ಗೋಕರ್ಣ ಬೀಚ್‍ನಲ್ಲಿ ಕೊಳ್ಳೇಗಾಲ ಯುವತಿ ಸೇರಿ ಮೂವರು ಸಮುದ್ರ ಪಾಲು
ಮೈಸೂರು

ಗೋಕರ್ಣ ಬೀಚ್‍ನಲ್ಲಿ ಕೊಳ್ಳೇಗಾಲ ಯುವತಿ ಸೇರಿ ಮೂವರು ಸಮುದ್ರ ಪಾಲು

January 22, 2021

ಗೋಕರ್ಣ, ಜ.21-ಬೀಚ್‍ನಲ್ಲಿ ಆಟವಾಡುತ್ತಿದ್ದಾಗ ಕೊಳ್ಳೇಗಾಲ ಮೂಲದ ಯುವತಿ ಸೇರಿ ಮೂವರು ಸಮು ದ್ರದ ಪಾಲಾದ ಘಟನೆ ಇಲ್ಲಿನ ಮೇನ್ ಬೀಚ್‍ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮೂಲತಃ ಕೊಳ್ಳೇಗಾಲ ತಾಲೂಕು ಉತ್ತಂಬಳ್ಳಿ ಗ್ರಾಮದ ನಿವಾಸಿ ಯಾಗಿದ್ದು, ಹಾಲಿ ಆನೆಕಲ್ ತಾಲೂಕು ಹೆಬ್ಬಗೋಡಿ ತಿರುಪಾಳ್ಯದ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸುಮಾ(22), ಅದೇ ಗಾರ್ಮೆಂಟ್ಸ್‍ನ ಕಾರ್ಮಿಕ ತಿಪ್ಪೇಸ್ವಾಮಿ(21) ಮತ್ತು ಬೆಂಗಳೂರಿನ ಆದಿಗೊಂಡನಹಳ್ಳಿಯ ರವಿಕುಮಾರ್(40) ಮೃತಪಟ್ಟವರು. ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 16 ಮಂದಿಯ ತಂಡ ಆನೆಕಲ್‍ನಿಂದ ಗೋಕರ್ಣ ಪ್ರವಾಸಕ್ಕೆ ಹೋಗಿತ್ತು. ಇಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ತಿಪ್ಪೇಸ್ವಾಮಿ ಬೀಚ್‍ನ ನೀರಿನಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗಳು ಆತನನ್ನು ಸೆಳೆದಿವೆ. ಅದನ್ನು ಕಂಡ ಸುಮಾ, ರವಿಕುಮಾರ್, ರತ್ನಮ್ಮ ಮತ್ತು ಪವಿತ್ರಾ ಅವರುಗಳು ತಿಪ್ಪೇಸ್ವಾಮಿಯನ್ನು ರಕ್ಷಿಸಲು ಸಮುದ್ರಕ್ಕೆ ಇಳಿದಾಗ ಅವರನ್ನೂ ಕೂಡ ಅಲೆಗಳು ಸೆಳೆದಿವೆ. ಸ್ಥಳೀಯರು ರತ್ನಮ್ಮ ಮತ್ತು ಪವಿತ್ರಾ ಅವರನ್ನು ರಕ್ಷಿಸಿದ್ದು, ಸುಮಾ ಮತ್ತು ರವಿಕುಮಾರ್ ಕೂಡ ಅಲೆಗಳ ಸೆಳೆತಕ್ಕೆ ಸಿಲುಕಿ ತಿಪ್ಪೇಸ್ವಾಮಿ ಜೊತೆ ಸಮುದ್ರ ಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದು, ಗೋಕರ್ಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

Translate »