಂ ಭಾಗವತಿಗೆ ನಿರ್ವಹಿಸಿದ್ದ ಕಲಾ ವಿದರಾಗಿದ್ದು, ಶ್ರೀ ಸಂತಾನ ಗೋಪಾಲ ಕೃಷ್ಣ ದಕ್ಷಿಣ ಮೂರ್ತಿಯ ಶ್ರದ್ಧೆಯ ಆರಾಧಕರಾಗಿದ್ದರು. ಹೀಗೆ ಹಲವು ವಿಚಾರಗಳಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರನ್ನು ಜನರು ಸ್ಮರಿಸುತ್ತಾರೆ. ಈ ಎಲ್ಲಾ ನೆನೆಪುಗಳನ್ನು ಉಳಿಸಿ ಹೋದವರು ಭಾರತೀ ಸ್ವಾಮೀಜಿ. ಭಾರತೀಯ ಸಂವಿಧಾನದ ಮೂಲಹಕ್ಕುಗಳ ಕುರಿತಾದ ವಿಚಾರಣೆ ಸಂದರ್ಭ ದಲ್ಲಿ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಒಂದು ಹೆಗ್ಗುರುತಾಗಿದೆ. 1973 ರಲ್ಲಿ ಅವರು ಪ್ರಶ್ನಿಸಿದ್ದ ಕೇರಳ ಭೂ ಸುಧಾರಣಾ ಕಾನೂನಿನಲ್ಲಿನ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಸ್ವಾಮೀಜಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ನಾನಿ ಪಾಲ್ಖಿವಾಲಾ ಅವರು ಈ ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸಿದರು. ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಂತಾಪ: ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ದೈವಾದಿನರಾಗಿದ್ದಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು. ಸಾಹಿತ್ಯ, ಸಂಗೀತ ದಲ್ಲಿ ಪ್ರಾವೀಣ್ಯತೆ ಪಡೆದಿದ್ದ ಅವರು, ಪಾರಲೌಕಿಕ ಅರ್ಥದಲ್ಲಿ ಮುಮುಕ್ಷುಗಳಾಗಿದ್ದಷ್ಟೆ ಪ್ರಕರವಾಗಿ ಲೌಕಿಕದಲ್ಲಿಯೂ ಸಮಾಜ ಮುಖಿಗಳಾಗಿ ಬದುಕಿದವರು. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರಿಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧ ಇತ್ತು. ಹಲವು ಬಾರಿ ಶ್ರೀ ಮಠಕ್ಕೆ ಭೇಟಿ ನೀಡಿದ್ದರು. ಅವರ ಮಠಕ್ಕೂ ನಮ್ಮನ್ನು ಆಹ್ವಾನಿಸಿದ್ದರು. ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಭಾರತೀ ಶ್ರೀಗಳು ಸಂಗೀತ ಕಚೇರಿ ನಡೆಸಿಕೊಟ್ಟಿದ್ದು, ಸ್ಮರಣೀಯ. ದೈವಾಧೀನರಾಗಿರುವ ಶ್ರೀಗಳ ಆತ್ಮಕ್ಕೆ ಭಗವತ್ಸಾ ಯುಜ್ಯ ದೊರಕಲಿ ಎಂದು ತಿಳಿಸಿದ್ದಾರೆ.

Translate »