ನಗರ ಪಾಲಿಕೆಗೆ ಹಸ್ತಾಂತರವಾಗಿರುವ ಎಲ್ಲಾ ಬಡಾವಣೆಗಳ ಅಭಿವೃದ್ಧಿಗೂ ಕ್ರಮ ವಹಿಸಲು ಮನವಿ
ಮೈಸೂರು

ನಗರ ಪಾಲಿಕೆಗೆ ಹಸ್ತಾಂತರವಾಗಿರುವ ಎಲ್ಲಾ ಬಡಾವಣೆಗಳ ಅಭಿವೃದ್ಧಿಗೂ ಕ್ರಮ ವಹಿಸಲು ಮನವಿ

January 22, 2021

ಮೈಸೂರು, ಜ.21- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಗರ ಪಾಲಿಕೆಗೆ ಹಸ್ತಾಂತರವಾಗಿರುವ ಎಲ್ಲಾ ಬಡಾವಣೆಗಳ ಅಭಿವೃದ್ಧಿಗೆ ವಿಶೇಷ ಕಾರ್ಯ ಯೋಜನೆ ರೂಪಿಸುವುದು ಸೂಕ್ತ ಎಂದು ಮಾಜಿ ಮೇಯರ್ ಸಂದೇಶ್‍ಸ್ವಾಮಿ ಅಭಿಪ್ರಾಯಿಸಿದ್ದಾರೆ.

ದಶಕಗಳ ಹಿಂದೆ ರಚನೆಯಾಗಿರುವ ವಿಜಯನಗರ 4ನೇ ಹಂತ, ಆರ್.ಟಿ.ನಗರ, ಶಾಂತವೇರಿ ಗೋಪಾಲಗೌಡನಗರ ಸೇರಿದಂತೆ ಇನ್ನಿತರೆ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಆಸಕ್ತಿ ತೋರಿರುವುದು ಸ್ವಾಗತಾರ್ಹ. ಆದರೆ ಇದೇ ರೀತಿ ಮುಡಾ ಅನುಮತಿಯೊಂದಿಗೆ ನಿರ್ಮಾಣವಾಗಿ ಪಾಲಿಕೆಗೆ ಹಸ್ತಾಂತರವಾಗಿರುವ ದಟ್ಟಗಳ್ಳಿ, ಶಕ್ತಿನಗರ, ಜೆಎಸ್‍ಎಸ್ ಬಡಾವಣೆ, ವಿದ್ಯಾಶಂಕರ ಬಡಾವಣೆ, ಆರ್‍ಎಂಎಸ್ ಬಡಾವಣೆಗಳತ್ತಲೂ ಸೇರಿದಂತೆ 140ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಬಡಾವಣೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದಿ ರುವುದು ವಿಷಾದನೀಯ. ನಿನ್ನೆಯಷ್ಟೇ ಸೆಸ್ಕ್ ಸಿಬ್ಬಂದಿ ವಿದ್ಯಾಶಂಕರ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬಡಾವಣೆ ಹಸ್ತಾಂತರ ಮಾಡಿಕೊಂಡಿರುವ ಪಾಲಿಕೆಯಿಂದಲೂ ಸಮ ರ್ಪಕ ವಾಗಿ ಕೆಲಸಗಳಾಗುತ್ತಿಲ್ಲ. ಎಲ್ಲಾ ಸೌಕರ್ಯಗಳಿರುವ ಬಡಾವಣೆ ಗಳನ್ನು ಮಾತ್ರ ಹಸ್ತಾಂತರ ಮಾಡಿಕೊಳ್ಳಬೇಕೆಂಬ ನಿಯಮ ಮೀರಿ 2016-17ರಲ್ಲಿ 143 ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಿ ಕೊಳ್ಳಲಾಗಿದೆ. ತಮ್ಮ ಜೀವಮಾನದ ಉಳಿತಾಯದಲ್ಲೋ ಅಥವಾ ಸಾಲ ಮಾಡಿಯೋ ಈ ಬಡಾವಣೆಗಳಲ್ಲಿ ನಿವೇಶನ ಖರೀದಿಸಿರು ವವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ರುವ ಸಂದೇಶ್ ಸ್ವಾಮಿ, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ಈ ಎಲ್ಲಾ ಬಡಾವಣೆಗಳ ಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆ ರೂಪಿಸಿ, ಪಾಲಿಕೆ ಹಾಗೂ ಮುಡಾ ಸಮನ್ವಯತೆಯೊಂದಿಗೆ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

Translate »