ಒಲ್ಲದ ಮನಸ್ಸಿನಿಂದ ಜೆಕೆ ಮೈದಾನದಲ್ಲಿ ವಹಿವಾಟು ಆರಂಭ
ಮೈಸೂರು

ಒಲ್ಲದ ಮನಸ್ಸಿನಿಂದ ಜೆಕೆ ಮೈದಾನದಲ್ಲಿ ವಹಿವಾಟು ಆರಂಭ

April 12, 2021

ಮೈಸೂರು,ಏ.11(ಪಿಎಂ)- ಯುಗಾದಿ ಹಬ್ಬದ ಕಾರಣ ದೇವರಾಜ ಮಾರುಕಟ್ಟೆ ಯಲ್ಲಿ ಜನಸಂದಣಿ ಉಂಟಾಗುವುದನ್ನು ನಿಯಂತ್ರಿಸಿ, ಕೋವಿಡ್ ತಡೆಗಟ್ಟುವ ಸಲುವಾಗಿ ಮಾರುಕಟ್ಟೆಯ ಹೂವಿನ ವ್ಯಾಪಾರವನ್ನು ಸ್ಥಳಾಂತರಗೊಳಿಸಿರುವ ಜೆಕೆ ಮೈದಾನದಲ್ಲಿ ಭಾನುವಾರ ಒಲ್ಲದ ಮನಸ್ಸಿನಿಂದ ಹೂ ವ್ಯಾಪಾರಸ್ಥರು ವಹಿವಾಟು ಆರಂಭಿಸಿದರು.

ಮಾರುಕಟ್ಟೆಯ ಹೂವಿನ ವ್ಯಾಪಾರವನ್ನು ಏ.13ರವರೆಗೆ 3 ದಿನಗಳು ಜೆಕೆ ಮೈದಾನಕ್ಕೆ ಸ್ಥಳಾಂತರಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿ ದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಜೆಕೆ ಮೈದಾನದಲ್ಲಿ ಹೂ ವ್ಯಾಪಾರ ಆರಂ ಭಿಸಿದ ವ್ಯಾಪಾರಸ್ಥರು, ಪ್ರತಿ ಬಾರಿಯೂ ಹಬ್ಬಗಳ ಸಂದರ್ಭದಲ್ಲಿ ಹೀಗೆ ಸ್ಥಳಾಂತರ ಮಾಡುತ್ತಾರೆ. ಆದರೆ ಯಾವುದೇ ಮೂಲ ಭೂತ ಸೌಲಭ್ಯ ಮಾತ್ರ ಕಲ್ಪಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಬಾರಿಯಂತೆ ಈ ಬಾರಿಯೂ ನಗರ ಪಾಲಿಕೆಯಿಂದ ಯಾವುದೇ ಮೂಲ ಭೂತ ಸೌಲಭ್ಯ ಕಲ್ಪಿಸಿಲ್ಲ. ಪೆಂಡಾಲ್, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳಾಂತರ ಮಾಡಿದ ಪ್ರತಿ ಸಲವೂ ಮನವಿ ಮಾಡು ತ್ತಲೇ ಬಂದಿದ್ದೇವೆ. ಈವರೆಗೂ ನಮ್ಮ ಈ ಮನವಿಗೆ ಸ್ಪಂದಿಸಿಲ್ಲ ಎಂದು ವ್ಯಾಪಾ ರಸ್ಥರು ಕಿಡಿಕಾರಿದರು.

ಮಧ್ಯಾಹ್ನದವರೆಗೆ ಸಮಯವಕಾಶ ನೀಡಿ, ಪೆಂಡಾಲ್ ಹಾಕಿಸಿ, ಬಳಿಕ ಹೋಗು ತ್ತೇವೆ ಎಂದು ಮನವಿ ಮಾಡಿದರೂ ಬೆಳಗ್ಗೆಯೇ ಏಕಾಏಕಿ ಒತ್ತಾಯಪೂರ್ವಕ ವಾಗಿ ಸ್ಥಳಾಂತರ ಮಾಡಿಸಿದ್ದಾರೆ. ಈ ಬಿಸಿಲಿಗೆ ನಮ್ಮ ಹೂಗಳು ಅರ್ಧ ಗಂಟೆಯೂ ಇರುವುದಿಲ್ಲ. ಎಲ್ಲವೂ ಬಾಡಿ ಹೋಗು ತ್ತವೆ. ಬಂಡವಾಳ ಹಾಕಿ ಹಬ್ಬದಲ್ಲಿ ನಾಲ್ಕು ಕಾಸು ಸಂಪಾದನೆ ಮಾಡುವುದಕ್ಕೂ ಹೀಗೆ ತೊಂದರೆ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ವ್ಯಾಪಾರಸ್ಥರು ಹಾಗೂ ಹೂ ಬಿಸಿಲಿ ನಲ್ಲಿ ಒಣಗುವಂತಾಗಿದೆ. ಆದೇಶ ಮಾಡುವ ಅಧಿಕಾರಿಗಳು ನಮ್ಮೊಂದಿಗೆ ಇಲ್ಲಿ ಬಂದು ಕೂರಲಿ ಆಗ ಅವರಿಗೆ ನಮ್ಮ ಕಷ್ಟ ಅರಿ ವಾಗುತ್ತದೆ. ಈ ಹಬ್ಬದಲ್ಲಿ ಅಂತಹ ವ್ಯಾಪಾರ ಆಗುವುದಿಲ್ಲ. ಬೆಲೆ ಏರಿಕೆಯೂ ಆಗುವು ದಿಲ್ಲ. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಯಲ್ಲಿ ಗ್ರಾಹಕರು ಬರುವುದೂ ಕಡಿಮೆ. ಹೀಗಿರುವಾಗ ಸ್ಥಳಾಂತರದ ಅಗತ್ಯವಾ ದರೂ ಏನಿತ್ತು? ಪ್ರತಿ ಹಬ್ಬದಲ್ಲೂ ನಮ್ಮನೇ ಗುರಿ ಮಾಡುತ್ತಿದ್ದಾರೆ ಎಂದು ಹೂ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

