ಮೈಸೂರು, ಸೆ.6(ಆರ್‍ಕೆಬಿ)- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೈಗೆತ್ತಿಕೊಳ್ಳ ಲಾದ 156 ಕೋಟಿ ರೂ. ಅಂದಾಜು ವೆಚ್ಚದ `ಅಮೃತ್ ಯೋಜನೆ’ಯ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ವಿಳಂಬವಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ, ಮಾಜಿ ಮೇಯರ್ ಪುರು ಷೋತ್ತಮ್, ನಿವೃತ್ತ ಅಧೀಕ್ಷಕ ಇಂಜಿನಿಯರ್ ನಾಗರಾಜ ಮೂರ್ತಿ ಇಂದಿಲ್ಲಿ ಜಂಟಿಯಾಗಿ ಆರೋಪಿಸಿದರು.
2016ರಲ್ಲಿ ಅನುಮೋದನೆಗೊಂಡ ಅಮೃತ್ ಯೋಜ ನೆಯ ಪ್ಯಾಕೇಜ್ 2ರ ಕಾಮಗಾರಿಯಲ್ಲಿ 102 ಕೋಟಿ ರೂ.ಗಳ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಗುತ್ತಿಗೆ ದಾರರೊಬ್ಬರಿಗೆ ವಹಿಸಲಾಗಿತ್ತು. 2017ರ ಫೆಬ್ರವರಿಯಲ್ಲಿ ಪ್ರಾರಂಭವಾಗಿ 2019 ಆಗಸ್ಟ್‍ಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದ್ದ ರಿಂದ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆ ಕರಾರು ಪ್ರಕಾರ ಕಾನೂನು ಕ್ರಮ ಕೈಗೊಂಡು ಶೇ.10ರಷ್ಟು ಲಿಕ್ವಿಡ್ ಡ್ಯಾಮೇಜ್ ದಂಡ ವಿಧಿಸಿದ್ದರೆ ಸರ್ಕಾರಕ್ಕೆ 11 ಕೋಟಿ ರೂ. ಲಭಿಸುತ್ತಿತ್ತು. ಆದರೆ ಕಾನೂನನ್ನು ಗಾಳಿಗೆ ತೂರಿ ಕೇವಲ ರೂ. 1 ಕೋಟಿ ದಂಡ ವಿಧಿಸಿ, ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ. ಈ ಸಂಬಂಧ ಆಯುಕ್ತರು ಮತ್ತು ನಗರ ಪಾಲಿಕೆ ಅಧಿಕಾರಿ ಗಳು ಸರ್ಕಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪತ್ರ ವ್ಯವಹಾರ ಮಾಡಿದ್ದರೂ ಸರ್ಕಾರಿ ನೀತಿ ನಿಯಮ ಉಲ್ಲಂಘನೆ ಮಾಡಿ ಗುತ್ತಿಗೆದಾರರೊಂದಿಗೆ ಕೈಜೋಡಿಸಿ ಸಮಯ ವಿಸ್ತರಣೆ ಇಲ್ಲದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿದರು.
ಎಲ್ಲಾ ತಪ್ಪು ಮುಚ್ಚಿಹಾಕಲು ಅಧಿಕಾರಿಗಳು ಇತ್ತೀಚೆಗೆ ಸಂಸದ ಪ್ರತಾಪ್‍ಸಿಂಹ ಅವರಿಗೆ ಹೊಂಗಳ್ಳಿ 3ನೇ ಹಂತದ ಕಾಮಗಾರಿ ಬಗ್ಗೆ ಸಮಗ್ರ ಮಾಹಿತಿ ನೀಡದೆ ಅವರನ್ನು ಪರಿಶೀಲನೆಗೆಂದು ಕರೆದೊಯ್ದರು. ಕೇವಲ ಫಿಲ್ಟರ್ ಬೆಡ್ ತೋರಿಸಿ, ಬ್ಯಾಕ್ ವಾಷ್ ಮಾಡದೆ ಅಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಮಾಹಿತಿ ಮರೆ ಮಾಚಿದ್ದಾರೆ ಎಂದು ದೂರಿದರು.
2ನೇ ಹಂತದ ಕಾಮಗಾರಿ ಪ್ರಾರಂಭಿಸದಿರುವ ವಿಚಾರ ವನ್ನು ಸಂಸದರ ಗಮನಕ್ಕೆ ತರದಿರುವುದು ಖಂಡನಾರ್ಹ ವಿಚಾರ. ವಿಜಯನಗರಕ್ಕೆ ಬರುವ ಕೊಳವೆ ಮಾರ್ಗದಲ್ಲಿ 11 ಗ್ಯಾಪ್‍ಗಳ ಉಳಿಕೆ ಕೆಲಸ ಬಾಕಿ ಇದ್ದು ಪೈಪ್‍ಗಳನ್ನು ಅಳವಡಿಸದಿರುವುದು ಕಂಡು ಬಂದಿದೆ. ದಸರಾಕ್ಕೆ ಮುನ್ನ ನೀರನ್ನು ವಿಜಯನಗರಕ್ಕೆ ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ಮೂರು ವರ್ಷಗಳಿಂದ ಆಗದ ಕೆಲಸ ಕೇವಲ 40 ದಿನದೊಳಗೆ ನಿರ್ವಹಿಸುತ್ತೇವೆ ಎಂದು ಹೇಳುವ ಮೂಲಕ ಅಧಿಕಾರಿಗಳು ಸತ್ಯಕ್ಕೆ ದೂರವಾದ ವಿಚಾರ ತಿಳಿಸಿ ಜನರನ್ನು ಮೂರ್ಖರನ್ನಾಗಿಸುವ ಯತ್ನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಖುದ್ದು ನಾವು ಸ್ಥಳ ಪರಿಶೀಲನೆ ನಡೆಸಿದ್ದು, ಹೊಂಗಳ್ಳಿ ಯಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದಿದೆ. ಈ ತಪ್ಪಿಗೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅವ ರಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಸಂಚಾಲಕ ಸೋಮಯ್ಯ ಮಲೆಯೂರು ಸುದ್ದಿಗೋಷ್ಠಿಯಲ್ಲಿದ್ದರು.