ಪ್ರತಿ ಬಾರಿಯೂ ಸ್ವಂತ ಖರ್ಚಿನಲ್ಲೇ ಮೂಲಭೂತ ಸೌಲಭ್ಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನಾವೇ ಮಾಡಿಕೊಳ್ಳಬೇಕು ಎನ್ನುತ್ತಾರೆ. ದೇವರಾಜ ಮಾರುಕಟ್ಟೆ ಸೇರಿ ದಂತೆ ಮೈಸೂರು ನಗರದಲ್ಲಿ ಎಲ್ಲೆಡೆಯೂ ಜನದಟ್ಟಣೆ ಆಗುತ್ತಲೇ ಇದೆ. ಅಲ್ಲೆಲ್ಲಾ ಕೊರೊನಾ ಹರಡುವುದಿಲ್ಲವೇ? ಬೇರೆ ಸ್ಥಳ ಗಳಲ್ಲಿ ಜನದಟ್ಟಣೆ ಉಂಟಾದರೆ ಕೊರೊನಾ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.

ಬೆಳಗ್ಗೆಯೇ ಪಾಲಿಕೆ ಅಭಯ ಪಡೆ ಸಿಬ್ಬಂದಿ ನಮ್ಮನ್ನು ಸ್ಥಳಾಂತರಗೊಳಿಸುವ ನೆಪದಲ್ಲಿ ಹೂ ಚೆಲ್ಲಾಡಿ ರೌಡಿಗಳಂತೆ ವರ್ತಿ ಸಿದ್ದಾರೆ. ನಾವು ತಿರುಗಿ ಬೀಳಬಹುದು. ಆದರೆ ಅದರಿಂದ ಅನಾಹುತವಾಗುವ ಹಿನ್ನೆಲೆಯಲ್ಲಿ ತಾಳ್ಮೆ ತೆಗೆದುಕೊಂಡಿದ್ದೇವೆ ಎಂದು ಕಿಡಿಕಾರಿದರು.

ನಮ್ಮ ಹೊಟ್ಟೆಪಾಡು ಇವರಿಗೇಕೆ ಅರ್ಥ ವಾಗದು: ಮಹಿಳಾ ಹೂ ವ್ಯಾಪಾರಿ ಯೊಬ್ಬರು ಮಾತನಾಡಿ, ಬಿಸಿಲಿಗೆ ಹೂ ಎಲ್ಲಾ ಒಣಗಿ ನಮಗೆ ತುಂಬ ನಷ್ಟವಾಗು ತ್ತಿದೆ. ಅಧಿಕಾರಿಗಳು ಆದೇಶ ಮಾಡಿ ಸುಮ್ಮ ನಾಗುವ ಬದಲು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಕಣ್ಣಾರೆ ನೋಡಿ ಪರಿಹಾರ ಕಂಡು ಹಿಡಿಯಬೇಕು. ವರ್ಷಕ್ಕೊಂದು ಹಬ್ಬದಲ್ಲಿ ವ್ಯಾಪಾರ ಮಾಡಲು ಈ ರೀತಿ ತೊಂದರೆ ಕೊಡಬಾರದು. ವರ್ಷದಿಂದ ನಮ್ಮದು ಇದೇ ಹಣೆ ಬರಹವಾಗಿದೆ. ನಮ್ಮ ಹೊಟ್ಟೆಪಾಡು ಇವರಿಗೆ ಏಕೆ ಅರ್ಥವಾಗುವುದಿಲ್ಲ ಎಂದು ಪ್ರಶ್ನಿಸಿದರು.

ದೇವರಾಜ ಮಾರುಕಟ್ಟೆ ಹೂವಿನ ವ್ಯಾಪಾ ರಸ್ಥರ ಸಂಘದ ಮುಖಂಡ ಎನ್.ಮಂಜು ನಾಥ್ ಮಾತನಾಡಿ, 150 ಹೂ ಮಳಿಗೆ ಗಳು ದೇವರಾಜ ಮಾರುಕಟ್ಟೆಯಲ್ಲಿದ್ದು, ಈ ಪೈಕಿ ಅರ್ಧದಷ್ಟು ವ್ಯಾಪಾರಸ್ಥರು ಮಾತ್ರ ಜೆಕೆ ಮೈದಾನದಲ್ಲಿ ವಹಿವಾಟು ನಡೆಸು ತ್ತಿದ್ದು, ಉಳಿದವರು ಇಲ್ಲಿ ವ್ಯಾಪಾರ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಬಂದೇ ಇಲ್ಲ ಎಂದು ತಿಳಿಸಿದರು.

Translate »